ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (Water Crisis) ಜೋರಾಗುತ್ತಿದೆ. ಇದೀಗ ಬೇಸಿಗೆಯ ಮೊದಮೊದಲ ತಿಂಗಳು ಎನ್ನಬಹುದು. ಬೇಸಿಗೆಯಲ್ಲಿ ಇನ್ನೂ ಎರಡು ತಿಂಗಳುಗಳು ಬಾಕಿ ಇವೆ, ಈಗಲೇ ಜನತೆ ಕುಡಿಯುವ ನೀರಿನ ಕೊರತೆಯಿಂದ ತತ್ತರಿಸುತ್ತಿದ್ದಾರೆ. ನಗರದಲ್ಲಿ ಕೆಲವೆಡೆ 6000 ಲೀ. ಟ್ಯಾಂಕರ್‌ನೀರನ್ನು 2500 ಕೊಟ್ಟು ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಜಲಮಂಡಳಿ ಹೇಳುತ್ತಿದ್ದರೂ, ನೀರಿನ ಪೂರೈಕೆ ಸಾಕಷ್ಟು ಕಡಿಮೆಯಾಗಿದೆ ಎಂದು ನಗರವಾಸಿಗಳು ಆರೋಪಿಸುತ್ತಿದ್ದಾರೆ. ಇದರಿಂದಲೇ ಖಾಸಗಿ ಟ್ಯಾಂಕರ್‌ಗಳ ಮಾಫಿಯಾ ಶುರುವಾಗಿದೆ. ಬೆಂಗಳೂರಿನ ಆರ್.ಆರ್.ನಗರದಲ್ಲಿ 6000 ಲೀ. ಟ್ಯಾಂಕರ್ 2500 ರೂ., ಕೆ.ಆರ್.ಪುರದಲ್ಲಿ 1500 ರೂ., ನಾರಾಯಣಪುರದಲ್ಲಿ 1500 ರೂ., ಹಾಗೂ ವರ್ತೂರಿನಲ್ಲಿ 4000 ಲೀ.ಟ್ಯಾಂಕರ್ 800 ರೂ. ಇದೆ. ಟ್ಯಾಂಕರ್‌ಗಳ ನೋಂದಣಿಯನ್ನು ಜಲಮಂಡಳಿ ಕಡ್ಡಾಯ ಮಾಡಿದ್ದರೂ ಅರ್ಧದಷ್ಟೂ ನೋಂದಣಿಯಾಗಿಲ್ಲ. ಬೆಂಗಳೂರಿನ ಒಳಭಾಗಕ್ಕೇ ಹೆಚ್ಚಿನ ಕಾವೇರಿ ನೀರು ಬೇಕಾಗುವುದರಿಂದ ಹೊರಭಾಗಗಳಿಗೆ ಕಾವೇರಿ ನೀರು ಪೂರೈಸಲು ಸಾಧ್ಯವಿಲ್ಲ ಎಂದು ಜಲಮಂಡಳಿ ಹೇಳಿದೆ. ಕೆಆರ್‌ಎಸ್‍ನಲ್ಲಿ ಸಂಗ್ರಹವಾಗುವ ನೀರಿನಲ್ಲಿ ಬೆಂಗಳೂರು ನಗರ ಒಂದಕ್ಕೆ ಪ್ರತಿ ತಿಂಗಳು 1.6 ಟಿಎಂಸಿ ನೀರು ಬೇಕು. ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರಗಳಿಗೆ ಕಾವೇರಿ ನೀರೇ ಬೇಕು.
ನೀರಿನ ಪೋಲು ತಡೆಗಟ್ಟಲು ಜಲಮಂಡಳಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸ್ವಿಮ್ಮಿಂಗ್ ಪೂಲ್‌ಗಳಿಗೆ ಕುಡಿಯುವ ನೀರಿನ ಬಳಕೆಗೆ ಕಡಿವಾಣ, ಬೇಕಾಬಿಟ್ಟಿ ಹೋಳಿ ಆಚರಣೆಗೆ ನಿರ್ಬಂಧ, ಐಷಾರಾಮಿ ರೆಸಾರ್ಟ್‌ಗಳಲ್ಲಿ ರೈನ್ ಡ್ಯಾನ್ಸ್‌ಗಳಿಗೆ ನಿಷೇಧ, ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಫ್ಲೋ ರಿಸ್ಟ್ರಿಕ್ಟರ್ ಅಳವಡಿಕೆ, ಬೃಹತ್ ಸಂಸ್ಥೆಗಳಿಗೆ ನೀರಿನ ಪೂರೈಕೆಯಲ್ಲಿ ಶೇ.20 ಕಡಿತ ಮುಂತಾದ ಕ್ರಮಗಳನ್ನು ಕೈಗೊಂಡಿದೆ. ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜನೆಗಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ ಕುಡಿಯುವ ನೀರು ಬಳಸಿದರೆ ಭಾರಿ ದಂಡ ವಿಧಿಸಲಾಗುತ್ತಿದೆ. ಈಗಾಗಲೇ ಹೀಗೆ 1 ಲಕ್ಷ ರೂಪಾಯಿಗೂ ಅಧಿಕ ದಂಡವನ್ನು ಜಲಮಂಡಳಿ ವಸೂಲಿ ಮಾಡಿದೆ. ನೀರಿನ ಸಮಸ್ಯೆ ಆಲಿಸಲು ಕಂಟ್ರೋಲ್ ರೂಮ್‌ಗಳ ಸಂಖ್ಯೆ ಹೆಚ್ಚಿಸುವ ಮೂಲಕ ದೂರುಗಳು ಬಂದ ತಕ್ಷಣ ಸ್ಪಂದಿಸಿ, ನೀರು ಸರಬರಾಜು ಮಾಡಲು ಸೂಚಿಸಲಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತದ ನ್ಯಾಯಪ್ರಕ್ರಿಯೆಯಲ್ಲಿ ಅಮೆರಿಕದ ಹಸ್ತಕ್ಷೇಪ ಅಧಿಕ ಪ್ರಸಂಗತನ
ಇವೆಲ್ಲವೂ ಸರ್ಕಾರದ ಕಡೆಯಿಂದ ಆಗಿರುವ ಕ್ರಮಗಳು. ಆದರೆ ಇದು ಸಾಲದು ಜನ ಸ್ವಯಂಪ್ರೇರಿತರಾಗಿ ನೀರನ್ನು ಉಳಿಸಲು, ಹಿತಮಿತವಾಗಿ ಬಳಸಲು ಮುಂದಾಗುವುದೇ ನೀರಿನ ಕೊರತೆಗೆ ಸರಿಯಾದ ಪರಿಹಾರ. ವಾಹನ ತೊಳೆಯಲು ಕುಡಿಯುವ ನೀರನ್ನು ಬಳಸದಿರುವುದು, ಪಾತ್ರೆ ತೊಳೆದ ನೀರನ್ನು ಗಾರ್ಡನ್‌ಗೆ ಬಳಸುವುದು, ಮನೆ ಮತ್ತು ಕಚೇರಿಯಲ್ಲಿ ನೀರನ್ನು ದಕ್ಷವಾಗಿ ಬಳಸುವ ಸಲಕರಣೆಗಳ ಬಳಕೆ, ತ್ಯಾಜ್ಯ ನೀರಿನ ಮರುಬಳಕೆ, ಪಾತ್ರೆಗಳನ್ನು ತೊಳೆಯುವಾಗ ನಲ್ಲಿ ನೀರು ಆಫ್ ಮಾಡುವುದು, ಕಡಿಮೆ ಅವಧಿಯಲ್ಲಿ ಸ್ನಾನ ಮುಗಿಸುವುದು, ಬಳಕೆ ಮಾಡದಿದ್ದಾಗ ನಲ್ಲಿ ಆಫ್ ಮಾಡುವುದು, ಕಡಿಮೆ ಫ್ಲಶ್ ಮಾಡುವ ಟಾಯ್ಲೆಟ್‌ಗಳನ್ನು ಬಳಸುವುದು, ಫುಲ್ ಲೋಡ್‌ಗಳಿಗೆ ಮಾತ್ರ ಅಟೊಮ್ಯಾಟಿಕ್ ವಾಶಿಂಗ್ ಮಶಿನ್ ಬಳಸುವುದು, ಕೈತೋಟದಲ್ಲಿ ಕಡಿಮೆ ನೀರನ್ನು ಬಳಸುವ ಸಸ್ಯಗಳನ್ನು ಬೆಳೆಸುವುದು, ಮಳೆಕೊಯ್ಲು ವಿಧಾನಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳುವುದು- ಇನ್ನೂ ಮುಂತಾದ ಜಾಣ್ಮೆಯ ಕ್ರಮಗಳ ಮೂಲಕ ನೀರನ್ನು ಉಳಿಸಿಕೊಳ್ಳಬೇಕು.
ಇಂದು ಪ್ರತಿಯೊಬ್ಬರೂ ನೀರಿನ ಮಿತ ಬಳಕೆಯ ಬಗ್ಗೆ ಕೆಲಸ ಮಾಡಲೇಬೇಕಾದ ಕಾಲ ಬಂದಿದೆ. ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ. ಈಗಲೇ ಎಚ್ಚೆತ್ತುಕೊಂಡರೆ ಬೆಂಗಳೂರಿನ ಭವಿಷ್ಯದ ದಿನಗಳು ಸುಖಕರವಾದಾವು. ಇಲ್ಲವಾದರೆ ನಮ್ಮ ಮುಂದಿನ ತಲೆಮಾರು ನೀರಿಲ್ಲದೆ ನರಳುವುದನ್ನು ಕಾಣುವ ದುರ್ಭರ ಸ್ಥಿತಿ ನಮ್ಮದಾಗಲಿದೆ.