ವಿಸ್ತಾರ ನ್ಯೂಸ್ ಆರಂಭಿಸಿರುವ ‘ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ’ ಸರ್ಕಾರಿ ಶಾಲಾ ದತ್ತು ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಿಸ್ತಾರ ನ್ಯೂಸ್ ಮತ್ತು ಬಾಲ ಉತ್ಸವ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ವಿಧಾನಸೌಧದಲ್ಲಿ ಮಂಗಳವಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆಯ ಅಧಿಕಾರಿಗಳ ಮತ್ತು ವಿಸ್ತಾರ ನ್ಯೂಸ್ ಹಾಗೂ ಬಾಲ ಉತ್ಸವ ಸಂಸ್ಥೆಯ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಇದೊಂದು ಮಹತ್ವದ ಬೆಳವಣಿಗೆ.
ವಿಸ್ತಾರ ನ್ಯೂಸ್ ನ ಈ ಅಭಿಯಾನವನ್ನು ಕಳೆದ ನವೆಂಬರ್ ತಿಂಗಳಲ್ಲಿ ಶಿಕ್ಷಣ ಸಚಿವರೇ ಉದ್ಘಾಟಿಸಿದ್ದರು. ಇದುವರೆಗೆ 60ಕ್ಕೂ ಹೆಚ್ಚು ಗಣ್ಯರು ಪ್ರತಿದಿನ ಬೆಳಗ್ಗೆ ʼನ್ಯೂಸ್ ಮಾರ್ನಿಂಗ್ʼ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಆಗಮಿಸಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಲು ಬದ್ಧತೆ ಪ್ರದರ್ಶಿಸಿದ್ದಾರೆ. ಕುಡಚಿ ಶಾಸಕ ಪಿ.ರಾಜೀವ್ ಸೇರಿದಂತೆ ಹಲವರು ಅವರು ಓದಿದ ಪ್ರಾಥಮಿಕ ಶಾಲೆಗಳನ್ನು ಮಾದರಿ ಶಾಲೆಯಾಗಿ ರೂಪಿಸುವ ಪಣ ತೊಟ್ಟಿದ್ದು, ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ. ಇನ್ನು ಕೆಲವರು ಮಹನೀಯರು ತಮ್ಮದೇ ಆದ ಪ್ರತಿಷ್ಠಿತ ಖಾಸಗಿ ಶಾಲೆ ಹೊಂದಿದ್ದರೂ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಇದು ಆಶಾದಾಯಕ ಬೆಳವಣಿಗೆ ಮಾತ್ರವಲ್ಲ, ಜನಪರ ಮತ್ತು ಪ್ರಾಮಾಣಿಕ ಅಭಿಯಾನಕ್ಕೆ ಜನ ಬೆಂಬಲ ಇದ್ದೇ ಇರುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.
ದೇಶದಲ್ಲಿಯೇ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆ ಅತ್ಯುತ್ತಮವಾಗಿದೆ. ಆದರೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ, ಅದನ್ನು ಬೆಳೆಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಸಮಯವಿದು. ಕರ್ನಾಟಕದಲ್ಲಿ ಶೇ.50ಕ್ಕೂ ಅಧಿಕ ಮಕ್ಕಳಿಗೆ ಸರ್ಕಾರಿ ವಿದ್ಯಾಸಂಸ್ಥೆಗಳೇ ಪ್ರಾಥಮಿಕ ಶಿಕ್ಷಣದ ಮೂಲವಾಗಿವೆ. ಹಾಗಾಗಿ ಈ ಶಾಲೆಗಳನ್ನು ಪೋಷಿಸಿದರೆ ಲಕ್ಷಾಂತರ ಮಕ್ಕಳನ್ನು ಪೋಷಿಸುವುದು ಎಂದೇ ಅರ್ಥ. ಬಡವರು, ಕೆಳಮಧ್ಯಮ ವರ್ಗದವರು ಒಂದರಿಂದ 12ನೇ ತರಗತಿಯವರೆಗೂ ಉಚಿತ ಶಿಕ್ಷಣ ನೀಡುವ ಅಥವಾ ನಾಮಮಾತ್ರ ಶುಲ್ಕ ಪಡೆಯುವ ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ. ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯಬೇಕು ಎಂಬುದು ವಿಶ್ವಸಂಸ್ಥೆಯ ಪ್ರಮುಖರೂ ಸೇರಿದಂತೆ ಎಲ್ಲ ಪ್ರಾಜ್ಞರ ಆಶಯ. ಇದಕ್ಕಾಗಿಯೇ ನಮ್ಮ ಒಕ್ಕೂಟ ಸರ್ಕಾರ 2009ರಲ್ಲಿ ʼಉಚಿತ ಹಾಗೂ ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು ಕಾಯಿದೆʼಯನ್ನು ಕೂಡ ಜಾರಿಗೆ ತಂದಿದೆ.
ನಮ್ಮ ಸರ್ಕಾರಿ ಶಾಲೆಗಳು ದೇಶದಲ್ಲೇ ಮಾದರಿಯಾಗಬೇಕು ಎಂಬ ಕನಸಿಗೆ ಜೀವ ತುಂಬುವ ಸಮಯವಿದು. ಶಾಲೆಗೆ ಅತ್ಯುತ್ತಮ ಸ್ವಂತ ಕಟ್ಟಡವಿರಬೇಕು. ಒಳ್ಳೆಯ ಶಿಕ್ಷಕರೊಂದಿಗೆ ಉದ್ಯಾನ, ಉತ್ತಮ ಶೌಚಾಲಯ, ವಿದ್ಯುತ್ ಹಾಗೂ ಶುದ್ಧೀಕೃತ ಕುಡಿಯುವ ನೀರು, ಕಂಪ್ಯೂಟರ್, ಲ್ಯಾಬ್ ಹಾಗೂ ಕಲಿಕೋಪಕರಣಗಳು, ಸಾಕಷ್ಟು ಗ್ರಂಥಗಳುಳ್ಳ ಲೈಬ್ರರಿ, ಸ್ಮಾರ್ಟ್ ಕ್ಲಾಸ್‌ಗಳೆಲ್ಲವೂ ಇರಬೇಕು. ಆಗ ಮಾತ್ರ ನಾವು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಸರಿಗಟ್ಟಲು ಸಾಧ್ಯ. ವಿಸ್ತಾರ ನ್ಯೂಸ್ ವಾಹಿನಿ ಇದಕ್ಕಾಗಿಯೇ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಎಂಬ ಅಭಿಯಾನವನ್ನು ಆರಂಭಿಸಿದೆ. ಸರ್ಕಾರಿ ಇನ್ನಷ್ಟು ಉತ್ತಮಗೊಳ್ಳಲು ಏನಾಗಬೇಕಿದೆ, ಇಲ್ಲಿನ ಮೂಲಸೌಕರ್ಯಗಳಲ್ಲಿ ಯಾವ ಕೊರತೆಯಿದೆ, ಅದನ್ನು ಹೇಗೆ ತುಂಬಬಹುದು, ದಾನಿಗಳು ಹೇಗೆ ನೆರವಾಗಬಹುದು, ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತಿರುವವರು ಮತ್ತಿತರ ದಾನಿಗಳ ಕುರಿತು ಕ್ಷಕಿರಣ ಬೀರುವ ಕಾರ್ಯಕ್ರಮವಿದು. ಸರ್ಕಾರಿ ಶಾಲೆಗಳು ಸಾರ್ವಜನಿಕರ ಶಾಲೆಗಳಾಗಿರುವುದರಿಂದ ಸಾರ್ವಜನಿಕರೇ ಒಳಗೊಂಡು ಇವುಗಳನ್ನು ಮಾದರಿ ಶಾಲೆಗಳಾಗಿ ರೂಪಿಸುವುದು ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವಂತಾಗಬೇಕು ಎಂಬುದು ಈ ಅಭಿಯಾನದ ಉದ್ದೇಶ. ಈ ಅಭಿಯಾನಕ್ಕೆ ವ್ಯಕ್ತವಾದ ಸ್ಪಂದನೆ ಪ್ರೋತ್ಸಾಹದಾಯಕವಾಗಿದೆ. ಸಾಕಷ್ಟು ಮಂದಿ ಪೂರಕವಾಗಿ ಸ್ಪಂದಿಸಿದ್ದಾರೆ. ಸರ್ಕಾರ, ಇನ್ನಷ್ಟು ವ್ಯಕ್ತಿಗಳು, ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಸರ್ವಾಂಗೀಣ ಶಾಲೆಗಳ ಸುಧಾರಣೆ ಸಾಧ್ಯ. ನಾಡಿನ ಜವಾಬ್ದಾರಿಯುತ ಪ್ರಜೆಗಳಾಗಿ ನಾವೆಲ್ಲರೂ ಇದರಲ್ಲಿ ಕೈಜೋಡಿಸಿದಾಗ ʼಮಾದರಿ ಶಾಲೆʼಯ ಕನಸು ನನಸಾಗುತ್ತದೆ.
ಇದನ್ನೂ ಓದಿ | ವಿಸ್ತಾರ ನ್ಯೂಸ್‌ನ ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ ಅಭಿಯಾನ: ಶಿಕ್ಷಣ ಇಲಾಖೆ ಜತೆ ಮಹತ್ವದ ಒಡಂಬಡಿಕೆ