Site icon Vistara News

Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

Personality Development

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ
ನಮ್ಮ ದೇಹವು (Personality Development) ಪಂಚಭೂತಗಳಾದ ಪೃಥ್ವಿ, ಆಕಾಶ, ವಾಯು, ಜಲ ಮತ್ತು ಅಗ್ನಿ ತತ್ವಗಳಿಂದ ಕೂಡಿದೆ. ಹುಟ್ಟಿದಾಗ ನಾವು ಪರಿಶುದ್ಧರಾಗಿಯೇ ಇದ್ದು ಜೀವಿತಾವಧಿಯಲ್ಲಿ ಸಿಟ್ಟು ಸೆಡವು ಕೋಪ ತಾಪ ದ್ವೇಷ ಅಸೂಯೆ, ಸುಖ ಸಂತೋಷ ನೆಮ್ಮದಿ ರಾಗ ಮುಂತಾದ ಎಲ್ಲಾ ರೀತಿಯ ಭಾವಗಳಿಗೆ ಸ್ಪಂದಿಸುತ್ತ ಬೆಳೆಯುತ್ತೇವೆ. ಒಟ್ಟಿನಲ್ಲಿ ಮನುಷ್ಯ ಜೀವಿ ಕಾರ್ಕೋಟಕ ವಿಷಕ್ಕಿಂತಲೂ ಕಡೆ ಎಂದು ಭಾವಿಸುವಂತೆ ತನ್ನ ಜೀವಿತಾವಧಿಯನ್ನು ಮನುಷ್ಯ ಕಳೆಯುತ್ತಾನೆ. ಯಾವ ರೀತಿ ಅಗರ ಬತ್ತಿಯು ತನ್ನನ್ನು ತಾನು ಸುಟ್ಟು ಕೊಳ್ಳುವುದೋ ಹಾಗೆಯೇ ನಮ್ಮಲ್ಲಿ ಉಂಟಾಗುವ ದ್ವೇಷ, ಅಸೂಯೆ, ಮದ, ಮತ್ಸರಗಳು ನಮ್ಮನ್ನು ನಮಗರಿವಿಲ್ಲದೆಯೇ ಸುಟ್ಟು ಹಾಕುತ್ತವೆ. ಯಾವ ರೀತಿ ಕುದಿಯುವ ನೀರಿನಲ್ಲಿ ನಮ್ಮ ಮುಖ ನಮಗೆ ಕಾಣುವುದಿಲ್ಲವೋ ಹಾಗೆಯೇ ಸಿಟ್ಟಿನಲ್ಲಿದ್ದಾಗ ಮನುಷ್ಯ ತನ್ನ ತಪ್ಪನ್ನು ಅರಿತುಕೊಳ್ಳುವುದಿಲ್ಲ. ಶಾಂತವಾದ ಮತ್ತು ಶುದ್ಧವಾದ ಪರಿಸರದಲ್ಲಿ ತನ್ನ ತನು, ಮನಗಳನ್ನು ಶುದ್ಧೀಕರಿಸಿಕೊಳ್ಳಲು ಆ ಮೂಲಕ ತನ್ನನ್ನು ತಾನು ತಿದ್ದಿಕೊಳ್ಳಲು ಈ ಕೆಲವು ವಿಷಯಗಳು ಮನುಷ್ಯನಿಗೆ ಸಹಾಯಕವಾಗುತ್ತವೆ. ನೀರಿನ ಸೇವನೆಯಿಂದ….. ದೇಹವು ಶುದ್ದವಾಗುತ್ತದೆ. ಹೆಚ್ಚು ನೀರು ಸೇವನೆ ಮಾಡುವುದರಿಂದ ಮನುಷ್ಯನ ದೇಹದಲ್ಲಿರುವ ಕಶ್ಮಲಗಳು ಮೂತ್ರ, ಮಲ ಮತ್ತು ಬೆವರಿನ ರೂಪದಲ್ಲಿ ಹೊರಹಾಕಲ್ಪಡುತ್ತದೆ. ಯೋಗಾಸನವನ್ನು ಮಾಡುವುದರಿಂದ ಮನುಷ್ಯ ತನ್ನ ಆಂತರಿಕ ಮತ್ತು ಮಾನಸಿಕ ಕಶ್ಮಲಗಳನ್ನು ಹೊರ ಹಾಕುತ್ತಾನೆ, ಇದರಿಂದ ಮನಸ್ಸು ಪ್ರಶಾಂತವಾಗಿ ಪ್ರಪುಲಿತವಾಗಿರುತ್ತದೆ. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿರುವುದಿಲ್ಲ.

ಪ್ರಾಣಾಯಾಮ ಸೂಕ್ತ

ಪ್ರಾಣಾಯಾಮ ಮಾಡುವುದರಿಂದ ಉಸಿರಾಟ ಶುದ್ಧವಾಗುತ್ತದೆ. ಪ್ರತಿನಿತ್ಯ ಪ್ರಾಣಾಯಾಮದ ಅಭ್ಯಾಸ ಮಾಡುವುದು ಅನೇಕ ಮನೋ ದೈಹಿಕ ಕಾಯಿಲೆಗಳಿಗೆ ರಾಮಬಾಣದಂತೆ. ಕನಿಷ್ಠ ಮೂರು ನಿಮಿಷದಿಂದ ಗರಿಷ್ಠ ಮುಕ್ಕಾಲು ಗಂಟೆಯವರೆಗೆ ಪ್ರಾಣಾಯಾಮದ ಅಭ್ಯಾಸ ಮಾಡಿದಾಗ ಮನಸ್ಸು ಸಂಪೂರ್ಣ ನಿರಾಳವಾಗಿ ಜಂಜಡಗಳಿಂದ ಮುಕ್ತವಾಗುತ್ತದೆ. ಯಾವುದೇ ರೀತಿಯ ಆತಂಕ ಭಯಗಳಿಂದ ಮುಕ್ತವಾಗುತ್ತದೆ. ಸತತವಾಗಿ ಪ್ರಾಣಾಯಾಮದ ಅಭ್ಯಾಸ ಮಾಡುವುದರಿಂದ ವ್ಯಕ್ತಿಯು ಮಾನಸಿಕ ಒತ್ತಡ, ರಕ್ತದೊತ್ತಡ,
ಹೃದ್ರೋಗ ಮುಂತಾದ ಕಾಯಿಲೆಗಳಿಂದ ಮುಕ್ತನಾಗುತ್ತಾನೆ.

ಧ್ಯಾನ ಉತ್ತಮ ಅಭ್ಯಾಸ

ಧ್ಯಾನ ಮಾಡುವುದರಿಂದ ಮನಸ್ಸು ಶುದ್ದವಾಗುತ್ತದೆ. ಧ್ಯಾನವು ಮನಸ್ಸನ್ನು ಒಂದು ನಿಶ್ಚಿತ ಏಕಾಗ್ರತೆಯತ್ತ ಕೊಂಡೊಯ್ಯುವ ಸಾಧನ. ಸರಳವಾದ ಬಟ್ಟೆಯನ್ನು ತೊಟ್ಟು ಅನುಕೂಲಕರ ಆಸನದಲ್ಲಿ ಕುಳಿತು ಕತ್ತು, ಬೆನ್ನು ಮತ್ತು ತಲೆಯನ್ನು ನೇರವಾಗಿ ಇಟ್ಟುಕೊಂಡು ಕಣ್ಣು ಮುಚ್ಚಿ ಧ್ಯಾನಮಗ್ನ ರಾಗುವ ವ್ಯಕ್ತಿಗಳಿಗೆ ಅಪಾರವಾದ ಮಾನಸಿಕ ಶಾಂತಿ ಮತ್ತು ತನ್ಮೂಲಕ ಸ್ಥಿತಪ್ರಜ್ಞತೆ ಲಭಿಸುತ್ತದೆ. ಇಂದಿನ ಒತ್ತಡಭರಿತ ದೈನಂದಿನ ಜೀವನದಲ್ಲಿ ಧ್ಯಾನವನ್ನು ಅಭ್ಯಾಸ ಮಾಡುವುದು ಅತ್ಯಂತ ಸೂಕ್ತವಾದದ್ದು.

ಜ್ಞಾನ ಸಂಪಾದಿಸುವುದರಿಂದ…

ಇದರಿಂದ ಜಾಣ್ಮೆ, ಉನ್ನತ ವಿಚಾರಧಾರೆಗಳ ಹರಿವು ಹೆಚ್ಚುತ್ತದೆ. ಜ್ಞಾನ ಸಂಪಾದನೆಯು ಎಲ್ಲಾ ಚಟುವಟಿಕೆಗಳಲ್ಲಿಯೇ ಮಹತ್ತರವಾದ ಕ್ರಿಯೆ. ತಿಳಿದವರಿಂದ, ಪಂಡಿತರಿಂದ, ಜ್ಞಾನಿಗಳಿಂದ ಪುಸ್ತಕಗಳಿಂದ ಅನುಭವಗಳಿಂದ ಸಂಪಾದಿಸುವ ಜ್ಞಾನ ನಮ್ಮ ಜೀವಿತದ ಕೊನೆಯವರೆಗೂ ನಮ್ಮೊಂದಿಗೆ ಇರುತ್ತದೆ ಯಾರು ಕದಿಯಲಾರದ ವಿದ್ಯೆ ಜ್ಞಾನ. ಅರಿವಿನ ಕೊರತೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ ಅಂತಹ ಸಮಯದಲ್ಲಿ ಸೂಕ್ತವಾದ ಪ್ರಾಪಂಚಿಕ ಜ್ಞಾನವು ಕೂಡ ಎಷ್ಟೋ ಸಮಸ್ಯೆಗಳನ್ನು ನಿವಾರಿಸುತ್ತದೆ. ಐಹಿಕ ಜೀವನದ ಎಷ್ಟೋ ತೊಂದರೆಗಳಿಗೆ ಆಧ್ಯಾತ್ಮದಲ್ಲಿ ಉತ್ತರವಿದೆ.

ಚಿಂತನ ಮಂಥನದಿಂದ

ಇದರಿಂದ ಅಜ್ಞಾನ ತೊಲಗಿ ಸುಜ್ಞಾನ ದೊರೆಯುತ್ತದೆ. ಸರಿ-ತಪ್ಪು,
ಒಳಿತು-ಕೆಡುಕು, ಧರ್ಮ-ಅಧರ್ಮ ಇವುಗಳ ಕುರಿತು ಸೂಕ್ತವಾದ ಚಿಂತನೆ ಮಾಡಿ ವಿಚಾರವೆಂಬ ಕಡೆಗೋಲಿನಿಂದ ಮಂಥನ ಮಾಡಿ ಒಳ್ಳೆಯ ನಿರ್ಧಾರಕ್ಕೆ ಬರುವುದು ಕೂಡ ಅತ್ಯಂತ ಒಳ್ಳೆಯ ಕಾರ್ಯ. ಸರಿ ತಪ್ಪುಗಳ ಪರಾಮರ್ಶೆಯಿಂದ ಮನುಷ್ಯ ತಪ್ಪು ವಿಷಯಗಳಿಂದ ದೂರ ಸರಿದು ಒಳ್ಳೆಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಚಿಂತನೆ ಮಾಡಿದರೆ ಕಾರ್ಯಾಕಾರ್ಯಗಳ ಅರಿವು ಆಗುವುದಿಲ್ಲ. *ಸರಿ ತಪ್ಪುಗಳ ಮೊಸರನ್ನು ಅರಿವು ಮತ್ತು ವಿಮರ್ಶೆಗಳ ಮಂಥನದ ಮೂಲಕ ಕಡೆದು ಉತ್ತಮ ವಿಚಾರಗಳ ಬೆಣ್ಣೆ ತೆಗೆದು ಉತ್ತಮ ವ್ಯಕ್ತಿತ್ವವೆಂಬ ಕಾಯಿಸಿದ ತುಪ್ಪವನ್ನು ಈ ಸಮಾಜಕ್ಕೆ ಬಡಿಸುವುದು ಸಮಾಜ ಜೀವಿಯಾಗಿ ನಮ್ಮ ಕರ್ತವ್ಯ.

ಸೇವೆ ಮಾಡುವುದರಿಂದ

ಇದರಿಂದ ಅಹಮ್ಮಿಗೆ ಸಂತೃಪ್ತಿ ದೊರೆಯುತ್ತದೆ. ಎಷ್ಟೋ ಜನ ಶ್ರೀಮಂತರು ಅಲ್ಲಲ್ಲಿ ನಡೆಯುವ ಪ್ರಸಾದ ಸೇವಾ ಕಾರ್ಯಗಳಲ್ಲಿ ಪ್ರವಾಹ, ಸುನಾಮಿ ಚಂಡಮಾರುತ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಸಂತ್ರಸ್ತರಾದ ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೀಗೆ ತೊಡಗಿಸಿಕೊಳ್ಳುವ ಮೂಲಕ ಅವರು ನಾನು ಶ್ರೀಮಂತ, ಉನ್ನತ ವರ್ಗದವನು ಎಲ್ಲರಿಗಿಂತ ಮೇಲು ಎಂಬ ಮೇಲರಿಮೆಯನ್ನು ತೊಡೆದು ಕೊಳ್ಳುತ್ತಾರೆ. ನಮ್ಮದೇ ಅಹಮ್ಮಿನ ಕೋಟೆಯೊಳಗೆ ಬಂಧಿಯಾದಾಗ ಇತರರ ಸಂಕಟಗಳು ನಮಗೆ ಕಾಣುವುದಿಲ್ಲ. ಆದರೆ ಸೇವೆಯ ಮೂಲಕ ಮನುಷ್ಯ ತನ್ನನ್ನು ಸಮಾಜಕ್ಕೆ ಅರ್ಪಿಸಿಕೊಳ್ಳುವ ಮನುಷ್ಯ ಪರಿಶುದ್ಧನಾಗುತ್ತಾನೆ. ಅಹಮ್ಮಿನ ಸಂತೃಪ್ತಿಗೆ ಕಾರಣವಾಗುತ್ತಾನೆ. ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ಉಕ್ತಿ ಸದಾ ಸರ್ವದ ನಮ್ಮ ಮನದಲ್ಲಿ ನೆಲೆ ಮಾಡಿರಬೇಕು.

ಮೌನದಿಂದ…

ಇದರಿಂದ ನಾನು ಮತ್ತು ನನ್ನದು ಎಂಬ ವೈಯಕ್ತಿಕತೆ ಸ್ವಾರ್ಥತೆಯು ಶುದ್ಧವಾಗುತ್ತದೆ. ಪ್ರಶಾಂತವಾಗಿರುವ ಮೌನವೆಂಬ ಕೊಳದಲ್ಲಿ ಒಂದೇ ಸಮನೆ ನಿರರ್ಥಕವಾದ ಒಣ ಮಾತುಗಳನ್ನಾಡಿ ಬಗ್ಗಡ ಮಾಡುವುದಕ್ಕಿಂತ ಹಿತವಾದ ಮೌನ ಲೇಸು. ಮೌನವು ನಮಗೆ ಆತ್ಮ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಸರಿ ತಪ್ಪುಗಳ ವಿಮರ್ಶೆ, ಒಳಿತು ಕೆಡುಕುಗಳ ಪರಾಮರ್ಶೆಯನ್ನು ನಾವು ಮೌನಾನುಸಂಧಾನದಲ್ಲಿ ಪಡೆಯಬಹುದು. ಮೌನದ ಶಕ್ತಿ ಅಪಾರ. ಮಾತು ನಮ್ಮನ್ನು ಹಗುರಗೊಳಿಸಿದರೆ ಮೌನವು ನಮ್ಮನ್ನು ಆಂತರಿಕವಾಗಿ ಬಲಿಷ್ಠವಾಗಿಸುತ್ತದೆ. ಆದ್ದರಿಂದಲೇ ಋಷಿ ಮುನಿಗಳು, ಜ್ಞಾನಿಗಳು ಸದಾ ಮೌನದ ಮೊರೆ ಹೋಗುತ್ತಾರೆ. ಇನ್ನು ಹಲವು ಜನ ಸಂತರು ವಾರಕ್ಕೊಂದು ದಿನ, ಪ್ರತಿದಿನ ಸ್ನಾನ ಪೂಜೆ ಮುಗಿಯುವವರೆಗೆ ಮತ್ತೆ ಹಲವಾರು ದಿನಗಳ ಕಾಲದ ಮೌನಾನುಷ್ಠಾನವನ್ನು ಮಾಡುತ್ತಾರೆ. ಮೌನವು ನಮ್ಮ ಆಂತರಿಕ ಶಕ್ತಿಯನ್ನು ಹೆಚ್ಚಿಸಿ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಗಟ್ಟಿಗೊಳಿಸುತ್ತದೆ.

ಉನ್ನತ ಆಲೋಚನೆಗಳಿಂದ…

ಇದರಿಂದ ತಿನ್ನುವ ಆಹಾರ ಸಾತ್ವಿಕವಾಗುತ್ತದೆ. ಒಳ್ಳೆಯ ವಿಚಾರಗಳು, ಒಳ್ಳೆಯ ಕಾರ್ಯಗಳು, ಒಳ್ಳೆಯ ದುಡಿಮೆಯನ್ನು ಪ್ರೋತ್ಸಾಹಿಸುತ್ತದೆ. ಒಳ್ಳೆಯ ಮತ್ತು ಉನ್ನತ ವಿಚಾರಧಾರೆಗಳು ನಮ್ಮ ಆಹಾರದ ಮೇಲೂ ಪರಿಣಾಮ ಬೀರುತ್ತವೆ. ನಾವು ಆಹಾರವನ್ನು ತಯಾರಿಸುವಾಗ ಒಳ್ಳೆಯ ಆಲೋಚನೆ ಮಾಡಬೇಕು.ಸ್ವಚ್ಛ,ಶುದ್ಧವಾದ ಪ್ರಶಾಂತ ಪರಿಸರದಲ್ಲಿ ಅಡುಗೆಯನ್ನು ಮಾಡುವುದರ ಹಿಂದಿನ ಗುಟ್ಟು ಇದೇ. ವ್ಯವಹಾರವೇ ಮುಖ್ಯವಾಗಿರುವ ಹೋಟೆಲ್, ರೆಸ್ಟೋರೆಂಟ್ ಮುಂತಾದವುಗಳಲ್ಲಿ ನಾವು ಸೇವಿಸುವ ಆಹಾರ ತಾಮಸಿಕ ಮತ್ತು ರಾಜಸಿಕ ಗುಣವನ್ನು ಹೊಂದಿದ್ದು ಅಂತಹ ಆಹಾರವನ್ನು ಸೇವಿಸಿದಾಗ ನಮಗೆ ಅಜೀರ್ಣ, ಹುಳಿತೇಗು ಹೊಟ್ಟೆ ಉಬ್ಬರ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಸೇವೆಯೇ ಪ್ರಧಾನವಾಗಿರುವ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ಸೇವಾ ಸದನಗಳಲ್ಲಿ ತಯಾರಿಸುವ ಆಹಾರಗಳಲ್ಲಿ ಸಾತ್ವಿಕ ಗುಣವೇ ತುಂಬಿದ್ದು ಮನಸ್ಸನ್ನು ಅರಳಿಸುವ ಮತ್ತು ಚೇತನ ಕೊಡುವ ಶಕ್ತಿ ಇರುತ್ತದೆ. ಒಳ್ಳೆಯ ಆಹಾರ ಸೇವನೆ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬಡಿದೆಬ್ಬಿಸಿ ನಮ್ಮನ್ನು ಉತ್ತಮ ಕಾರ್ಯಗಳತ್ತ ಪ್ರೇರೇಪಿಸುತ್ತದೆ.

ದಾನ ಮಾಡುವುದರಿಂದ…

ಇದರಿಂದ ಸಂಪತ್ತಿನ ಸದ್ವಿನಿಯೋಗವಾಗುವುದು. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂದು ಹೇಳುತ್ತಾರಲ್ಲವೇ. ಕೊಡುವುದರ ಮೂಲಕ ವ್ಯಕ್ತಿ ತನ್ನೊಳಗಿನ ಎಲ್ಲ ನಕಾರಾತ್ಮಕ ಚಿಂತನೆಗಳನ್ನು ಕಳೆದುಕೊಳ್ಳುತ್ತಾನೆ. ದಾನ ನೀಡುವ ಮೂಲಕ ತನ್ನಲ್ಲಿರುವ ಸಿಟ್ಟು ಸೆಡವು ಹಟಗಳನ್ನು ಕಳೆದುಕೊಳ್ಳುತ್ತಾನೆ. ಬೇಡುವ ಕೈಗಳಿಗಿಂತ ಕೊಡುವ ಕೈಗಳು ಶ್ರೇಷ್ಠ ಎಂದು ಹಿರಿಯರು ಹೇಳಿರುವುದು ಇದಕ್ಕೆ ಇರಬಹುದು. ದಾನಮಾಡುವ ಶಕ್ತಿಯನ್ನು ನೀಡಿರುವ ಆ ದೇವರಿಗೆ ಕೃತಾರ್ಥರಾಗಿರೋಣ.

ಇದನ್ನೂ ಓದಿ: Eating Style: ಉಣ್ಣುವ ರೀತಿ ನಾವು ಎಂಥವರು ಎನ್ನುವುದನ್ನು ಬಯಲು ಮಾಡುತ್ತದೆ! ಅದು ಹೇಗೆ?

ಪ್ರೀತಿ ಮತ್ತು ಸಮರ್ಪಣಾ ಭಾವದಿಂದ

ಇದರಿಂದ ಭಾವನೆಗಳು ಶುದ್ಧವಾಗುತ್ತವೆ. ವ್ಯಕ್ತಿಯನ್ನು ಆತನ ದೈಹಿಕ,ಮಾನಸಿಕ ಮತ್ತು ಇತರ ಒಳಿತು ಮತ್ತು ಕೆಡುಕುಗಳೊಂದಿಗೆ ಪ್ರೀತಿಸುವುದು ನಿಜವಾದ ಪ್ರೀತಿ. ಅಂತಹ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ, ಆಕಾಂಕ್ಷೆಗಳು ಇರುವುದಿಲ್ಲ. ನೀನು ಹೀಗಿದ್ದರೆ ಮಾತ್ರ ನಾನು ನಿನ್ನನ್ನು ಪ್ರೀತಿಸಬಲ್ಲೆ ಎಂಬ ಶರತ್ತುಬದ್ಧ ಪ್ರೀತಿ ಸ್ವಾರ್ಥ ಎಂದೆನಿಸಿಕೊಳ್ಳುತ್ತದೆ. ಪ್ರೀತಿಗೆ ಬೇಕಾಗಿರುವುದು ಶುದ್ಧ ಅಂತಃಕರಣ ಮತ್ತು ಸಮರ್ಪಣಾ ಮನೋಭಾವ ಮಾತ್ರ. ಆದ್ದರಿಂದಲೇ ನಿಸ್ವಾರ್ಥವಾದ, ಕಲ್ಮಶವಿಲ್ಲದ ಮಾತೆಯ ಮಮತೆಯನ್ನು ಎಲ್ಲರೂ ಕೊಂಡಾಡುತ್ತಾರೆ. ಶುದ್ಧವಾದ ಪ್ರೀತಿ ವ್ಯಕ್ತಿಯ ಅಂದ ಚಂದಗಳನ್ನು ನೋಡದೆ ತನ್ನ ಎದುರಿರುವ ವ್ಯಕ್ತಿಯನ್ನು ಅವನಿರುವ ಹಾಗೆಯೇ ಅಂಗೀಕರಿಸುತ್ತದೆ.

ಮೇಲಿನ ದಶಗುಣಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಳ್ಳುವ ಮೂಲಕ ನಮ್ಮಲ್ಲಿರುವ ಕೋಪ,ಅಸಹನೆ,ಉದ್ರೇಕ ಮುಂತಾದ ಗುಣಗಳನ್ನು ಕಳೆದುಕೊಂಡು ಪ್ರೀತಿ ವಿಶ್ವಾಸ ಭ್ರಾತೃತ್ವ, ಸಹನೆ, ಒಳ್ಳೆಯತನ ಮುಂತಾದ ಉನ್ನತ ಗುಣಗಳನ್ನು ಆವಾಹಿಸಿಕೊಳ್ಳುತ್ತಾ ವಿಶ್ವಮಾನವರಾಗುವ ಮೂಲಕ ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಜಗತ್ತಿನಲ್ಲಿ ಬಿತ್ತರಿಸೋಣ ಎಂಬ ಆಶಯದೊಂದಿಗೆ

Exit mobile version