Site icon Vistara News

Petrol Diesel Price: ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ: ಸಿಎಂ ಸಮರ್ಥನೆ

Petrol Diesel Price

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯನ್ನು (Petrol Diesel Price) ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವ್ಯಾಟ್ ಹೆಚ್ಚಳದ ನಂತರ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ಕಡಿಮೆ ದರವಿದೆ. ಗುಜರಾತ್ ಮತ್ತು ಮಧ್ಯಪ್ರವೇಶಕ್ಕಿಂತಲ್ಲೂ ನಮ್ಮಲ್ಲೇ ಕಡಿಮೆ. ಅಗಿನ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ನಮ್ಮ ರಾಜ್ಯದ ಸಂಪನ್ಮೂಲಗಳನ್ನ ಬೇರೆ ರಾಜ್ಯಕ್ಕೆ ನೀಡಿತ್ತು. ರಾಜ್ಯ ಬಿಜೆಪಿ ಸರ್ಕಾರ ವ್ಯಾಟ್ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೇ ವ್ಯಾಟ್ ಹೆಚ್ಚಳ (Price Hike) ಮಾಡಿತ್ತು. ಇದರಿಂದ ಕರ್ನಾಟಕದ ಆದಾಯ ಕುಂಠಿತವಾಗಿತ್ತು. ಈ ಮೂಲಕ ಕೇಂದ್ರ ಸರ್ಕಾರ ಕನ್ನಡಿಗರನ್ನು ವಂಚಿಸಿ ಹೆಚ್ಚು ತೆರಿಗೆ ಸಂಗ್ರಹ ಮಾಡಿತ್ತು ಎಂದು ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಕ್ಕೂ ಮುಂಚೆ ಪೆಟ್ರೋಲ್ ಮತ್ತು ಡೀಸೆಲ್‌ಗೆ ತಲಾ 9.48 ರೂಪಾಯಿ ಮತ್ತು 3.56 ರೂಪಾಯಿ ತೆರಿಗೆ ಇತ್ತು. ಬಿಜೆಪಿ ಅವಧಿಯಲ್ಲಿ ದಾಖಲೆಯ ತೆರಿಗೆ ಹೆಚ್ಚಳವಾಗಿ ಪೆಟ್ರೋಲ್‌ಗೆ 32.98 ರೂ., ಡೀಸೆಲ್‌ಗೆ 31.83 ರೂ. ಹೆಚ್ಚಳವಾಗಿತ್ತು. 2021-22 ರಲ್ಲಿ ಅಬಕಾರಿ ತೆರಿಗೆಯನ್ನು ಪೆಟ್ರೋಲ್ ಮೇಲೆ 13 ರೂಪಾಯಿ ಮತ್ತು ಡಿಸೇಲ್ ಮೇಲೆ 16 ಕಡಿಮೆ ಮಾಡಲಾಗಿತ್ತು. ಸದ್ಯ ಪೆಟ್ರೋಲ್ ಮೇಲಿನ ಕೇಂದ್ರ ತೆರಿಗೆ 19.9 ರೂ., ಡೀಸೆಲ್ ಮೇಲೆ 18.8 ರೂಪಾಯಿ ಇದೆ. ಇದನ್ನು ಕೇಂದ್ರ ಸರ್ಕಾರ ಜನರ ಒಳಿತಿಗೊಸ್ಕರ ಕಡಿಮೆ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ | Petrol Diesel Price: ಜನರಿಗೆ ಸಿದ್ದರಾಮಯ್ಯ ಸರ್ಕಾರ ಶಾಕ್; ಪೆಟ್ರೋಲ್‌, ಡೀಸೆಲ್‌ ಬೆಲೆ 3 ರೂ. ಏರಿಕೆ

ರಾಜ್ಯದ ವ್ಯಾಟ್ ಹೆಚ್ಚಳದಿಂದ ಜನರ ಸೇವೆಗಳು, ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಹಣ ನೀಡಲಿದ್ದೇವೆ. ನಾವು ಸಮತೋಲಿತ ಮತ್ತು ಜವಾಬ್ದಾರಿಯುತ ಆಡಳಿತ ನೀಡಲು ಬದ್ಧರಾಗಿದ್ದೇವೆ ಎಂದು ತೈಲ ಬೆಲೆ ಏರಿಕೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ (Petrol Diesel Price) ಖಂಡಿಸಿ ಜೂನ್‌ 17ರಂದು ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ (BJP Protest) ನಡೆಸಲು ಬಿಜೆಪಿ ತೀರ್ಮಾನಿಸಿದೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ,‌ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿತ್ತು. ಆದರೆ, ಇದೀಗ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ (Petrol, Diesel Price Hike) ಮೂಲಕ ವಿಪಕ್ಷಗಳ ಕೈಗೆ ರಾಜ್ಯ ಸರ್ಕಾರ ಅಸ್ತ್ರ ಕೊಟ್ಟಿದೆ. ರಾಜ್ಯದಲ್ಲಿ ಬೆಲೆ ಏರಿಕೆಯನ್ನು ಅಸ್ತ್ರ ಮಾಡಿಕೊಂಡು ಅಧಿಕಾರಕ್ಕೆ ಬಂದ ಕೈ ಸರ್ಕಾರಕ್ಕೆ ಈಗ ಬೆಲೆ ಏರಿಕೆಯೇ ಸಂಕಷ್ಟ ತಂದಿದೆ.

ಇದನ್ನೂ ಓದಿ | Petrol Diesel Price: ಪೆಟ್ರೋಲ್ ದರ ಹೆಚ್ಚಳ ಆದೇಶ‌ ವಾಪಸ್ ಪಡೆಯದಿದ್ದರೆ ಉಗ್ರ ಪ್ರತಿಭಟನೆ: ವಿಜಯೇಂದ್ರ ಎಚ್ಚರಿಕೆ

ಪೆಟ್ರೋಲ್ ಬೆಲೆ 3 ರೂಪಾಯಿ, ಡೀಸೆಲ್‌ ಬೆಲೆ ಮೂರೂವರೆ ರೂಪಾಯಿ ಏರಿಕೆ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿರುವ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಬೆಲೆ ಏರಿಕೆಯನ್ನು ಸದನದ ಒಳಗೂ ಮತ್ತು ಹೊರಗೆ ಸರ್ಕಾರದ ವಿರುದ್ಧ ಪ್ರಮುಖ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದ್ದು, ಹೋರಾಟದ ಮೂಲಕ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಪ್ಲ್ಯಾನ್ ಮಾಡಿದೆ.

Exit mobile version