ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 41 ಸಾವಿರ ಕೋಟಿ ರೂ. ವೆಚ್ಚದ 2000 ರೈಲ್ವೆ ಪ್ರಾಜೆಕ್ಟ್‌ಗಳನ್ನು ದೇಶಾದ್ಯಂತ ಲೋಕಾರ್ಪಣೆ ಮಾಡಿದ್ದಾರೆ. ʼಈ ಮೊದಲು ರೈಲ್ವೆ ಇಲಾಖೆ ಎಂದರೆ ನಷ್ಟ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಅದೇ ರೈಲ್ವೆ ಪರಿವರ್ತನೆಯ ಬಹುದೊಡ್ಡ ಶಕ್ತಿಯಾಗಿ ಬದಲಾಗಿದೆʼ ಎಂದು ಅವರು ಹೇಳಿದ್ದು ಅಕ್ಷರಶಃ ನಿಜ. ವರ್ಚುಯಲ್ ಆಗಿ ಯೋಜನೆಗಳಿಗೆ ಚಾಲನೆ ಅವರು ನೀಡಿದ್ದಾರೆ. 27 ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 554 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಈ ಮೂಲಕ ಅಡಿಪಾಯ ಹಾಕಲಾಗಿದೆ. ಪ್ರಯಾಣದ ಅನುಭವವನ್ನು ಹೆಚ್ಚಿಸಲು, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ಇವು ನವೀಕೃತಗೊಳ್ಳಲಿವೆ. ಉತ್ತರ ಪ್ರದೇಶದ ಗೋಮತಿ ನಗರ ರೈಲು ನಿಲ್ದಾಣವನ್ನೂ ಉದ್ಘಾಟಿಸಿದ್ದಾರೆ. ಭಾರತೀಯ ರೈಲ್ವೆ ಮಾರ್ಗಗಳಲ್ಲಿ 1500 ರೋಡ್ ಓವರ್ ಬ್ರಿಡ್ಜ್‌ಗಳು/ರೋಡ್ ಅಂಡರ್ ಬ್ರಿಡ್ಜ್‌ಗಳನ್ನು ನಿರ್ಮಿಸಲೂ ಅಡಿಪಾಯ ಹಾಕಲಾಗಿದೆ. ಇದು ರೈಲ್ವೆ ಇಲಾಖೆಯ ಅಬಿವೃದ್ಧಿಯೊಂದಿಗೆ, ನೂತನ ಭಾರತದ ಅಭಿವೃದ್ಧಿಯೂ ಆಗಿದೆ.
ಇವುಗಳಲ್ಲಿ ರಾಜ್ಯದ 15 ರೈಲು ನಿಲ್ದಾಣಗಳ ಪುನರುತ್ಥಾನ, ಉನ್ನತೀಕರಣ, ಹಲವು ಸೌಕರ್ಯಗಳನ್ನು ಒದಗಿಸುವ ಯೋಜನೆಗಳು ಕೂಡ ಇವೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ 367.24 ಕೋಟಿ ರೂ.ವೆಚ್ಚದ ಕಾಮಗಾರಿ ನಡೆಯಲಿದ್ದರೆ, ನೈರುತ್ಯ ರೈಲ್ವೆ ವಿಭಾಗದಲ್ಲಿ 12 ರೈಲ್ವೆ ನಿಲ್ದಾಣಗಳ ಉನ್ನತೀಕರಣ ಹಾಗೂ ರೈಲ್ವೆ ಮಾರ್ಗದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬೆಂಗಳೂರು ರೈಲ್ವೆ ವಲಯದಲ್ಲಿ ಕೆ.ಆರ್. ಪುರ, ಕೆಂಗೇರಿ, ಮಲ್ಲೇಶ್ವರ, ವೈಟ್‌ಫೀಲ್ಡ್, ಚನ್ನಪಟ್ಟಣ, ದೊಡ್ಡಬಳ್ಳಾಪುರ, ಮಂಡ್ಯ, ರಾಮನಗರ, ತುಮಕೂರು ಮುಂತಾದ ನಿಲ್ದಾಣಗಳು ನವೀಕರಣಗೊಳ್ಳಲಿವೆ. ಕರ್ನಾಟಕದ ಕಟ್ಟ ಕಡೆಯ ರೈಲು ನಿಲ್ದಾಣವಾದ ಚಾಮರಾಜನಗರ ರೈಲು ನಿಲ್ದಾಣದ ಅಭಿವೃದ್ಧಿಗೂ ಶಂಕುಸ್ಥಾಪನೆ ಆಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್, ಶಿವಮೊಗ್ಗ ರೈಲು ನಿಲ್ದಾಣ ಉನ್ನತೀಕರಣಕ್ಕೂ ಚಾಲನೆ ನೀಡಲಾಗಿದೆ.
ಕರ್ನಾಟಕದ ರೈಲ್ವೆ ವಲಯ ಸಾಕಷ್ಟು ಅಭಿವೃದ್ಧಿ ಹೊಂದಿದ ಒಂದು ವಿಭಾಗ. ಇಲ್ಲಿನ ಪ್ರಯಾಣಿಕ ರೈಲುಗಳು ಹಾಗೂ ಸರಕು ರೈಲುಗಳು ಸಾಕಷ್ಟು ಆದಾಯವನ್ನು ಕೇಂದ್ರಕ್ಕೆ ತಂದುಕೊಡುತ್ತಿವೆ. ಅದೇನೇ ಇದ್ದರೂ ರಾಜ್ಯಕ್ಕೆ ಬರುವ ಹೊಸ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಹಣಕಾಸು ಸಮರ್ಪಕವಾಗಿ ವಿನಿಯೋಗ ಆಗಬೇಕಾದುದು ಅಗತ್ಯ. ಹೊಸ ಅನುದಾನಗಳ ಜೊತೆಗೆ ಈ ಹಿಂದಿನ ಯೋಜನೆಗಳೂ ಏನಾಗಿವೆ ಎಂಬುದನ್ನೂ ಪರಿಶೀಲಿಸಬೇಕು. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬ್ಲೂಪ್ರಿಂಟ್ ದೇಶಕ್ಕೆ ಮಾದರಿಯಾಗಿದೆ. ಇದೇ ಮಾದರಿಯನ್ನು ದೇಶದ ಇತರ ಕಡೆಗೂ ಬಳಸಿಕೊಳ್ಳಲಾಗುವುದು. ಹಾಗೆಯೇ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಸೇರಿ ಎಲ್ಲ ಹಂತಗಳಲ್ಲಿ ರಾಜ್ಯ ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ ಎಂದು ಈ ಹಿಂದೆ ಕೇಂದ್ರದ ರೈಲ್ವೆ ಸಚಿವರು ತಿಳಿಸಿದ್ದರು. ರೈಲ್ವೆಯ ಆದಾಯ ಕೇಂದ್ರಕ್ಕೆ ಸೇರಿದ್ದಾದರೂ ಅದು ಬಳಕೆಯ ರೂಪದಲ್ಲಿ ರಾಜ್ಯಗಳಿಗೆ ಗರಿಷ್ಠ ಉಪಕಾರಿಯಾಗಿದೆ. ಈ ಹಣದುಬ್ಬರದ ಕಾಲದಲ್ಲೂ ಕನಿಷ್ಠ ಪ್ರಯಾಣಿಕ ಹಾಗೂ ಸರಕು ಸಾಗಣೆ ಶುಲ್ಕವನ್ನು ಅದು ಹೊಂದಿರುವುದರಿಂದ, ಸಾರ್ವಜನಿಕ ಸೇವೆಯ ಮಾಧ್ಯಮವೂ ಆಗಿದೆ. ಹೀಗಾಗಿ ಕೇಂದ್ರ- ರಾಜ್ಯಗಳೆರಡೂ ಸಮನ್ವಯದಿಂದ ಈ ಇಲಾಖೆಯನ್ನು ನೋಡಿಕೊಳ್ಳುವುದರಿಂದ ಹೆಚ್ಚಿನ ಲಾಭವಿದೆ.
ಇದನ್ನೂ ಓದಿ : ರಾವಿ ನದಿಗೆ ಭಾರತದ ಅಣೆಕಟ್ಟು ದಿಟ್ಟ ಹೆಜ್ಜೆ
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳಲ್ಲೂ ಬದಲಾವಣೆ, ಹೊಸತನ ತರಲು ಮುಂದಾಗಿದ್ದಾರೆ. ಹೆದ್ದಾರಿ ಸಾರಿಗೆಯಲ್ಲಿ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಆಗಿರುವ ಸಾಧನೆಯೇ ಇದಕ್ಕೆ ಸಾಕ್ಷಿ. ಇದೇ ರೀತಿ ರೈಲ್ವೆಯಲ್ಲೂ ಆಗಬೇಕು. ಕರ್ನಾಟಕ ಹೇಗೆ ಜಿಎಸ್‌ಟಿ ಸಂಗ್ರಹದಲ್ಲಿ ಮುಂದಿದೆಯೋ ಹಾಗೆಯೇ ರೈಲ್ವೇ ಆದಾಯದಲ್ಲೂ ಮುಂದಿದೆ. ಕಳೆದ ವರ್ಷ ಕರ್ನಾಟಕವನ್ನು ಒಳಗೊಂಡ ನೈರುತ್ಯ ರೈಲ್ವೇ ವಲಯವು 6214 ಕೋಟಿ ರೂ.ಗಳ ವ್ಯವಹಾರ ಮಾಡಿದೆ. ಇಷ್ಟು ಶ್ರೀಮಂತವಾಗಿರುವ ವಲಯವನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳಬೇಕಿರುವುದೂ ಮುಖ್ಯ. ರಾಜ್ಯದ ರೈಲ್ವೇ ಮಾರ್ಗಗಳ ವಿದ್ಯುದೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ವಿವಿಧ ತಜ್ಞತೆಗಳು, ಲೊಕೊಪೈಲಟ್‌ಗಳ ತರಬೇತಿ, ಹಳಿ ದ್ವಿಗುಣ ಕಾಮಗಾರಿಗಳು, ಬ್ರಾಡ್‌ಗೇಜ್ ಕಾಮಗಾರಿಗಳು, ಕೆಲವು ಕಡೆ ಹೊಸ ರೈಲುಗಳ ಬೇಡಿಕೆ ಇದೆ. ಇವೆಲ್ಲವನ್ನೂ ಗಮನಿಸಿ ಸಮಗ್ರವಾದ ಸ್ವರೂಪದಲ್ಲಿ ರೈಲ್ವೇ ಇಲಾಖೆಯ ಅಭಿವೃದ್ಧಿಯಾಗಬೇಕು. ಆಗ ದೇಶದ ಬಹುತೇಕ ಮಧ್ಯಮ, ಕೆಳಮಧ್ಯಮ ವರ್ಗದವರು ನೆಚ್ಚಿರುವ ಈ ಸಾರಿಗೆಗೆ ನ್ಯಾಯ ಸಲ್ಲುತ್ತದೆ. ಆದಾಯವೂ ಇನ್ನಷ್ಟು ಹೆಚ್ಚುತ್ತದೆ.