ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Election) ಎರಡನೇ ಹಂತವು ಬಿಜೆಪಿ ನೇತೃತ್ವದ ಎನ್ಡಿಗೆ ಗೆ “ತುಂಬಾ ಅನುಕೂಲಕರ ” ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಮತದಾನ ಮುಗಿಯುತ್ತಿದ್ದಂತೆ ಅವರು ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
“ಎರಡನೇ ಹಂತವು ತುಂಬಾ ಉತ್ತಮವಾಗಿದೆ. ಮತ ಚಲಾಯಿಸಿದ ಭಾರತದಾದ್ಯಂತದ ಜನರಿಗೆ ಕೃತಜ್ಞತೆಗಳು. ಎನ್ಡಿಗೆ ಸಾಟಿಯಿಲ್ಲದ ಬೆಂಬಲವು ಪ್ರತಿಪಕ್ಷಗಳನ್ನು ಇನ್ನಷ್ಟು ನಿರಾಶೆಗೊಳಿಸಲಿದೆ” ಎಂದು ಅವರು ಹೇಳಿದರು. “ಮತದಾರರು ಎನ್ಡಿಎಯ ಉತ್ತಮ ಆಡಳಿತವನ್ನು ಬಯಸುತ್ತಾರೆ. ಯುವಕರು ಮತ್ತು ಮಹಿಳಾ ಮತದಾರರು ಎನ್ಡಿಎ ಬೆಂಬಲಕ್ಕೆ ಶಕ್ತಿ ತುಂಬುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.
ಏಪ್ರಿಲ್ 19 ರಂದು ನಡೆದ ಮೊದಲ ಹಂತದ ಮತದಾನದ ನಂತರ ಪ್ರಧಾನಿ ಇದೇ ರೀತಿಯ ಪ್ರತಿಪಾದನೆಯನ್ನು ಮಾಡಿದ್ದರು/ ಆಡಳಿತಾರೂಢ ಮೈತ್ರಿಕೂಟವು ಉತ್ತಮ ಪ್ರತಿಕ್ರಿಯೆಯನ್ನು ಕಂಡಿದೆ ಎಂದು ಹೇಳಿದರು. ಭಾರತದಾದ್ಯಂತ ಜನರು ದಾಖಲೆ ಸಂಖ್ಯೆಯಲ್ಲಿ ಎನ್ಡಿಎಗೆ ಮತ ಚಲಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ದೇಶದ ರಕ್ಷಣೆಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಿ: ಜೆ.ಪಿ.ನಡ್ಡಾ
ದೇಶದ ರಕ್ಷಣೆಗಾಗಿ ಮೂರನೇ ಬಾರಿ ಮೋದಿ ಅವರನ್ನು ಮತ್ತೆ ಪಿಎಂ (PM) ಮಾಡಲು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮನವಿ (Lok Sabha Election 2024) ಮಾಡಿದರು.
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಶುಕ್ರವಾರ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜುಗೌಡ ಅವರ ಪರ ರೋಡ್ ಶೋ ನಡೆಸಿ, ಮತಯಾಚಿಸಿ ಅವರು ಮಾತನಾಡಿದರು.
ಈ ಚುನಾವಣೆಯು ಮಹತ್ವದ ಚುನಾವಣೆಯಾಗಿದೆ. ದೇಶವನ್ನು ಗಟ್ಟಿಗೊಳಿಸುವ ಸುಭದ್ರ ಸರ್ಕಾರಕ್ಕೆ ದೇಶದ ಜನರು ಬಿಜೆಪಿಗೆ ಹೆಚ್ಚಿನ ಶಕ್ತಿ ತುಂಬಬೇಕಿದೆ. ಪಿಎಂ ನರೇಂದ್ರ ಮೋದಿ ಅವರು ದೇಶದಲ್ಲಿ ಅನೇಕ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ರೈತರಿಗೆ ಅನೇಕ ಯೋಜನೆ ಜಾರಿ ಮೂಲಕ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ
ಕಾಂಗ್ರೆಸ್ ಪಕ್ಷವು ಸಮಾಜ ಒಡೆಯುವ ಕಾರ್ಯ ಮಾಡಲಿದೆ. ಆದರೆ, ಪ್ರಧಾನಿ ಮೋದಿ ಅವರು ದೇಶವನ್ನು ವಿಕಸಿತ ಮಾಡಲಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಹಾಗೂ ಸುರಪುರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜುಗೌಡ ಅವರು ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದು, ರಾಜುಗೌಡ ಹಾಗೂ ರಾಜಾಅಮರೇಶ್ವರ ನಾಯಕ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು. ರಾಜಾಅಮರೇಶ್ವರ ನಾಯಕ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು.. ರಾಜುಗೌಡ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ವೇಳೆ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಮಾತನಾಡಿ, ರಾಯಚೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ತಮಗೆ ಹೆಚ್ಚಿನ ಮತಗಳು ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.