Site icon Vistara News

PM Modi France Visit: ಫ್ರೆಂಚ್ ಬಾಸ್ಟಿಲ್ ಡೇ‌ ಪರೇಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿಂಗ್

Modi participated in bastille Day parade in paris

ನವದೆಹಲಿ: ಫ್ರಾನ್ಸ್‌ನ ಬಾಸ್ಟಿಲ್ ಡೇ ಪರೇಡ್ (Bastille Day Parade) ಆರಂಭವಾಗಿದ್ದು, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ (French President Emmanuel Macron) ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪಾಲ್ಗೊಂಡಿದ್ದಾರೆ. ಈ ಇಬ್ಬರೂ ನಾಯಕರಿಗೆ ಫ್ರಾನ್ಸ್ ಪಡೆಗಳು ಗೌರವ ವಂದನೆ ಸಲ್ಲಿಸಿದವು. ಬಳಿಕ ಉಭಯ ನಾಯಕರು ಆಚರಣೆಯ ಮುಖ್ಯ ವೇದಿಕೆಗೆ ಆಗಮಿಸಿದರು. ಪ್ಯಾರಿಸ್‌ನ ಚಾಂಪ್ಸ್ ಎಲಿಸೀಸ್‌ನಲ್ಲಿ ಬಾಸ್ಟಿಲ್ ಡೇ ಪರೇಡ್ ಆಯೋಜಿಸಲಾಗಿತ್ತು(PM Modi France Visit).

ಚಾಂಪ್ಸ್-ಎಲಿಸೀಸ್ ಅನ್ನು ಸಂಪೂರ್ಣವಾಗಿ ಕೆಂಪು, ನೀಲಿ ಮತ್ತು ಬಿಳಿ ಬಣ್ಣಗಳಿಂದ ಸಿಂಗರಿಸಲಾಗಿತ್ತು. ಈ ಮೂರು ಬಣ್ಣಗಳು ಫ್ರಾನ್ಸ್ ರಾಷ್ಟ್ರ ಧ್ವಜವನ್ನು ಪ್ರತಿನಿಧಿಸುತ್ತವೆ. ವೇದಿಕೆಗೆ ಆಗಮಿಸುತ್ತಿದ್ದಂತೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪುಗೆ ಮಾಡಿ ಬರಮಾಡಿಕೊಂಡರು. ಮೋದಿ ಜತೆಗೆ, ವೇದಿಕೆಯಲ್ಲಿ ಇದ್ದ ಇತರ ಗಣ್ಯರನ್ನು ಅಭಿನಂದಿಸಿದರು.

ಸೈನಿಕರ ಕುದುರೆಗಳು, ಜೀಪ್ಸ್, ಬೈಕ್ ಪರಡೆನೊಂದಿಗೆ ತೆರೆದ ವಾಹನದಲ್ಲಿ ಮ್ಯಾಕ್ರನ್ ಅವರು ಆಗಮಿಸಿದರು. ಫ್ರಾನ್ಸ್ ನ್ಯಾಷನಲ್ ಡೇ ಆಚರಣೆಯನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರತ್ತ ಕೈ ಬೀಸಿದರು.

ಪ್ಯಾರಿಸ್‌ನಲ್ಲಿ ನಡೆದ ಬಾಸ್ಟಿಲ್ ಡೇ ಪರೇಡ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಮತ್ತು ಫ್ರಾನ್ಸ್ ಪ್ರಧಾನಿ ಎಲಿಸಬೆತ್ ಬೋರ್ನ್ ಬರಮಾಡಿಕೊಂಡರು. ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಬಿಳಿ ಕುರ್ತಾ ಮತ್ತು ಪೈಜಾಮದಲ್ಲಿ ನೇವಿ ಬ್ಲೂ ಜಾಕೆಟ್‌ನೊಂದಿಗೆ ಚಾಂಪ್ಸ್-ಎಲಿಸೀಸ್‌ಗೆ ಆಗಮಿಸಿದ್ದರು. ಭಾರತೀಯ ಟ್ರೈ-ಸರ್ವೀಸಸ್ ತುಕಡಿಯು ಬಾಸ್ಟಿಲ್ ಡೇ ಪರೇಡ್‌ನ ಒಂದು ಭಾಗವಾಗಿತ್ತು. ಪ್ಯಾರಿಸ್‌ನ ಚಾಂಪ್ಸ್ ಎಲಿಸೀಸ್‌ನ ಬಾಸ್ಟಿಲ್ ಡೇ ಫ್ಲೈಪಾಸ್ಟ್‌ನಲ್ಲಿ ಭಾರತೀಯ ವಾಯುಪಡೆಯ ಮೂರು ರಫೇಲ್ ಯುದ್ಧ ವಿಮಾನಗಳು ಸಹ ಭಾಗವಹಿಸಿದ್ದವು.

ನರೇಂದ್ರ ಮೋದಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಿದ ಫ್ರಾನ್ಸ್‌

ಫ್ರಾನ್ಸ್‌ ದೇಶಕ್ಕೆ ಭೇಟಿ ನೀಡಿರುವ (PM Modi France Visit) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಮತ್ತು ಸೇನಾ ಗೌರವ ಆಗಿರುವ ʼಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ʼ ಅನ್ನು ನೀಡಲಾಗಿದೆ. ಗುರುವಾರ ಸಂಜೆ ಪ್ಯಾರಿಸ್‌ನ ಎಲಿಸಿ ಪ್ಯಾಲೇಸ್‌ನಲ್ಲಿ ಫ್ರಾನ್ಸ್‌ ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರಾನ್ (Emmanuel Macron) ಆಯೋಜಿಸಿದ್ದ ಖಾಸಗಿ ಔತಣಕೂಟದ ನಂತರ ಅಧ್ಯಕ್ಷರು ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿದರು. ಈ ವಿಶಿಷ್ಟ ಗೌರವ ಪ್ರದಾನಕ್ಕಾಗಿ ಪ್ರಧಾನಿ ಭಾರತದ ಜನರ ಪರವಾಗಿ ಮ್ಯಾಕ್ರಾನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ನರೇಂದ್ರ ಮೋದಿಯವರ ಎರಡು ದಿನಗಳ ಫ್ರಾನ್ಸ್ ಭೇಟಿಯ ಮೊದಲ ದಿನದಂದು ಈ ಭೋಜನ ನಡೆಯಿತು. ʼʼಇಂದು ಸಂಜೆ ಎಲಿಸಿ ಅರಮನೆಯಲ್ಲಿ ನನಗೆ ಆತಿಥ್ಯ ನೀಡಿದ್ದಕ್ಕಾಗಿ ನಾನು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಶ್ರೀಮತಿ ಮ್ಯಾಕ್ರನ್ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಪ್ರಶಸ್ತಿಯನ್ನು “ಭಾರತ- ಫ್ರಾನ್ಸ್ ಪಾಲುದಾರಿಕೆಯ ಚೈತನ್ಯವನ್ನು ಸಾಕಾರಗೊಳಿಸುವ ಸಂಕೇತ” ಎಂದು ಬಣ್ಣಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: PM Modi France Visit: ಫ್ರಾನ್ಸ್‌ನಲ್ಲಿ ನರೇಂದ್ರ ಮೋದಿ ಝಲಕ್‌; ಭೇಟಿಯ ಪ್ರಮುಖ ಫೋಟೊಗಳು ಇಲ್ಲಿವೆ

ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿ ಮೋದಿ. ಹಿಂದೆ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಮಾಜಿ ಯುಎನ್ ಸೆಕ್ರೆಟರಿ-ಜನರಲ್ ಬೌಟ್ರೋಸ್ ಘಾಲಿ ಸೇರಿದಂತೆ ಕೆಲವು ಪ್ರಮುಖ ನಾಯಕರು ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪ್ರಶಸ್ತಿ ಪಡೆದಿದ್ದಾರೆ. ಜೂನ್‌ನಲ್ಲಿ ಈಜಿಪ್ಟ್ ಮೋದಿಯವರಿಗೆ ʼಆರ್ಡರ್ ಆಫ್ ದಿ ನೈಲ್ʼ ಪ್ರಶಸ್ತಿಯನ್ನು ನೀಡಿತು. ಮೋದಿಯವರು 2021ರಲ್ಲಿ ಭೂತಾನ್‌ನಿಂದ ʼಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋʼ, 2020ರಲ್ಲಿ ಯುಎಸ್‌ನಿಂದ ʼಲೀಜನ್ ಆಫ್ ಮೆರಿಟ್ʼ, 2019ರಲ್ಲಿ ರಷ್ಯಾದಿಂದ ʼಆರ್ಡರ್ ಆಫ್ ಸೇಂಟ್ ಆಂಡ್ರ್ಯೂʼ, 2019ರಲ್ಲಿ ಯುಎಇಯಿಂದ ʼಆರ್ಡರ್ ಆಫ್ ಜಾಯೆದ್ʼ ಮತ್ತು ʼಆರ್ಡರ್ ಆಫ್ ಅಬ್ದುಲಜೀಜ್ ಅಲ್ʼ, 2016ರಲ್ಲಿ ಸೌದಿ ಅರೇಬಿಯಾದಿಂದ ʼಸೌದ್ʼ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version