ನವದಹೆಲಿ : ಭಾರತದ ಜಿಡಿಪಿಯು 2023-24ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 8.4ರಷ್ಟು ಭರ್ಜರಿ ಪ್ರಗತಿಯಾಗಿರುವುದಕ್ಕೆ (GDP Growth) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯ ಮೂಲಕ ಅವರು ಆರ್ಥಿಕ ಬೆಳವಣಿಗೆಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
Robust 8.4% GDP growth in Q3 2023-24 shows the strength of Indian economy and its potential. Our efforts will continue to bring fast economic growth which shall help 140 crore Indians lead a better life and create a Viksit Bharat!
— Narendra Modi (@narendramodi) February 29, 2024
“2023-24ರ ಮೂರನೇ ತ್ರೈಮಾಸಿಕದಲ್ಲಿ 8.4% ಜಿಡಿಪಿ ಬೆಳವಣಿಗೆಯು ಭಾರತೀಯ ಆರ್ಥಿಕತೆಯ ಶಕ್ತಿ ಮತ್ತು ಅದರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ತ್ವರಿತ ಆರ್ಥಿಕ ಬೆಳವಣಿಗೆಯನ್ನು ಕಾಣಲು ನಮ್ಮ ಪ್ರಯತ್ನಗಳು ಮುಂದುವರಿಯಲಿದೆ. ಇದು 140 ಕೋಟಿ ಭಾರತೀಯರಿಗೆ ಉತ್ತಮ ಜೀವನವನ್ನು ನಡೆಸಲು ಮತ್ತು ವಿಕಸಿತ್ ಭಾರತವನ್ನು ರಚಿಸಲು ಸಹಾಯ ಮಾಡುತ್ತದೆ” ಎಂದು ಪ್ರಧಾನಿ ಪೋಸ್ಟ್ ಮಾಡಿದ್ದಾರೆ.
ಕಳೆದ ತ್ರೈಮಾಸಿಕದಲ್ಲಿ ಭರ್ಜರಿ ಪ್ರಗತಿ
ನವದೆಹಲಿ : ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP Growth) ಶೇಕಡಾ 8.4 ಕ್ಕೆ ಏರಿಕೆಯಾಗಿದೆ ಎಂದು ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಗುರುವಾರ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.4.3ರಷ್ಟಿತ್ತು. ಹೀಗಾಗಿ ನಿರೀಕ್ಷೆ ಮೀರಿದ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.
2023-24ರ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ (2011-12) ದರಗಳಲ್ಲಿ ಜಿಡಿಪಿ 43.72 ಲಕ್ಷ ಕೋಟಿ ರೂ.ಗೆ ಅಂದಾಜಿಸಲಾಗಿದೆ. ಇದು 2022-23 ರ ಮೂರನೇ ತ್ರೈಮಾಸಿಕದಲ್ಲಿ 40.35 ಲಕ್ಷ ಕೋಟಿ ರೂ ಆಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ 8.4 ರಷ್ಟು ಬೆಳವಣಿಗೆಯ ದರವನ್ನು ತೋರಿಸುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ವಿಶ್ಲೇಷಕರು ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7ಕ್ಕಿಂತ ಕಡಿಮೆ ಎಂದು ಅಂದಾಜಿಸಿದ್ದರು. ಆದರೆ, ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶವು ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ತೋರಿಸಿದೆ.
ಇದನ್ನೂ ಓದಿ : Nitasha Kaul : ಬ್ರಿಟನ್ ಲೇಖಕಿಯನ್ನು ಏರ್ಪೋರ್ಟ್ನಿಂದಲೇ ವಾಪಸ್ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ
ನಿರ್ಮಾಣ ಕ್ಷೇತ್ರದ ಎರಡಂಕಿ ಬೆಳವಣಿಗೆ ದರ (ಶೇ.10.7), ಉತ್ಪಾದನಾ ವಲಯದ ಬೆಳವಣಿಗೆ ದರ (ಶೇ.8.5) 2024ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಿದೆ ಎಂದು ಸರಕಾರ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 8.4 ರಷ್ಟು ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣವೇ ಈ ಕ್ಷೇತ್ರಗಳಲ್ಲಿನ ಬೆಳವಣಿಗೆಯಾಗಿದೆ.
ಇದರ ಪರಿಣಾಮವಾಗಿ, ಸಾಂಖ್ಯಿಕ ಸಚಿವಾಲಯವು ಈಗ ಪೂರ್ಣ ವರ್ಷದ ಜಿಡಿಪಿ ಬೆಳವಣಿಗೆಯು ಅಂದಾಜು ಶೇಕಡಾಕ 7.3ಕ್ಕಿಂತ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಿದೆ.. ಎರಡನೇ ಮುಂಗಡ ಅಂದಾಜಿನ ಪ್ರಕಾರ 2023-24ನೇ ಸಾಲಿಗೆ ಜಿಡಿಪಿ ಬೆಳವಣಿಗೆ ದರ ಶೇ.7.6ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಭಾರತದ ಸ್ಥಾನಮಾನವನ್ನು ದೃಢಪಡಿಸಿದೆ.