ನವದೆಹಲಿ: ತಮ್ಮನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪಾರ್ಹ ಪದಗಳಿಂದ ನಿಂದಿಸುತ್ತಿರುವುದರ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ (ಏಪ್ರಿಲ್ 25) ಮಾತನಾಡಿದ್ದಾರೆ. ಮಧ್ಯಪ್ರದೇಶದ ಮೊರೆನಾದಲ್ಲಿ ವಿಜಯ ಸಂಕಲ್ಪ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಹುಲ್ ಗಾಂಧಿ ಅವರ ಅವಹೇಳನಕಾರಿ ಹೇಳಿಕೆಗಳಿಂದ ಜನರು ವಿಚಲಿತರಾಗಬಾರದು ಎಂದು ಮನವಿ ಮಾಡಿದ್ದಾರೆ . ಬಿಜೆಪಿಯ “ಕಾಮ್ದಾರ್” (ಕಾರ್ಯಕರ್ತ) ಮತ್ತು ಕಾಂಗ್ರೆಸ್ ನ “ನಾಮ್ದಾರ್” (ರಾಜವಂಶ) ನಡುವೆ ವ್ಯತ್ಯಾಸವಿದೆ ಎಂದು ಹೇಳಿದ ಮೋದಿ, ವಿನಮ್ರ ಹಿನ್ನೆಲೆಯಿಂದ ಬಂದ ತಮ್ಮಂತವರಿಗೆ ಅವಮಾನಗಳು ಹೊಸತೇನಲ್ಲ ಎಂದು ಪ್ರತಿಪಾದಿಸಿದರು.
The Prime Minister responded to the insulting language used by Rahul Gandhi against him.#PMNarendraModi #PMModi #CongressLeader #RahulGandhi #InsultingLanguage #LokSabhaElections2024 pic.twitter.com/J2EJz95AeR
— Asianet Newsable (@AsianetNewsEN) April 25, 2024
ನನ್ನ ವಿರುದ್ಧ ರಾಹುಲ್ ಗಾಂಧಿ “ಶೆಹಜಾದಾ” (ಚಕ್ರವರ್ತಿಯ ಮಗ) ಎಂದು ಹೇಳಿಕೆ ನೀಡಿರುವ ಬಗ್ಗೆ ಅಭಿಮಾನಿಗಳು ಅಸಮಾಧಾನಗೊಳ್ಳಬಾರದು ಮತ್ತು ಕೋಪಗೊಳ್ಳಬಾರದು ಎಂದು ನಾನು ಕೈಮುಗಿದು ವಿನಂತಿಸುತ್ತೇನೆ. ನಾವು “ಕಾಮ್ ದಾರ್” ಗಳು ಮತ್ತು ರಾಹುಲ್ ಮತ್ತು ಅವರ ಪಕ್ಷದವರು “ನಾಮ್ ದಾರ್”ಗಳು. ಈ ”ನಾಮ್ ದಾರ್” ಗಳು ಹಲವಾರು ವರ್ಷಗಳಿಂದ “ಕಾಮ್ ದಾರ್” ಗಳನ್ನು ಅವಮಾನಿಸುತ್ತಲೇ ಇದ್ದಾರೆ ಎಂದು ಹೇಳಿದರು.
ಜನರು ಅವರ ಹೇಳಿಕೆಗಳನ್ನು ಕೇಳಿಸಿಕೊಂಡು ಸಮಯ ವ್ಯರ್ಥ ಮಾಡಬಾರದು ಹಾಗೂ ನಮ್ಮ ಗುರಿಯತ್ತ ಮುಂದುವರಿಯಬೇಕು. ಅವರು (ರಾಹುಲ್ ಗಾಂಧಿ) ತುಂಬಾ ಅಸಮಾಧಾನಗೊಂಡಿದ್ದಾರೆ ಮತ್ತು ಸಂಕಷ್ಟದಲ್ಲಿದ್ದಾರೆ. ಅವರು ಮುಂದಿನ ದಿನಗಳಲ್ಲಿ ನಮ್ಮನ್ನು ಇನ್ನಷ್ಟು ಅವಮಾನಿಸುತ್ತಾರೆ. ನಾನು ಸಾಮಾನ್ಯ ವ್ಯಕ್ತಿ , ನಾನು ಬಡ ಹಿನ್ನೆಲೆಯಿಂದ ಬಂದಿರುವವನು. ಆದ್ದರಿಂದ ಇಂತಹ ಅವಮಾನಗಳು ನನಗೆ ಹೊಸತಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: Lok Sabha Election 2024: 2ನೇ ಹಂತದ ಚುನಾವಣೆ; ಕಣದಲ್ಲಿರುವ ಟಾಪ್ 10 ಶ್ರೀಮಂತರಲ್ಲಿ ಕರ್ನಾಟಕದ ಐವರು!
ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಭಾರತದ ಚುನಾವಣಾ ಆಯೋಗ (ಇಸಿಐ) ಕ್ರಮ ಕೈಗೊಳ್ಳಲು ಮುಂದಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಧರ್ಮ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಮತ್ತು ವಿಭಜನೆಯನ್ನು ಪ್ರಚೋದಿಸುತ್ತಿವೆ ಎಂಬ ದೂರುಗಳು ದಾಖಲಾಗಿವೆ.
ಪ್ರಕರಣದ ದಾಖಲಿಸಿದ ಚುನಾವಣಾ ಆಯೋಗ
ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಚುನಾವಣಾ ಆಯೋಗವು ಜನ ಪ್ರತಿನಿಧ್ಯ ಕಾಯ್ದೆಯ ಸೆಕ್ಷನ್ 77 ಅನ್ನು ಅನ್ವಯಿಸಿದೆ. ಪಕ್ಷದ ಅಧ್ಯಕ್ಷರು ತಮ್ಮ ಸ್ಟಾರ್ ಪ್ರಚಾರಕರ ನಡವಳಿಕೆಗಳ ಮೇಲೆ ಕಣ್ಗಾವಲು ಇಟ್ಟಿದೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಮತ್ತು ರಾಹುಲ್ ಗಾಂಧಿ ವಿರುದ್ಧದ ಎಂಸಿಸಿ ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರ ನೀಡಬೇಕಾಗಿದೆ. ಏಪ್ರಿಲ್ 29 ರಂದು ಬೆಳಗ್ಗೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡಲು ಚುನಾವಣಾ ಆಯೋಗ ಅವರಿಬ್ಬರಿಗೆ ಗಡುವು ನಿಗದಿಪಡಿಸಿದೆ.
ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದ್ದು ಮೊದಲ ಹಂತ ಏಪ್ರಿಲ್ 19 ರಂದು ಮುಕ್ತಾಯಗೊಂಡಿದೆ. ಎರಡನೇ ಹಂತವು ಏಪ್ರಿಲ್ 26 ರಂದು ನಡೆಯಲಿದೆ. ಮುಂದಿನ ಹಂತಗಳು ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆಯಲಿವೆ. 543 ಲೋಕಸಭಾ ಕ್ಷೇತ್ರಗಳ ಫಲಿತಾಂಶ ಜೂನ್ 4ರಂದು ಹೊರಬೀಳಲಿದೆ.