ಮಾಸ್ಕೋ: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ (PM Modi Russia Visit) ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಅವರು ಭಾರತವು ಶಾಂತಿಯ ಪರವಾಗಿದೆ ಎಂದು ಜಗತ್ತಿಗೆ ಭರವಸೆ ನೀಡಿದರು. ಜತೆಗೆ ಭಾರತ ಮತ್ತು ರಷ್ಯಾ ನಡುವಿನ ಇಂಧನ ಪಾಲುದಾರಿಕೆಯನ್ನು ಶ್ಲಾಘಿಸಿದರು. ಜಾಗತಿಕ ಸಂಘರ್ಷಗಳಿಂದಾಗಿ ತೊಂದರೆಗೀಡಾದ ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಉಭಯ ರಾಷ್ಟ್ರಗಳ ಒಪ್ಪಂದ ಸಹಾಯ ಮಾಡಿದೆ ಎಂದು ಹೇಳಿದರು.
ಹೊಸ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಶಾಂತಿ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. . “ಬಾಂಬ್ಗಳು ಬಂದೂಕುಗಳು ಮತ್ತು ಗುಂಡುಗಳು ಶಾಂತಿ ಮಾತುಕತೆಗೆ ಪೂರಕವಲ್ಲ ಎಂದು ಘೋಷಿದರು.
ಜಗತ್ತು ಆಹಾರ, ಇಂಧನ ಮತ್ತು ರಸಗೊಬ್ಬರಗಳ ಕೊರತೆಯನ್ನು ಎದುರಿಸಿದಾಗ ಭಾರತ ಸರ್ಕಾರವು ರೈತರಿಗೆ ಸಮಸ್ಯೆಯಾಗಲು ಬಿಡಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ರಷ್ಯಾದ ಸಹಾಯದಿಂದ, ಭಾರತವು ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಜನ ಸಾಮಾನ್ಯರನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
“ಜಗತ್ತು ಇಂಧನಗಳ ಸವಾಲನ್ನು ಎದುರಿಸುತ್ತಿದ್ದಾಗ, ನಿಮ್ಮ ಬೆಂಬಲವು ಸಾಮಾನ್ಯ ಜನರ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯಗಳನ್ನು ಪೂರೈಸಲು ನಮಗೆ ಸಹಾಯ ಮಾಡಿತು. ಇದು ಮಾತ್ರವಲ್ಲ, ಇಂಧನಕ್ಕೆ ಸಂಬಂಧಿಸಿದ ಭಾರತ-ರಷ್ಯಾ ಒಪ್ಪಂದವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರುವಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದು ಜಗತ್ತು ಒಪ್ಪಿಕೊಡಿದೆ” ಎಂದು ಪ್ರಧಾನಿ ಮೋದಿ ಮಾಸ್ಕೋದಲ್ಲಿ ಹೇಳಿದರು.
ಸೋಮವಾರ ನಡೆದ ದ್ವಿಪಕ್ಷೀಯ ಸಭೆಯಲ್ಲಿ ತಾವು ಮತ್ತು ಪುಟಿನ್ ಉಕ್ರೇನ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಶಾಂತಿ ಮರುಸ್ಥಾಪನೆಗಾಗಿ, ಭಾರತವು ಎಲ್ಲಾ ರೀತಿಯಲ್ಲಿ ಸಹಕಾರಕ್ಕೆ ಸಿದ್ಧವಾಗಿದೆ. ಭಾರತವು ಶಾಂತಿಯ ಪರವಾಗಿದೆ ಎಂದು ನಾನು ನಿಮಗೆ ಮತ್ತು ವಿಶ್ವ ಸಮುದಾಯಕ್ಕೆ ಭರವಸೆ ನೀಡುತ್ತೇನೆ. ನನ್ನ ಸ್ನೇಹಿತ ಪುಟಿನ್ ನಿನ್ನೆ ಶಾಂತಿಯ ಬಗ್ಗೆ ಮಾತನಾಡುವುದನ್ನು ಕೇಳುವುದು ನನಗೆ ಭರವಸೆ ನೀಡಿದೆ, ಎಂದು ಅವರು ಹೇಳಿದರು.
“ಯುದ್ಧ, ಸಂಘರ್ಷಗಳು, ಭಯೋತ್ಪಾದಕ ದಾಳಿಗಳು ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರಿಗೂ ಬೇಸರ ತರಿಸುತ್ತದೆ. ಮುಗ್ಧ ಮಕ್ಕಳು ಕೊಲೆಯಾದಾಗ, ಮುಗ್ಧ ಮಕ್ಕಳು ಸಾಯುವುದನ್ನು ನೋಡಿದಾಗ, ಹೃದಯ ವಿದ್ರಾವಕವಾಗಿದೆ. ಆ ನೋವು ಅಪಾರ ಎಂದು ಹೇಳಿದರು.
2022 ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ದೇಶದೊಂದಿಗಿನ ವ್ಯಾಪಾರವನ್ನು ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರಿದವು. ವಿಶೇಷವಾಗಿ ತೈಲ ಮತ್ತು ರಸಗೊಬ್ಬರಗಳನ್ನು ಖರೀದಿಸುವುದನ್ನು ನಿಲ್ಲಿಸಲು ಹೇಳಿತ್ತು. ಆದರೆ, ಭಾರತ ಆ ನಿರ್ದೇಶನಗಳಿಂದ ಅಂತರ ಕಾಪಾಡಿಕೊಂಡಿತ್ತು. ಭಾರತ ತನ್ನ ಕಚ್ಚಾ ಮತ್ತು ತೈಲ ಖರೀದಿಯನ್ನು ಹೆಚ್ಚಿಸಿತು.