Site icon Vistara News

Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ

Paris Olympics 2024

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಸ್ಪರ್ಧಿಸಿದ್ದ ಭಾರತದ ಅಥ್ಲೀಟ್​ಗಳ ನಿಯೋಗವನ್ನು ಭೇಟಿಯಾಗಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಿಎಂ ಮೋದಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಆಗಸ್ಟ್ 15 ರಂದು ನಡೆಯಲಿರುವ ಸಮಾರಂಭದಲ್ಲಿ 117 ಕ್ರೀಡಾಪಟುಗಳ ಸಂಪೂರ್ಣ ಭಾರತೀಯ ತಂಡ ಭಾಗವಹಿಸುವ ನಿರೀಕ್ಷೆಯಿದೆ. ಬೆಳಗ್ಗಿನ ಕಾರ್ಯಕ್ರಮದ ನಂತರ ಪ್ರಧಾನಿ ಒಲಿಂಪಿಕ್ಸ್​​ನ ಭಾರತಕ್ಕೆ 6 ಪದಕಗಳನ್ನು ಮರಳಿ ತಂದ ಕ್ರೀಡಾಪಟುಗಳನ್ನು ಭೇಟಿ ಮಾಡಲಿದ್ದಾರೆ.

ಪ್ಯಾರಿಸ್​ನಲ್ಲಿ ಭಾರತದ ಪದಕ ವಿಜೇತರ ಜತೆ ಪ್ರಧಾನಿ ಫೋನ್ ಮಾಡಿ ಮಾತನಾಡಿದ್ದರು. ವೇದಿಕೆ ಏರಿದ್ದ ಕ್ರೀಡಾಪಟುಗಳಿಗೆ ತಮ್ಮ ಬೆಂಬಲ ವ್ಯಕ್ತಡಪಡಿಸಿದ್ದರು. ಕುಸ್ತಿ ಫೈನಲ್​ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮೋದಿ ಟ್ವೀಟ್ ಮಾಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಅಥ್ಲೀಟ್ಗಳು 6 ಪದಕಗಳನ್ನು ಗೆದ್ದಿದ್ದಾರೆ. ಟೋಕಿಯೊದಲ್ಲಿ ನಡೆದ ಹಿಂದಿನ ಒಲಿಂಪಿಕ್ಸ್​ನಲ್ಲಿ ಭಾರತ ಚಿನ್ನ ಸಮೇತ 7 ಪದಕ ಗೆದ್ದಿದ್ದರೆ, ಈ ಬಾರಿ ಭಾರತೀಯ ತಂಡವು 5 ಕಂಚಿನ ಪದಕಗಳು ಮತ್ತು ಒಂದು ಬೆಳ್ಳಿಯೊಂದಿಗೆ ಮರಳಿದೆ.

ಪ್ಯಾರಿಸ್ 2024 ಒಲಿಂಪಿಕ್ಸ್​ನಲ್ಲಿ ಭಾರತದ ಪ್ರದರ್ಶನವು ಸಾಧನೆಗಳು ಮತ್ತು ನಿರಾಶೆಗಳ ಮಿಶ್ರಣವಾಗಿದೆ. ಈ ಒಲಿಂಪಿಕ್ಸ್​ನಲ್ಲಿ ಭಾರತವು 10 ಪದಕಗಳ ಮೈಲುಗಲ್ಲು ದಾಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಲವು ಕ್ರೀಡಾಪಟುಗಳು ನಾಲ್ಕನೇ ಸ್ಥಾನ ಪಡೆದಿದ್ದರಿಂದ ಅದು ಸಾಧ್ಯವಾಗಲಿಲ್ಲ.

ಟೋಕಿಯೊ 2020 ರಲ್ಲಿ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ನೇತೃತ್ವದ ದೇಶದ ಅಥ್ಲೆಟಿಕ್ಸ್ ತಂಡವು ಗಮನಾರ್ಹ ಹೈಲೈಟ್ ಆಗಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿಯೊಂದಿಗೆ ಚೋಪ್ರಾ ಅಥ್ಲೆಟಿಕ್ಸ್​​ನಲ್ಲಿ ಭಾರತದ ಏಕೈಕ ಪದಕ ಗೆದ್ದರು, ಒಲಿಂಪಿಕ್ಸ್​​ನಲ್ಲಿ ಅಥ್ಲೆಟಿಕ್ಸ್​​ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದರು.

ಶೂಟಿಂಗ್ ಸಾಧನೆ

ಭಾರತದ ಶೂಟಿಂಗ್ ತಂಡವೂ ಗಮನಾರ್ಹ ಪ್ರಗತಿ ಸಾಧಿಸಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದರು, ಒಲಿಂಪಿಕ್ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮತ್ತೊಂದು ಪದಕವನ್ನು ಗೆದ್ದಿದ್ದರೆ. ಒಲಿಂಪಿಕ್ಸ್​​ನ ಒಂದು ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: Manu Bhaker : ಮದುವೆಯಾಗ್ತೀರಾ ಹೇಗೆ? ನೀರಜ್​ ಚೋಪ್ರಾ- ಮನು ಭಾಕರ್​ ಭೇಟಿಯ ವಿಡಿಯೊ ವೈರಲ್ ಮಾಡಿದ ನೆಟ್ಟಿಗರು

ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸಿದ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿತು. 1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಸತತವಾಗಿ ಪದಕಗಳನ್ನು ಗೆದ್ದಿದೆ. ಹರ್ಮನ್ ಪ್ರೀತ್ ಸಿಂಗ್ ಗಳಿಸಿದ ಗೋಲಿನ ನೆರವಿನಿಂದ ಭಾರತ ಒಲಿಂಪಿಕ್ಸ್ ನಲ್ಲಿ ದಾಖಲೆಯ 13ನೇ ಹಾಕಿ ಪದಕ ಜಯಿಸಿದೆ.

ಟೇಬಲ್ ಟೆನಿಸ್ನಲ್ಲಿ ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಬಾತ್ರಾ ಒಲಿಂಪಿಕ್ ಕ್ರೀಡಾಕೂಟದ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಅಕುಲಾ 16 ನೇ ಸುತ್ತು ಪ್ರವೇಶಿಸಿದ್ದರು.

Exit mobile version