ಬೆಂಗಳೂರು: ಲೋಕಸಭಾ ಚುನಾವಣೆ 2024ಕ್ಕೆ ಬಿಜೆಪಿ ತಯಾರಿ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದಲ್ಲಿ ಐದು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ. ಮಾರ್ಚ್ 15ರಿಂದ 19ರವರೆಗೂ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯದಲ್ಲಿ ನಮೋ ಮಿಂಚಿನ ಸಂಚಾರ ಮಾಡಲಿದ್ದು, ಕರ್ನಾಟಕದಿಂದಲೇ ಪ್ರವಾಸ ಆರಂಭಿಸಲಿದ್ದಾರೆ. ಮೋದಿ ಪ್ರಚಾರದ ಮೂಲಕ ಲೋಕಸಭಾ ಚುನಾವಣೆ ಅಖಾಡ ಮತ್ತಷ್ಟು ಕಾವು ಪಡೆಯಲಿದೆ.
ರಾಜ್ಯದಲ್ಲಿ ಮೋದಿ ಪ್ರವಾಸದ ವೇಳಾಪಟ್ಟಿ
- ಮಾರ್ಚ್ 15: ಬೆಂಗಳೂರಿಗೆ ಆಗಮಿಸಿ, ಕೋಲಾರ ಕ್ಷೇತ್ರದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅನ್ವಯ ಆಗುವಂತೆ ಚುನಾವಣಾ ಪ್ರಚಾರ ನಡೆಯಲಿದೆ.
- ಮಾರ್ಚ್ 17: ಶಿವಮೊಗ್ಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಕ್ಷೇತ್ರಕ್ಕೆ ಅನ್ವಯವಾಗುವಂತೆ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ.
- ಮಾರ್ಚ್ 18: ಬೀದರ್ಗೆ ಆಗಮಿಸಲಿದ್ದು, ಬೀದರ್, ಗುಲ್ಬರ್ಗ ಅನ್ವಯ ಆಗುವಂತೆ ಕಾರ್ಯಕ್ರಮ ಆಯೋಜನೆಯಾಗಿದೆ.
- ಮಾರ್ಚ್ 19: ಧಾರವಾಡಕ್ಕೆ ಪ್ರಧಾನಿ ಭೇಟಿ ನೀಡಲಿದ್ದು, ಧಾರವಾಡ, ಹಾವೇರಿ, ಬೆಳಗಾವಿಗೆ ಅನ್ವಯ ಆಗುವಂತೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದನ್ನೂ ಓದಿ | Lok Sabha Election: ಬಿಜೆಪಿಯೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಲು ಕಾರ್ಯಕರ್ತರಿಗೆ ಕುಮಾರಸ್ವಾಮಿ ತಾಕೀತು
5 ದಿನಗಳ ಪ್ರವಾಸದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯದಲ್ಲಿ ಸಾರ್ವಜನಿಕ ಸಭೆ, ರೋಡ್ ಶೋ ಹಾಗೂ ಎನ್‌ಡಿಎ ಸಮಾವೇಶದಲ್ಲಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ.
ಮಾ.15ರಂದು ರಾಜ್ಯದಲ್ಲಿ ಕೋಲಾರ ಸಭೆ ಬಳಿಕ ಕ್ರಮವಾಗಿ ಸೇಲಂ(TN), ಪಾಲಕ್ಕಾಡ್(KL) ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಾ.16ರಂದು ಕನ್ಯಾಕುಮಾರಿ(TN), ವಿಶಾಖಪಟ್ಟಣಂ(AP), ಜಹೀರಾಬಾದ್(TS), ಮಾ.17ರಂದು ಪತನಂತಿಟ್ಟ(KL), ಶಿವಮೊಗ್ಗ(KA), ಅಮರಾವತಿ(AP), ಮಾ.18ರಂದು ಮಲ್ಕಜ್‌ಗಿರಿ(TS), ಬೀದರ್(KA), ಕೊಯಮತ್ತೂರು(TN) ಹಾಗೂ ಮಾ.19ರಂದು ನಗರ್ ಕರ್ನೂಲ್(TS), ಧಾರವಾಡ(KA), ಏಲೂರು(AP) ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.