ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಹಲವು ರೀತಿಗಳಲ್ಲಿ ಫಲಪ್ರದವಾಗಿದೆ. ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದಲ್ಲಿ ಯೋಗ ಪ್ರದರ್ಶನ ನಡೆದುದು ಒಂದು ಮೈಲುಗಲ್ಲು ಆಗಿದ್ದರೆ, ದ್ವಿಪಕ್ಷೀಯ ಸಂಬಂಧ ವೃದ್ಧಿಯದೇ ಇನ್ನೊಂದು ಮೈಲುಗಲ್ಲಾಗಿದೆ. ಮುಖ್ಯವಾಗಿ ಭಾರತೀಯರಿಗೆ ದೊರೆಯಲಿರುವ ಹೆಚ್ಚಿನ ಅಮೆರಿಕ ವೀಸಾ, ರಕ್ಷಣಾ ಸಹಕಾರ ಇತ್ಯಾದಿಗಳ ದೃಷ್ಟಿಯಿಂದಲೂ ಈ ಭೇಟಿ ತುಂಬಾ ಯಶಸ್ವಿಯಾಗಿದೆ. ಭಾರತೀಯರಿಗೆ ನೇರವಾಗಿ ಸೇವೆಗಳನ್ನು ಒದಗಿಸುವ ದಿಸೆಯಲ್ಲಿ ಬೆಂಗಳೂರು ಹಾಗೂ ಅಹ್ಮದಾಬಾದ್‌ನಲ್ಲಿ ಹೊಸ ಕಾನ್ಸುಲೇಟ್ ಕಚೇರಿಗಳನ್ನು ಸ್ಥಾಪಿಸಲು ಅಮೆರಿಕ ಸರ್ಕಾರ ಉದ್ದೇಶಿಸಿದೆ. ಇದು ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯ ವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲಿದೆ.
ಮೋದಿ ಅವರ ಅಮೆರಿಕ ಭೇಟಿ ಹಿನ್ನೆಲೆಯಲ್ಲಿ ವೀಸಾ ನಿಯಮ ಬದಲಾವಣೆಗೆ ಜೋ ಬೈಡೆನ್ ಸರ್ಕಾರ ನಿರ್ಧರಿಸಿದ್ದು, ಹೆಚ್ಚಿನ ಎಚ್-1B ವೀಸಾ ನೀಡಿಕೆ, ವೀಸಾ ನಿಯಮ ಸರಳೀಕರಣ, ಕಾರ್ಮಿಕರು ಸೇರಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿರುವ ಭಾರತೀಯರು ಅಮೆರಿಕದಲ್ಲಿಯೇ ನೆಲೆಸಲು ತೊಡಕಾಗದಂತೆ ನೋಡಿಕೊಳ್ಳುವುದು ನೂತನ ಕ್ರಮಗಳಲ್ಲಿ ಸೇರಿದೆ. ಅಮೆರಿಕವು ಪ್ರತಿವರ್ಷ ಜಗತ್ತಿನ ಹಲವು ದೇಶಗಳ ಉದ್ಯೋಗಿಗಳಿಗೆ 65 ಸಾವಿರ ಎಚ್-1B ವೀಸಾ ನೀಡುತ್ತದೆ. ಅಡ್ವಾನ್ಸ್ಡ್ ಡಿಗ್ರಿ ಇರುವವರಿಗೆ 20 ಸಾವಿರ ಹೆಚ್ಚುವರಿ ವೀಸಾ ನೀಡುತ್ತದೆ. ಅಮೆರಿಕದಲ್ಲಿರುವ ಭಾರತ ಮೂಲದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಅಮೆಜಾನ್, ಅಲ್ಫಾಬೆಟ್ ಹಾಗೂ ಮೆಟಾ (ಫೇಸ್‌ಬುಕ್) ಸೇರಿ ಹಲವು ಕಂಪನಿಗಳು ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಿಂದ ಎಚ್-1B ವೀಸಾ ಪಡೆದವರಿಗೆ ಉದ್ಯೋಗ ನೀಡುತ್ತಿವೆ. ಹಾಗಾಗಿ, ಅಮೆರಿಕ ವೀಸಾ ನಿಯಮ ಸಡಿಲಗೊಳಿಸಿದರೆ ಭಾರತೀಯರಿಗೆ ಹೆಚ್ಚು ಅನುಕೂಲವಾಗಲಿದೆ.
ಭಾರತ ಹಾಗೂ ಅಮೆರಿಕದ ರಕ್ಷಣಾ ಸಹಕಾರ ಒಪ್ಪಂದ ಅಡಿಯಲ್ಲಿ ಭಾರತಕ್ಕೆ ಎಂಟು ಚಕ್ರಗಳ ಶಸ್ತ್ರಸಜ್ಜಿತ ವಾಹನಗಳಾದ ಸ್ಟ್ರೈಕರ್, ಎಂ777 ಹೌವಿಟ್ಜರ್ ಗನ್‌ಗಳ ನವೀಕರಣ, ಎಂಕ್ಯೂ-9 ರೀಪರ್ ಡ್ರೋನ್‌ಗಳ ಹಾಗೂ ಭಾರತದಲ್ಲಿಯೇ ಜಿಇ-ಎಫ್414 ಯುದ್ಧವಿಮಾನಗಳ ಎಂಜಿನ್‌ಗಳನ್ನು ಉತ್ಪಾದನೆ ಮಾಡಲು ಶೇ.100ರಷ್ಟು ತಂತ್ರಜ್ಞಾನದ ವರ್ಗಾವಣೆಗೆ ಅಮೆರಿಕ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಿಂದ ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಹಕಾರ ಸಂಬಂಧವು ಇನ್ನಷ್ಟು ವೃದ್ಧಿಯಾಗಲಿದೆ. ಭಾರತದಲ್ಲಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆ, ಅಭಿವೃದ್ಧಿಯ ದಿಸೆಯಲ್ಲೂ ಮೋದಿ ಅವರು ಮತ್ತೊಂದು ಮಹತ್ವದ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಭಾರತದಲ್ಲಿ ಚಿಪ್ ಘಟಕ ಸ್ಥಾಪನೆ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿಗೆ ಮೈಕ್ರಾನ್ ಕಂಪನಿ ಜತೆ 2.7 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದವನ್ನೂ ಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ವಿಶ್ವಸಂಸ್ಥೆಯಲ್ಲಿ ಅಭೂತಪೂರ್ವ ಯೋಗ ದಿನ, ಭಾರತಕ್ಕೆ ಹೆಮ್ಮೆ
ʼʼಮೂರು ದಶಕಗಳ ಹಿಂದೆ ಶ್ವೇತಭವನವನ್ನು ನಾನು ಹೊರಗಿನಿಂದ ನೋಡಿದ್ದೆ. ಪ್ರಧಾನಿಯಾದ ಬಳಿಕ ಅದರ ಒಳಗೆ ಬರುವಂತಾಗಿದೆ. ಜತೆಗೆ ಇಷ್ಟೊಂದು ಭಾರತೀಯರು ಶ್ವೇತಭವನದ ಒಳಗೆ ಸೇರುವಂತಾಗಿದೆʼʼ ಎಂದು ಮೋದಿಯವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಶ್ವೇತಭವನದ ಹುಲ್ಲುಹಾಸಿನಲ್ಲಿ ಆಡಿದ ಮಾತುಮ ವೈಯಕ್ತಿಕವಾಗಿ ಅವರಿಗೆ ಮಾತ್ರವಲ್ಲದೆ, ಎಲ್ಲ ಭಾರತೀಯರಿಗೆ ಸಲ್ಲುವ ಅರ್ಥಪೂರ್ಣ ಮಾತಾಗಿದೆ. ʼʼಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯದ ತಿರುಳು ಇರುವುದು ಉಭಯ ದೇಶಗಳ ಜನರ ನಡುವಿನ ಬಾಂಧವ್ಯದಲ್ಲಿ. ನನಗೆ ತೋರಿಸಿದ ಪ್ರೀತಿಯು ಭಾರತದ 140 ಕೋಟಿ ಜನತೆಗೆ ಸಲ್ಲಿಸಿದ ಗೌರವವಾಗಿದೆʼʼ ಎಂದು ಮೋದಿ ಹೇಳಿದ್ದಾರೆ. ಅಮೆರಿಕವನ್ನು ಪ್ರಗತಿ ಹೊಂದಿದ, ವೈವಿಧ್ಯಮಯ ಒಕ್ಕೂಟ ರಾಷ್ಟ್ರವಾಗಿ ಕಟ್ಟುವುದರಲ್ಲಿ ಬಹು ಮಂದಿ ಭಾರತೀಯರ ಪಾತ್ರವಿದೆ. ಹಾಗೆಯೇ ಭಾರತದ ಸಶಕ್ತತೆಗೆ ಅಮೆರಿಕದ ರಕ್ಷಣಾ, ವಾಣಿಜ್ಯ ಸಹಕಾರವೂ ಅಗತ್ಯವಾಗಿದೆ. ಎರಡೂ ದೇಶಗಳು ವ್ಯೂಹಾತ್ಮಕ, ವಾಣಿಜ್ಯಕ ಹಾಗೂ ಮಾನವ ಸಂಪನ್ಮೂಲ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ಬಹುದೂರ ಜೊತೆಯಾಗಿ ಕ್ರಮಿಸಬಲ್ಲವಾಗಿವೆ. ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇದನ್ನು ಸಾಧಿಸಬಲ್ಲ ಹಾದಿಯಲ್ಲಿ ಜತೆಯಾಗಿ ಮುನ್ನಡೆಯಲು ಶ್ರಮಿಸುವ ಒಮ್ಮತ ಹೊಂದಿರುವುದು ಸಂತೋಷದ ವಿಷಯ.