ನವದೆಹಲಿ: ನಿರುದ್ಯೋಗ ಹೆಚ್ಚಳ ಮತ್ತು ಹಣದುಬ್ಬರ ಭಾರತೀಯ ಮತದಾರರ ಪ್ರಮುಖ ಕಾಳಜಿಯಾಗಿದೆ. ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿಯವರ (Narendra Modi ) ಬಲವಾದ ನಾಯಕತ್ವ ಮತ್ತು ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನವು ಮೋದಿಯ ಕಡೆಗಿನ ಜನರ ಒಲವನ್ನು ಹಾಗೆಯೇ ಉಳಿಸಿಕೊಂಡಿದೆ ಎಂಬುದಾಗಿ ಸಮೀಕ್ಷೆಯೊಂದು ಹೇಳಿದೆ. ಹೀಗಾಗಿ ನರೇಂದ್ರ ಮೋದಿ ಮೂರನೇ ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡುವುದು ಖಚಿತ ಎಂದು ಹೇಳಿದೆ. ಲೋಕನೀತಿ-ಸಿಎಸ್ಡಿಎಸ್ ಸಮೀಕ್ಷೆಯಲ್ಲಿ ಮೋದಿಯ ಮರುಆಯ್ಕೆಯ ವಿವರಗಳು ಬಹಿರಂಗಗೊಂಡಿವೆ.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೇಶೀಯ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡಿದ ಹೊರತಾಗಿಯೂ ಉದ್ಯೋಗಗಳ ಸೃಷ್ಟಿಯು ಇನ್ನೂ ಒಂದು ಸವಾಲಾಗಿದೆ. ಆದರೆ, ಭಾರತದ 1.4 ಬಿಲಿಯನ್ ಜನರಿಗೆ ಭಾರತದ ಜಾಗತಿಕ ಬೆಳವಣಿಗೆಯ ಪ್ರಯೋಜನಗಳು ಸಂಪೂರ್ಣವಾಗಿ ದೊರೆಯುತ್ತಿವೆ ಎಂದು ಸಮೀಕ್ಷೆ ವಿವರಿಸುತ್ತವೆ.
ಭಾರತವು ಏಪ್ರಿಲ್ 19ರಂದು 7 ಹಂತಗಳ ಸಾರ್ವತ್ರಿಕ ಚುನಾವಣೆಗಾಗಿ ಮತದಾನ ಪ್ರಾರಂಭಿಸುತ್ತದೆ. ಇಲ್ಲಿ ಪ್ರಧಾನಿ ಮೋದಿ ಸುಲಭವಾಗಿ ಗೆಲ್ಲುವ ನಿರೀಕ್ಷೆಯಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಭಾರತದ 28 ರಾಜ್ಯಗಳ ಪೈಕಿ 19 ರಾಜ್ಯಗಳಲ್ಲಿ ಲೋಕನೀತಿ-ಸಿಎಸ್ಡಿಎಸ್ ಸಮೀಕ್ಷೆ ನಡೆಸಿದ 10,000 ಮತದಾರರಲ್ಲಿ 27% ರಷ್ಟು ನಿರುದ್ಯೋಗವು ಪ್ರಾಥಮಿಕ ಕಾಳಜಿಯಾಗಿ ವ್ಯಕ್ತಗೊಂಡಿದೆ. ಬೆಲೆ ಏರಿಕೆಯು 23% ರಷ್ಟು ಮಂದಿಗೆ ಆತಂಕದ ವಿಚಾರವಾಗಿದೆ ಎಂದು ಹಿಂದೂ ಪತ್ರಿಕೆ ವರದಿ ಮಾಡಿದೆ.
ಕಳೆದ ಐದು ವರ್ಷಗಳಲ್ಲಿ ಉದ್ಯೋಗ ಹುಡುಕುವುದೇ ಹೆಚ್ಚು ಕಷ್ಟಕರವಾಗಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಸುಮಾರು ಮೂರನೇ ಎರಡರಷ್ಟು ಅಥವಾ 62% ಜನರು ಹೇಳಿದ್ದಾರೆ.
ಮೋದಿಗೆ ರಾಮನ ಶ್ರೀರಕ್ಷೆ
ಅಯೋಧ್ಯೆಯಲ್ಲಿ ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯ ದೇವಾಲಯವನ್ನು ನಿರ್ಮಿಸಿರುವುದು ಪ್ರಧಾನಿ ಮೋದಿ ಸರ್ಕಾರದ “ಹೆಚ್ಚು ಇಷ್ಟವಾದ ಕ್ರಮ” ಎಂದು ಸಮೀಕ್ಷೆಯಲ್ಲಿ ಭಾಗಿಯಾದ 22% ಜನರು ಹೇಳಿದ್ದಾರೆ. ಅದರಲ್ಲಿ 8% ಜನರು ಇದು ತಮ್ಮ ಪ್ರಾಥಮಿಕ ಕಾಳಜಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Narendra Modi : ಅಂಬೇಡ್ಕರ್ ಮತ್ತೆ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ; ಮೋದಿ ಹೀಗೆ ಹೇಳಲು ಕಾರಣವೇನು?
ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಹಾಗೂ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೆ ನಿರುದ್ಯೋಗ ಮತ್ತು ಹಣದುಬ್ಬರವು ಇನ್ನೂ ಕಾಡುತ್ತಿದೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮೊದಲು 2013/14 ರಲ್ಲಿ 4.9% ರಿಂದ ನಿರುದ್ಯೋಗ ದರವು 2022/23 ರಲ್ಲಿ 5.4% ಕ್ಕೆ ಏರಿದೆ. 15-29 ವರ್ಷ ವಯಸ್ಸಿನ ಸುಮಾರು 16% ನಗರ ಯುವಕರು ಕಳಪೆ ಕೌಶಲ ಮತ್ತು ಗುಣಮಟ್ಟದ ಉದ್ಯೋಗಗಳ ಕೊರತೆಯಿಂದಾಗಿ 2022/23 ರಲ್ಲಿ ನಿರುದ್ಯೋಗಿಗಳಾಗಿ ಉಳಿದಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ತೋರಿಸುತ್ತವೆ.
ಸಮೀಕ್ಷೆಯಲ್ಲಿ ಭಾಗಿಯಾದ ಕನಿಷ್ಠ 48% ಜನರು ದೇವಾಲಯವು ಹಿಂದೂಗಳ ಹೆಗ್ಗುರತನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತ ಎಲ್ಲರಿಗೂ ಸೇರಿದ್ದು ಎಂಬ ಅಭಿಪ್ರಾಯವೂ ವ್ಯಕ್ತಗೊಂಡಿದೆ.
ಕಳೆದ ವರ್ಷ ಜಿ 20 ಸಮ್ಮೇಳನದ ಭಾರತದ ಅಧ್ಯಕ್ಷತೆ ಮತ್ತು ಸೆಪ್ಟೆಂಬರ್ನಲ್ಲಿ ನವದೆಹಲಿ ಜಿ 20 ನಾಯಕರನ್ನು ಆತಿಥ್ಯ ವಹಿಸುವಂತಹ ಹೆಚ್ಚು ಜನಪ್ರಿಯತೆ ಪಡೆದ ಕಾರ್ಯಕ್ರಮಗಳ ಮೂಲಕ ಭಾರತ ಬೆಳೆಯುತ್ತಿದೆ ಎಂದು ಮತದಾರರು ಅಭಿಪ್ರಾಯಪಟ್ಟಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಸುಮಾರು 8 ಪ್ರತಿಶತದಷ್ಟು ಜನರು ಭಾರತದ ಅಂತಾರಾಷ್ಟ್ರೀಯ ಮೌಲ್ಯ ತಂದುಕೊಟ್ಟ ಸರ್ಕಾರದ ಪ್ರಯತ್ನವನ್ನು ಇಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ.