ಬೆಂಗಳೂರು: ʼನಮ್ಮ ಮೆಟ್ರೋ’ದ (Namma Metro) ಬಹುನಿರೀಕ್ಷಿತ ಮೂರನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ (Central Cabinet) ಶುಕ್ರವಾರ ಅನುಮೋದನೆ ನೀಡಿದೆ. ಈ ಮೂರನೇ ಹಂತದಲ್ಲಿ ಹೊಸದಾಗಿ ಎರಡು ಕಾರಿಡಾರ್‌ಗಳಲ್ಲಿ 44.65 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಇದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೀಡಿರುವ ವರಮಹಾಲಕ್ಷ್ಮಿ (Varamahalkshmi Festival) ಹಬ್ಬದ ಕೊಡುಗೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಸಂತಸ ವ್ಯಕ್ತಪಡಿಸಿದ್ದಾರೆ.
“ಬಹು ನಿರೀಕ್ಷಿತ ₹15,611 ಕೋಟಿ ವೆಚ್ಚದ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-3ರ ಎರಡು ಪಥಗಳ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ನಾನು ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ಕೇಂದ್ರ ಸರಕಾರವು ಬೆಂಗಳೂರು ನಗರದ ಜನತೆಗೆ ನೀಡಿರುವ ವರ ಮಹಾಲಕ್ಷ್ಮೀ ಹಬ್ಬದ ಉಡುಗೊರೆ ಎಂದೇ ನಾನು ಭಾವಿಸಿದ್ದೇನೆ. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಉತ್ತೇಜನ ನೀಡುತ್ತಿರುವ ಮಾನ್ಯ ಪ್ರಧಾನಿಗಳಿಗೆ ನನ್ನ ಧನ್ಯವಾದಗಳು” ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸಂಸದರಾದ ಬಸವರಾಜ ಬೊಮ್ಮಾಯಿ, ಪಿಸಿ ಮೋಹನ್, ತೇಜಸ್ವಿ ಸೂರ್ಯ ಕೂಡ ಇದನ್ನು ಸ್ವಾಗತಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಹು ನಿರೀಕ್ಷಿತ ₹15,611 ಕೋಟಿ ವೆಚ್ಚದ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-3ರ ಎರಡು ಪಥಗಳ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ನಾನು ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರನ್ನು ಅಭಿನಂದಿಸುತ್ತೇನೆ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 16, 2024
ಕೇಂದ್ರ ಸರಕಾರವು ಬೆಂಗಳೂರು ನಗರದ ಜನತೆಗೆ ನೀಡಿರುವ ವರ ಮಹಾಲಕ್ಷ್ಮೀ ಹಬ್ಬದ ಉಡುಗೊರೆ ಎಂದೇ… pic.twitter.com/mLd89uFMwH
ಎಲ್ಲಿಂದ ಎಲ್ಲಿವರೆಗೆ ಮೆಟ್ರೋ ಮಾರ್ಗ?
ಉದ್ದೇಶಿತ ಕಾರಿಡಾರ್-1ರಡಿ ಜೆ.ಪಿ.ನಗರ 4ನೇ ಹಂತದಿಂದ ಹೊರವರ್ತುಲ ರಸ್ತೆ ಮೂಲಕ ಹೆಬ್ಬಾಳದ ಕೆಂಪಾಪುರದವರೆಗೆ 32.15 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 21 ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಜೆ.ಪಿ.ನಗರ 4ನೇ ಹಂತ-ಕೆಂಪಾಪುರ ಮೆಟ್ರೋ ಮಾರ್ಗವು ಕೆ.ಆರ್.ಪುರ-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದೊಂದಿಗೆ ಸಂಪರ್ಕ ಬೆಸೆಯಲಿದೆ. ಅಲ್ಲದೆ, ಹಸಿರು ಬಣ್ಣದ ಮಾರ್ಗಕ್ಕೂ ಸಂಪರ್ಕ ಬೆಸೆಯಲಿದೆ. ಸಾರಕ್ಕಿ ಜಂಕ್ಷನ್‌ನಲ್ಲೂ ಇಂಟರ್‌ಚೇಂಜ್ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆಗಳಿವೆ.
ಕಾರಿಡಾರ್-2ರಡಿ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 12.50 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳು ಇರಲಿವೆ. ಈ ಮೆಟ್ರೋ ಯೋಜನೆಯು ಉಪನಗರ ರೈಲು, ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ 9 ಕಡೆ ಸಂಪರ್ಕ ಕಲ್ಪಿಸುತ್ತದೆ. ಸುಮನಹಳ್ಳಿ ಜಂಕ್ಷನ್‌ನಲ್ಲಿ ಇಂಟರ್‌ಚೇಂಜ್ ನಿಲ್ದಾಣ ನಿರ್ಮಾಣವಾಗಲಿದೆ.
ಮೆಟ್ರೋ 3ನೇ ಹಂತದ ಯೋಜನೆಗೆ 15,611 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು, 2029ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಮೆಟ್ರೋ 3ನೇ ಹಂತದಡಿ 44.65 ಕಿ.ಮೀ. ಮಾರ್ಗ ನಿರ್ಮಾಣದೊಂದಿಗೆ ಬೆಂಗಳೂರಿನ ಮೆಟ್ರೋ ಜಾಲವು 220.20 ಕಿ.ಮೀ.ಗೆ ವಿಸ್ತರಿಸಲ್ಪಡಲಿದೆ. ಈ ಬಹುನಿರೀಕ್ಷಿತ ಮೆಟ್ರೋ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ಕೊಟ್ಟಿದೆ.
ಕಾರಿಡಾರ್-1ರಲ್ಲಿನ ನಿಲ್ದಾಣಗಳು
ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ 5ನೇ ಹಂತ, ಜೆ.ಪಿ.ನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್ ನಿಲ್ದಾಣ, ಹೊಸಕೆರೆಹಳ್ಳಿ ಕ್ರಾಸ್, ಪಿಇಎಸ್ ಕಾಲೇಜು, ಮೈಸೂರು ರಸ್ತೆಯ ನಾಗರಬಾವಿ ವೃತ್ತ, ವಿನಾಯಕ ಲೇಔಟ್, ಅಂಬೇಡ್ಕರ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜು, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್, ಸುಮನಹಳ್ಳಿ ಜಂಕ್ಷನ್, ಚೌಡೇಶ್ವರಿನಗರ, ಫ್ರೀಡಂ ಫೈಟರ್ ಕ್ರಾಸ್, ಕಂಠೀರವ ಸ್ಟುಡಿಯೋ, ಪೀಣ್ಯ, ಬಾಹುಬಲಿನಗರ, ಬಿಇಎಲ್ ವೃತ್ತ, ಪಟೇಲಪ್ಪ ಲೇಔಟ್, ಹೆಬ್ಬಾಳ, ಕೆಂಪಾಪುರ.
ಕಾರಿಡಾರ್-2ರಲ್ಲಿನ ನಿಲ್ದಾಣಗಳು
ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ವಿನಾಯಕ ನಗರ, ಸುಮನಹಳ್ಳಿ ಜಂಕ್ಷನ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಫಾರೆಸ್ಟ್ ಗೇಟ್, ಕಡಬಗೆರೆ.
ಇದನ್ನೂ ಓದಿ: Namma Metro: ಹಸಿರು ಮಾರ್ಗದಲ್ಲಿ ಇಂದಿನಿಂದ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ