ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ (Lok Sabha Election 2024) ನಾಮಪತ್ರ (Narendra modi nomination) ಸಲ್ಲಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸಂದರ್ಭದಲ್ಲಿ ಅವರೊಂದಿಗೆ ಇದ್ದರು. ನಿನ್ನೆ ಪ್ರಧಾನಿ ಮೋದಿ ವಾರಾಣಸಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದರು.
ಪ್ರಧಾನಿ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸುವಾಗ ಅವರ ಜೊತೆಗೆ ನಾಲ್ಕು ಅನುಮೋದಕರು (proposers) ಇದ್ದರು. ಆ ನಾಲ್ವರು ಯಾರು? ಅವರು ಹೆಸರುಗಳು ಇಲ್ಲಿವೆ. ಈ ನಾಲ್ವರೂ ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ನಾಲ್ವರೂ ವಾರಾಣಸಿ ಲೋಕಸಭೆ ಕ್ಷೇತ್ರದವರಾಗಿರಬೇಕು ಎಂಬ ನಿಯಮ ಇರುವುದರಿಂದ, ಅಲ್ಲಿಯವರನ್ನು ಅಯ್ದುಕೊಳ್ಳಲಾಗಿದೆ.
ಪಂಡಿತ್ ಗಣೇಶ್ವರ ಶಾಸ್ತ್ರಿ: ಬ್ರಾಹ್ಮಣ ಸಮುದಾಯದ ಸದಸ್ಯ. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನೆಗೆ ಮಂಗಳಕರ ಸಮಯವನ್ನು ನಿರ್ಧರಿಸಿದವರು.
ಬೈಜನಾಥ್ ಪಟೇಲ್: ಹಿರಿಯ RSS ಸ್ವಯಂಸೇವಕ, OBC ಸಮುದಾಯಕ್ಕೆ ಸೇರಿದವರು.
ಲಾಲ್‌ಚಂದ್ ಕುಶ್ವಾಹಾ: ಲಾಲ್‌ಚಂದ್ ಕುಶ್ವಾಹಾ ಕೂಡ ಒಬಿಸಿ ಸಮುದಾಯದವರು.
ಸಂಜಯ್ ಸೋಂಕರ್: ಇವರು ದಲಿತ ಸಮುದಾಯದಿಂದ ಬಂದವರು.
“… ನಮಗೆ ಬೆಳಿಗ್ಗೆ ಮಾಹಿತಿ ಸಿಕ್ಕಿತು. ಪಕ್ಷದ ಕಾರ್ಯಕರ್ತನಾಗಿ ನನಗೆ ವಹಿಸಿದ ಕೆಲಸಗಳನ್ನು ಮಾಡುತ್ತಿದ್ದೇನೆ. ನನಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ…, ”ಎಂದು ಸೋಂಕರ್ ಮಾಧ್ಯಮಗಳಿಗೆ ತಿಳಿಸಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ, ಪ್ರಧಾನಿ ಮೋದಿಯವರ ಪ್ರತಿಪಾದಕರು ಕೃಷಿ ವಿಜ್ಞಾನಿ, ಬಿಎಚ್‌ಯು ಮಹಿಳಾ ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲರು, ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ವಾರಣಾಸಿ ಘಾಟ್‌ಗಳ ಮುಖ್ಯ ದಹನಕಾರ ಹೀಗೆ ವಿವಿಧ ಹಿನ್ನೆಲೆಗಳಿಂದ ಬಂದವರಾಗಿದ್ದರು.
ಪ್ರತಿಯೊಬ್ಬ ಚುನಾವಣಾ ಅಭ್ಯರ್ಥಿಯು ಅನುಮೋದಕರನ್ನು ಹೊಂದಿರಬೇಕು. ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಇವರು ಅಭ್ಯರ್ಥಿಯ ನಾಮನಿರ್ದೇಶನವನ್ನು ಅನುಮೋದಿಸುವ ಅಸೆಂಬ್ಲಿ ಅಥವಾ ಸಂಸದೀಯ ಕ್ಷೇತ್ರದ ನೋಂದಾಯಿತ ಮತದಾರರಾಗಿರಬೇಕು. ಅಭ್ಯರ್ಥಿಯ ನಾಮನಿರ್ದೇಶನ ಪತ್ರಗಳಿಗೆ ಪ್ರಸ್ತಾವನೆದಾರರು ಮತ್ತು ಅಭ್ಯರ್ಥಿ ಸಹಿ ಮಾಡಬೇಕು. ಜನತಾ ಪ್ರಾತಿನಿಧ್ಯ ಕಾಯಿದೆ, 1951ರ ಪ್ರಕಾರ, ಮಾನ್ಯತೆ ಪಡೆದ ರಾಜ್ಯ ಅಥವಾ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ಒಬ್ಬ ಅನುಮೋದಕರ ಅಗತ್ಯವಿರುತ್ತದೆ. ಆದರೆ ಸ್ವತಂತ್ರ ಅಥವಾ ಗುರುತಿಸದ ಪಕ್ಷದ ಅಭ್ಯರ್ಥಿಗೆ 10 ಜನರ ಅಗತ್ಯವಿದೆ.
ನಾಮಪತ್ರ ಸಲ್ಲಿಕೆಯ ಸಮಯ ನಿಗದಿ ಹೇಗೆ?
ಪ್ರಧಾನಿ ಮೋದಿ ನಾಮಪತ್ರವನ್ನು ಬೆಳಗ್ಗೆ 11:40 ರಿಂದ ಮಧ್ಯಾಹ್ನ 12:00 ರ ಅವಧಿಯಲ್ಲಿ ಸಲ್ಲಿಸುತ್ತಿದ್ದಾರೆ. ಈ ಸಮಯವು ಮಂಗಳಕರವಾದ ಪುಷ್ಯ ನಕ್ಷತ್ರ ಮತ್ತು ಗಂಗಾ ಸಪ್ತಮಿಯೊಂದಿಗೆ ಹೊಂದಿಕೆಯಾಗುತ್ತದೆ. ಜ್ಯೋತಿಷಿ ಪಂ. ರಿಷಿ ದ್ವಿವೇದಿ ಅವರ ಪ್ರಕಾರ, ಈ ತಾರಾ ಜೋಡಣೆಯು ಶುಭ ಮತ್ತು ಇಷ್ಟಾರ್ಥಗಳ ನೆರವೇರಿಕೆಯನ್ನು ಸೂಚಿಸುತ್ತದೆ. ಪುಷ್ಯ ನಕ್ಷತ್ರದ ಸಮಯದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವುದು ಅವುಗಳ ಯಶಸ್ವಿ ಪೂರ್ಣಗೊಳಿಸುವಿಕೆಯನ್ನು ಖಚಿತಪಡಿಸುತ್ತದೆ ಎಂದು ನಂಬಲಾಗಿದೆ.
ನಾಮಪತ್ರ ಸಲ್ಲಿಕೆಗೂ ಮುನ್ನ ವಾರಾಣಸಿಯಲ್ಲಿರುವ ದಶಾಶ್ವಮೇಧ ಘಾಟ್‌ಗೆ ಭೇಟಿ ಕೊಟ್ಟ ಮೋದಿ ಗಂಗಾ ನದಿಗೆ ಪೂಜೆ ಸಲ್ಲಿಸಿದರು. ಐದು ಅರ್ಚಕರ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಗಂಗಾ ನದಿ(Ganga River)ಗೆ ಪ್ರಧಾನಿ ಆರತಿ ಬೆಳಗಿದರು.
ಇನ್ನು ಇದಕ್ಕೂ ಮುನ್ನ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪ್ರಧಾನಿ ಗಂಗಾ ನದಿಯ ಜೊತೆಗಿನ 10 ವರ್ಷಗಳ ನಂಟಿಗೆ ಸಂಬಂಧಿಸಿದ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಅಲ್ಲದೇ ಗಂಗಾ ಮಾತೆ ನನ್ನನ್ನು ದತ್ತು ಪಡೆದಿದ್ದಾಳೆ. ಈ ಹತ್ತು ವರ್ಷಗಲ್ಲಿ ನನ್ನ ಮತ್ತು ಗಂಗಾಮಾತೆಯ ಜೊತೆಗಿನ ನಂಟು ಮತ್ತಷ್ಟು ಬಲಿಷ್ಠವಾಗಿದೆ ಎಂದು ಬರೆದಿಕೊಂಡಿದ್ದಾರೆ. ದಶಾಶ್ವಮೇಧ ಘಾಟ್ ಭೇಟಿ ಬಳಿಕ ಪ್ರಧಾನಿ ವಾರಾಣಸಿಯಲ್ಲಿರುವ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ದಿನ ಅಂದರೆ ಸೋಮವಾರ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದ್ವಾರದಿಂದ ಅದ್ಧೂರಿ ರೋಡ್ ಶೋ ನಡೆಸಿದರು. ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದರು. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸದರು. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಯಿತು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಿದ್ದರು. ರೋಡ್ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.
ಇದನ್ನೂ ಓದಿ: Narendra Modi: ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾರತಿ ಮಾಡಿದ ಮೋದಿ-ಇಲ್ಲಿದೆ ಲೈವ್