Site icon Vistara News

PM Narendra Modi: ಇಂದು ಸಂಜೆ ನರೇಂದ್ರ ಮೋದಿ ಸಂಪುಟ ಮೊದಲ ಸಭೆ; ಏನು ಅಜೆಂಡಾ?

pm narendra Modi Cabinet

ಹೊಸದಿಲ್ಲಿ: ಇಂದು ಸಂಜೆ 5 ಗಂಟೆಗೆ ನರೇಂದ್ರ ಮೋದಿ (PM Narendra Modi) ಅವರ ಮೂರನೇ ಅವಧಿಯ ಸರ್ಕಾರದ (Modi 3.0) ಮೊದಲ ಸಂಪುಟ ಸಭೆ (Cabinet meeting) ನಡೆಯಲಿದೆ. ಪ್ರಧಾನಿಯವರ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಸಭೆ ಆಯೋಜನೆಗೊಂಡಿದೆ.

ನಿನ್ನೆ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಪ್ರಧಾನಿಯಾಗಿ ಮೋದಿ ಇನ್ನಿತರ 72 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಂದ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಕರ್ನಾಟಕದ ಐವರೂ ಸೇರಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರೊಂದಿಗೆ ಇಂದು ಮೋದಿ ಸಭೆ ನಡೆಸಲಿದ್ದಾರೆ.

ಮೋದಿ 3.0 ಸರ್ಕಾರದ ಮೊದಲ ಸಂಪುಟ ಸಭೆ ಇದಾಗಿದೆ. ಇದೇ ಸಂದರ್ಭದಲ್ಲಿ ನೂತನ ಸಚಿವರಿಗೆ ಔತಣಕೂಟವನ್ನೂ ಮೋದಿ ಏರ್ಪಡಿಸಿದ್ದಾರೆ. ಇದೇ ಸಭೆಯಲ್ಲಿ ಖಾತೆ ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮಿತ್ರ ಪಕ್ಷಗಳು ನಿರ್ದಿಷ್ಟ ಖಾತೆಗೆ ಡಿಮ್ಯಾಂಡ್ ಮಾಡಿವೆ.

ಬಿಹಾರದ ನಿತೀಶ್‌ ಕುಮಾರ್‌ ಅವರು ಜೆಡಿಯುಗೆ ಕೃಷಿ ಖಾತೆ ನೀಡುವಂತೆ ಡಿಮ್ಯಾಂಡ್‌ ಮಾಡಿದ್ದಾರೆ. ಆದರೆ ಕರ್ನಾಟಕದ ಎಚ್‌.ಡಿ ಕುಮಾರಸ್ವಾಮಿ ಅವರೂ ಕೃಷಿ ಖಾತೆ ನೀಡಿದರೆ ನಿರ್ವಹಿಸಲು ತಾನು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರೂ ಮಹತ್ವದ ಖಾತೆಗಳನ್ನು ಕೇಳಿದ್ದಾರೆ.

ಆದರೆ ಈಗ ಪ್ರಮಾಣ ವಚನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನೋಡಿದರೆ, ಕ್ಯಾಬಿನೆಟ್‌ ದರ್ಜೆಯ 11 ಸ್ಥಾನಗಳನ್ನು ಬಿಜೆಪಿ ತನ್ನ ಜೊತೆಗೇ ಇಟ್ಟುಕೊಂಡಿದೆ. ಟಿಡಿಪಿಗೆ 2, ಜೆಡಿಯುಗೆ 2, ಜೆಡಿಎಸ್‌, ಶಿವಸೇನೆ, ಎಲ್‌ಜೆಪಿ, ಆರ್‌ಎಲ್‌ಡಿ ಮುಂತಾದ ಪಕ್ಷಗಳಿಗೆ ತಲಾ ಒಂದೊಂದು ಸ್ಥಾನಗಳನ್ನು ನೀಡಿದೆ. ಈಗ ಯಾವ ಖಾತೆ ಯಾರಿಗೆ ಎಂಬ ನಿರ್ಣಯ ಇನ್ನು ಆಗಬೇಕಿದೆ. ಮಿತ್ರಪಕ್ಷಗಳು ಮಹತ್ವದ ಖಾತೆಗಾಗಿ ಪಟ್ಟು ಹಿಡಿಯುತ್ತವೆಯೇ ಅಥವಾ ಕೊಟ್ಟದ್ದಕ್ಕೆ ತೃಪ್ತವಾಗುತ್ತವೆಯೇ ಎಂದು ನೋಡಬೇಕಿದೆ.

“ಒಕ್ಕೂಟ ವ್ಯವಸ್ಥೆಯ ಆಶಯ…” ನೂತನ ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನ ಮಂತ್ರಿಯಾಗಿ (Prime minister) ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ (Narendra Modi) ಅವರಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ (CM Siddaramaiah) ಸಾಮಾಜಿಕ ಜಾಲತಾಣ X ಖಾತೆ ಮೂಲಕ ಶುಭ ಕೋರಿದ್ದಾರೆ.

“3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ @narendramodi ಅವರಿಗೆ ಅಭಿನಂದನೆಗಳು. ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ. ಸಂಪದ್ಭರಿತ ಕರ್ನಾಟಕದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ನಿಮ್ಮ ಜೊತೆಯಾಗಿ ಶ್ರಮಿಸುವ ದಿನಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

ಇದನ್ನೂ ಓದಿ: Narendra Modi: 3ನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ; ಇಲ್ಲಿದೆ ಬಾಲ್ಯದಿಂದ ವಿಶ್ವನಾಯಕತನಕದ ಜೀವನ ಚಿತ್ರಣ

Exit mobile version