ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ (Resignation) ಸಲ್ಲಿಸಿದರು. ರಾಷ್ಟ್ರಪತಿಗಳು ರಾಜೀನಾಮೆ ಅಂಗೀಕರಿಸಿದ್ದಾರೆ. 17ನೇ ಲೋಕಸಭೆ ವಿಸರ್ಜನೆಯ (Lok Sabha dissolvation) ಆಗಬೇಕಿರುವ ಹಿನ್ನೆಲೆಯಲ್ಲಿ ಅವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ದೊಡ್ಡ ಪಕ್ಷವಾಗಿ ಹೊಮ್ಮಿರುವ ಎನ್‌ಡಿಎ (NDA) ಸರಕಾರ ರಚನೆಯ ಹಕ್ಕು ಮಂಡಿಸಬೇಕಿದೆ. ಮಿತ್ರಪಕ್ಷಗಳ ಜೊತೆಗೆ ಸಮಾಲೋಚನೆಯ ಬಳಿಕ ಮೋದಿಯವರು ರಾಷ್ಟ್ರಪತಿಗಳ ಮುಂದೆ ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಮೋದಿಯವರು ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿಯಲಿದ್ದು, ಜೂನ್ 8ರಂದು ನೂತನ ಸರಕಾರದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರಪತಿಗಳು ನೂತನ ಪ್ರಧಾನಿ ಹಾಗೂ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
Prime Minister Narendra Modi called on President Droupadi Murmu at Rashtrapati Bhavan. The Prime Minister tendered his resignation along with the Union Council of Ministers. The President accepted the resignation and requested the Prime Minister and the Union Council of Ministers… pic.twitter.com/SHIj1UMWpY
— ANI (@ANI) June 5, 2024
ಎನ್‌ಡಿಎಗೆ ತೆಲುಗುದೇಶಂ, ಜೆಡಿಯು ಬೆಂಬಲ
ಲೋಕಸಭಾ ಚುನಾವಣೆ (Election Results 2024)ಯ ಅಚ್ಚರಿಯ ಫಲಿತಾಂಶ ಹಲವು ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದೆ. ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರ್ಕಾರ ರಚಿಸುವುದಾಗಿ ಘೋಷಿಸಿದ್ದು, ಇದಕ್ಕಾಗಿ ಸಿದ್ಧತೆ ಆರಂಭವಾಗಿದೆ. ಇದೀಗ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿರುವ ತೆಲುಗು ದೇಶಂ ಪಕ್ಷ (TDP)ದ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಪುನರುಚ್ಚರಿಸಿದ್ದಾರೆ. ಎನ್‌ಡಿಎ ಜತೆಗೆ ಕೆಲಸ ಮಾಡಿದ್ದರಿಂದ ಗೆಲುವು ಸಾಧಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ ಸೇರುವ ವದಂತಿಯನ್ನು ತಳ್ಳಿ ಹಾಕಿರುವ ಟಿಡಿಪಿ, ಎನ್‌ಡಿಎಗೆ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಹೇಳಿದೆ. ಬುಧವಾರ ಸಂಜೆ ದೆಹಲಿಯಲ್ಲಿ ಆಯೋಜಿಸಿರುವ ಎನ್‌ಡಿಎ ಸಭೆಯಲ್ಲಿ ಚಂದ್ರಬಾಬು ನಾಯ್ಡು ಭಾಗವಹಿಸಲಿದ್ದಾರೆ ಎಂದೂ ಟಿಡಿಪಿ ತಿಳಿಸಿದೆ. ಆಂಧ್ರ ಪ್ರದೇಶದ 25 ಸೀಟುಗಳ ಪೈಕಿ 21 ಸ್ಥಾನಗಳನ್ನು ಎನ್‌ಡಿಎ ಗೆದ್ದುಕೊಂಡಿದೆ. ಈ ಪೈಕಿ ಟಿಡಿಪಿ ಅತಿ ಹೆಚ್ಚಿನ 16 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಮಿತ್ರ ಪಕ್ಷವಾದ ಜನಸೇನೆ 2 ಮತ್ತು ಬಿಜೆಪಿ 3 ಕಡೆ ಗೆದ್ದಿದೆ.
ಚಂದ್ರಬಾಬು ನಾಯ್ಡು ಹೇಳಿದ್ದೇನು?
ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚಂದ್ರಬಾಬು ನಾಯ್ಡು, “ಈ ದೇಶದಲ್ಲಿ ಹಲವಾರು ರಾಜಕೀಯ ಬದಲಾವಣೆಗಳನ್ನು ನೋಡಿದ್ದೇನೆ. ನಾವು ಎನ್‌ಡಿಎಯಲ್ಲಿದ್ದೇವೆ. ನಾನು ಎನ್‌ಡಿಎ ಸಭೆಗೆ ಹೋಗುತ್ತಿದ್ದೇನೆ. ಮತದಾರರ ಬೆಂಬಲಕ್ಕೆ ಧನ್ಯವಾದಗಳು. ರಾಜಕೀಯದಲ್ಲಿ ಏರಿಳಿತಗಳು ಸಾಮಾನ್ಯ. ಇತಿಹಾಸದಲ್ಲಿ ಅನೇಕ ರಾಜಕೀಯ ನಾಯಕರು ಮತ್ತು ಪಕ್ಷಗಳನ್ನು ಜನರು ಸೋಲಿಸಿದ್ದಾರೆ. ಇದೊಂದು ಐತಿಹಾಸಿಕ ಚುನಾವಣೆ” ಎಂದು ಅವರು ಹೇಳಿದ್ದಾರೆ.
ಪ್ರಮುಖ ಖಾತೆಗಳಿಗೆ ಬೇಡಿಕೆ?
ಇದೀಗ ಕಿಂಗ್ ಮೇಕರ್ ಆಗಿರುವ ಟಿಡಿಪಿ ಸರ್ಕಾರದಲ್ಲಿ ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಸಾರಿಗೆ ಖಾತೆಗಳ ಜತೆಗೆ ಸ್ಪೀಕರ್ ಹುದ್ದೆಯನ್ನು ಕೋರಬಹುದು ಎಂದು ಮೂಲಗಳು ತಿಳಿಸಿವೆ. ಜತೆಗೆ ಕೃಷಿ, ಜಲಶಕ್ತಿ, ಐಟಿ ಮತ್ತು ರಾಜ್ಯ ಹಣಕಾಸು ಖಾತೆಗಳಿಗೂ ಬೇಡಿಕೆ ಇಡುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಟಿಡಿಪಿ 5-6 ಖಾತೆಗಳಿಗಾಗಿ ಹಕ್ಕು ಮಂಡಿಸಲಿದೆ.
ಬೇಷರತ್ತು ಬೆಂಬಲ ಘೋಷಿಸಿದ ಜೆಡಿಯು
ಇತ್ತ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡ ಎನ್‌ಡಿಎಗೆ ಬೇಷರತ್ತು ಬೆಂಬಲ ಸೂಚಿಸಿದೆ. ಜೆಡಿಯು ಮುಖಂಡ ಕೆ.ಸಿ.ತ್ಯಾಗಿ ಈ ಬಗ್ಗೆ ಮಾತನಾಡಿ, ಯಾವದೇ ಬೇಡಿಕೆ ಇಲ್ಲದೆ ಎನ್‌ಡಿಎಗೆ ಬೆಂಬಲ ನೀಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಎನ್‌ಡಿಎ ಸಭೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಈಗಾಗಲೇ ನಿತೀಶ್ ಕುಮಾರ್ ದೆಹಲಿಗೆ ತೆರಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಕೆ.ಸಿ.ತ್ಯಾಗಿ, “ಎನ್‌ಡಿಎ ಸಭೆ ದೆಹಲಿಯಲ್ಲಿ ನಡೆಯಲಿದೆ. ಸಭೆಯಲ್ಲಿ ನಿತೀಶ್ ಕುಮಾರ್ ಭಾಗವಹಿಸುತ್ತಿದ್ದಾರೆ. ಈ ವೇಳೆ ಜೆಡಿಯು ಎನ್‌ಡಿಎಗೆ ಬೆಂಬಲ ನೀಡುವ ಮತ್ತು ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಬಗ್ಗೆ ಪತ್ರವನ್ನು ಸಲ್ಲಿಸಲಿದೆ. ʼಇಂಡಿಯಾʼ ಮೈತ್ರಿಕೂಟಕ್ಕೆ ಮರಳುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Election Results 2024: ಮೋದಿ ಪಟ್ಟಾಭಿಷೇಕಕ್ಕೆ ಮೂಹೂರ್ತ ಫಿಕ್ಸ್: ಜೂ. 8ರಂದು ಪ್ರಧಾನಿಯಾಗಿ ಪ್ರಮಾಣ ವಚನ?