ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನ ಅರಮನೆಗೆ ಮೈದಾನಕ್ಕೆ (Palace ground) ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಆಗಮಿಸಲಿದ್ದು, ಹಲವಾರು ಪ್ರಮುಖ ರಸ್ತೆಗಳ ಸಂಚಾರ ಬದಲಾವಣೆ (Traffic Change) ಮಾಡಲಾಗಿದೆ. ಸಾರ್ವಜನಿಕರು ಇದನ್ನು ಗಮನಿಸುವಂತೆ ಟ್ರಾಫಿಕ್ ಇಲಾಖೆ (traffic police) ಸೂಚಿಸಿದೆ.
ಮೋದಿ ನಗರ ಭೇಟಿಯ ವೇಳೆ ಅಹಿತಕರ ಘಟನೆ ಆಗದಂತೆ ನಗರ ಪೊಲೀಸರು ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಬಂದೋಬಸ್ತ್ಗಾಗಿ ಎರಡು ಸಾವಿರ ಪೊಲೀಸರ ನಿಯೋಜನೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ನೇತೃತ್ವದಲ್ಲಿ ಭದ್ರತೆ ನಿಯೋಜನೆಗೊಂಡಿದೆ. ಸಮಾವೇಶ ನಡೆಯುವ ಅರಮನೆ ಮೈದಾನ, ಹೆಲಿಪ್ಯಾಡ್, ಮೇಕ್ರಿ ಸರ್ಕಲ್ ಹಾಗೂ ಬಳ್ಳಾರಿ ರಸ್ತೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆಯಿದ್ದು, ಮೇಕ್ರಿ ಸರ್ಕಲ್‌ನಲ್ಲಿ ಚೊಂಬು ಪ್ರದರ್ಶಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಈ ಹಿನ್ನೆಲೆ ಸರ್ಕಲ್‌ನಲ್ಲಿ ಹೆಚ್ಚುವರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೇಕ್ರಿ ಸರ್ಕಲ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶವಿಲ್ಲ. ಪ್ರತಿಭಟನೆ ನಡೆಸಲು ಮುಂದಾದರೆ ಕೂಡಲೇ ವಶಕ್ಕೆ ಪಡೆದು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಸಂಚಾರ ವ್ಯತ್ಯಯ
ಸಮಾವೇಶದ ನಂತರ ರಸ್ತೆ ಮಾರ್ಗವಾಗಿ ಮೋದಿ ಹೆಚ್.ಎ .ಎಲ್. ತಲುಪಲಿರುವರು. ಹೆಚ್.ಎ.ಎಲ್ ಮಾರ್ಗದಲ್ಲೂ ಕೂಡ ಹೆಜ್ಜೆ ಹಜ್ಜೆಗೆ ಪೊಲೀಸರು ನಿಯೋಜನೆಗೊಳ್ಳಲಿದ್ದಾರೆ. ಇದೇ ವೇಳೆ, ವಾಹನ ಸವಾರರಿಗೆ ಅಡಚಣೆಯಾಗದಂತೆ ಸಂಚಾರಿ ಪೊಲೀಸರು ಕ್ರಮ ಜರುಗಿಸಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ. ಇಂದು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ.
ಪ್ಯಾಲೇಸ್ ರಸ್ತೆ, ಜಯಮಹಲ್, ರಮಣಮಹರ್ಷಿ ರಸ್ತೆ, ಮೌಂಟ್ ಕಾರ್ಮೆಲ್ ರಸ್ತೆ, ಜಯರಾಮ್ ರಸ್ತೆ, ಸಿ ವಿ ರಾಮನ್ ರಸ್ತೆ, ನಂದಿದುರ್ಗ ರಸ್ತೆ, ಮೇಕ್ರಿ ಸರ್ಕಲ್, ವಸಂತನಗರ, ಬಳ್ಳಾರಿ ರಸ್ತೆ ಮತ್ತು ತರಳಬಾಳು ರಸ್ತೆ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚಿಸಲಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರ ನಿಷೇಧವಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸರಕು ಸಾಗಣೆ ವಾಹನಗಳಕ್ಕೆ ನಿರ್ಬಂಧ ಹೇರಲಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ಸಿಎಂಐಟಿ ಜಂಕ್ಷನ್, ನ್ಯೂ ಬಿಇಎಲ್ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಬಿಹೆಚ್ಇಎಲ್ ಜಂಕ್ಷನ್, ಹೆಬ್ಬಾಳ ಜಂಕ್ಷನ್, ಬಸವೇಶ್ವರ ಜಂಕ್ಷನ್ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.
ಬೆಂಗಳೂರಿನ ಅರಮನೆ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮೊದಲು ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಅಲ್ಲಿಯೂ ಸಹ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉಭಯ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: Modi in Karnataka: ರಾಜ್ಯದಲ್ಲಿಂದು ಮೋದಿ ಮೋಡಿ; ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾವೇಶ, ಬೆಂಗಳೂರಲ್ಲಿ ರೋಡ್ ಶೋ