Site icon Vistara News

PM Narendra Modi: ʼಐತಿಹಾಸಿಕ ದಿನ….ʼ ಸೆಮಿ ಕಂಡಕ್ಟರ್‌ ಘಟಕಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

pm narendra modi

ಹೊಸದಿಲ್ಲಿ: ಇಂದು ಐತಿಹಾಸಿಕ ದಿನ. ಭವಿಷ್ಯದಲ್ಲಿ ಭಾರತ ಸೆಮಿಕಂಡಕ್ಟರ್ (semiconductor) ಉತ್ಪಾದನೆಯ ಜಾಗತಿಕ ಕೇಂದ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು.

ಮೂರು ಸೆಮಿಕಂಡಕ್ಟರ್‌ ಉತ್ಪಾದನಾ ಘಟಕಗಳ ಉದ್ಘಾಟನೆ ಮಾಡಿದ ಬಳಿಕ ʻಇಂಡಿಯಾಸ್ ಟೆಕೇಡ್: ಚಿಪ್ಸ್ ಫಾರ್ ವಿಕಸಿತ್ ಭಾರತ್’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗುಜರಾತ್‌ನಲ್ಲಿ ಎರಡು ಮತ್ತು ಅಸ್ಸಾಂನಲ್ಲಿ ಒಂದು ಹೊಸ ಸೆಮಿಕಂಡಕ್ಟರ್‌ ಘಟಕಗಳಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಶಂಕುಸ್ಥಾಪನೆ ಮಾಡಿದರು. ₹1.25 ಲಕ್ಷ ಕೋಟಿ ಮೌಲ್ಯದ ಈ ಯೋಜನೆಗಳು ಸೆಮಿಕಂಡಕ್ಟರ್ ಉತ್ಪಾದನೆಗೆ ಜಾಗತಿಕ ಕೇಂದ್ರವಾಗುವತ್ತ ಭಾರತದ ನಿರ್ಣಾಯಕ ಹೆಜ್ಜೆಯಾಗಿದೆ. ಟಾಟಾ ಗ್ರೂಪ್ ಈ ಎರಡು ಉದ್ಯಮಗಳನ್ನು ಮುನ್ನಡೆಸುತ್ತಿದೆ.

ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸೆಮಿಕಂಡಕ್ಟರ್ ಯೋಜನೆಗಳ ಪರಿಣಾಮದ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಭಾರತದ ಮುನ್ನುಗ್ಗುವಿಕೆಯ ಕಾರ್ಯತಂತ್ರದ ಮಹತ್ವವನ್ನು ಮೋದಿ ಎತ್ತಿ ತೋರಿಸಿದ್ದು, ವಿಶ್ವಾಸಾರ್ಹ ಮತ್ತು ನಿರಂತರ ಪೂರೈಕೆ ಸರಪಳಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

“ಭಾರತವು ಒಪ್ಪಿಕೊಂಡ ಮಾತಿಗೆ ತಕ್ಕಹಾಗೆ ನಡೆದುಕೊಳ್ಳುತ್ತದೆ. ಜಗತ್ತಿನಲ್ಲಿ ಕೆಲವೇ ದೇಶಗಳು ಸೆಮಿಕಂಡಕ್ಟರ್‌ಗಳನ್ನು ತಯಾರಿಸುತ್ತಿವೆ. ವಿಶ್ವಾಸಾರ್ಹ ಮತ್ತು ನಿರಂತರ ಚಿಪ್ಸ್‌ ಪೂರೈಕೆ ಸರಪಳಿಯ ಅಗತ್ಯವಿದೆ ಎಂದು Covid-19 ನಮಗೆ ಕಲಿಸಿದೆ. ಇದರಲ್ಲಿ ನಿರ್ಣಾಯಕ ಪಾತ್ರ ವಹಿಸಲು ಭಾರತ ಉತ್ಸುಕವಾಗಿದೆ” ಎಂದು ಪ್ರಧಾನಿ ಹೇಳಿದರು.

“ಭಾರತವು ಈಗಾಗಲೇ ಬಾಹ್ಯಾಕಾಶ, ಪರಮಾಣು ಮತ್ತು ಡಿಜಿಟಲ್ ಶಕ್ತಿಯಾಗಿದೆ. ನಾವು ಈಗ ಸೆಮಿಕಂಡಕ್ಟರ್ ಉತ್ಪನ್ನಗಳ ವಾಣಿಜ್ಯ ಉತ್ಪಾದನೆಯನ್ನು ಸಹ ಪ್ರಾರಂಭಿಸಲಿದ್ದೇವೆ. ಭಾರತವು ಈ ವಲಯದಲ್ಲಿ ಜಾಗತಿಕ ಶಕ್ತಿಯಾಗುವ ದಿನ ದೂರವಿಲ್ಲ” ಎಂದು ಅವರು ಪ್ರತಿಪಾದಿಸಿದರು.

ಸ್ವದೇಶಿ ಚಿಪ್ ಉತ್ಪಾದನೆಯ ಮೂಲಕ ಸ್ವಾವಲಂಬನೆ ಮತ್ತು ಆಧುನಿಕತೆಗೆ ಭಾರತದ ಬದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು. “ವಿವಿಧ ಕಾರಣಗಳಿಂದಾಗಿ, ಮೊದಲ ಮತ್ತು ಎರಡನೆಯ ಕೈಗಾರಿಕಾ ಕ್ರಾಂತಿಗಳ ಸಮಯದಲ್ಲಿ ಭಾರತವು ಹಿಂದುಳಿದಿತ್ತು. ಆದಾಗ್ಯೂ, ಭಾರತವು ನಾಲ್ಕನೇ ತಲೆಮಾರಿನ ಉದ್ಯಮವನ್ನು ಆತ್ಮವಿಶ್ವಾಸದಿಂದ ಮುನ್ನಡೆಸುತ್ತಿದೆ. 21ನೇ ಶತಮಾನವು ತಂತ್ರಜ್ಞಾನ-ಚಾಲಿತ ಶತಮಾನವಾಗಿದೆ. ಎಲೆಕ್ಟ್ರಾನಿಕ್ ಚಿಪ್ಸ್ ಇಲ್ಲದೆ ಇದನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಮೇಡ್ ಇನ್ ಇಂಡಿಯಾ ಚಿಪ್, ಡಿಸೈನ್ಡ್ ಇನ್ ಇಂಡಿಯಾ ಚಿಪ್, ಭಾರತವನ್ನು ಸ್ವಾವಲಂಬನೆ ಮತ್ತು ಆಧುನಿಕತೆಯತ್ತ ಕೊಂಡೊಯ್ಯಲಿದೆ” ಎಂದು ಅವರು ಹೇಳಿದರು.

ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮವು ಇನ್ನೂ ಆರಂಭಿಕ ಹಂತದಲ್ಲಿದೆ. ವಿವಿಧ ಸ್ಥಳೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಭಾರತದ ವಿಶಾಲ ಸಾಮರ್ಥ್ಯವನ್ನು ಬಳಸಿಕೊಳ್ಳಲು ಉದ್ದೇಶಿಸಿವೆ. ಮೂರು ಮಹತ್ವದ ಯೋಜನೆಗಳಿಗೆ ಮೋದಿ ಅಡಿಪಾಯ ಹಾಕಿದರು: ಗುಜರಾತ್‌ನ ಧೋಲೇರಾ ವಿಶೇಷ ಹೂಡಿಕೆ ಪ್ರದೇಶದಲ್ಲಿ (DSIR) ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಸೌಲಭ್ಯ; ಗುಜರಾತ್‌ನ ಸಾನಂದ್‌ ಹಾಗೂ ಅಸ್ಸಾಂನ ಮೊರಿಗಾಂವ್‌ಗಳಲ್ಲಿ ಹೊರಗುತ್ತಿಗೆ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (OSAT) ಸೌಲಭ್ಯಗಳು.

ಇದನ್ನೂ ಓದಿ: Narendra Modi: ಮುಕ್ತ ವ್ಯಾಪಾರ ಒಪ್ಪಂದ; ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಜತೆ ಮೋದಿ ಮಾತುಕತೆ

Exit mobile version