Site icon Vistara News

Modi Bhutan Visit: ಭೂತಾನ್‌ಗೆ ತೆರಳಿದ ಪ್ರಧಾನಿ ಮೋದಿ; ಇಷ್ಟೆಲ್ಲ ಇದೆ ನಿರೀಕ್ಷೆ

Narendra Modi

PM Narendra Modi Leaves For Bhutan, Visit Focuses On Govt's Neighbourhood First Policy

ನವದೆಹಲಿ/ಥಿಂಪು: ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರದ ಭರಾಟೆಯ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ (ಮಾರ್ಚ್‌ 22) ಭೂತಾನ್‌ ಪ್ರವಾಸ (Modi Bhutan Visit) ಕೈಗೊಂಡಿದ್ದಾರೆ. ಎರಡು ದಿನಗಳ ಭೇಟಿಗಾಗಿ ಅವರು ಭೂತಾನ್‌ಗೆ ತೆರಳಿದ್ದು, ದ್ವಿಪಕ್ಷೀಯ ಮಾತುಕತೆ, ಸಂಬಂಧ ವೃದ್ಧಿ ಜತೆಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಭೂತಾನ್‌ ಸಿದ್ಧವಾಗಿದೆ. ಭೂತಾನ್‌ ಅರಸ ಖೇಸರ್‌ ನಾಮ್‌ಗ್ಯೆಲ್‌ ವಾಗ್ಚುಕ್‌, ನಾಲ್ಕನೇ ಅರಸ ಜಿಗ್ಮೆ ಸಿಂಗ್ಯೆ ವಾಗ್ಚುಕ್‌ ಅವರು ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ. ಅನಿವಾಸಿ ಭಾರತೀಯರು ಕೂಡ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ತ್ರಿವರ್ಣ ಧ್ವಜ ಹಿಡಿದು ಅನಿವಾಸಿ ಭಾರತೀಯರು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭೇಟಿ ವೇಳೆ ಮೋದಿ ಅವರು ಭೂತಾನ್‌ ಪ್ರದಾನಿ ತ್ಶೆರಿಂಗ್‌ ತೊಬ್ಗೆ ಅವರ ಜತೆ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಭಾರತ ಹಾಗೂ ಭೂತಾನ್‌ ನಡುವಿನ ಸಂಬಂಧ ವೃದ್ಧಿ, ವ್ಯಾಪಾರ ಒಪ್ಪಂದಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಪರಸ್ಪರ ಆರ್ಥಿಕ ಸಹಕಾರ, ಸಂಪರ್ಕ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 2019ರಲ್ಲಿ ಕೊನೆಯ ಬಾರಿ ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: ನರೇಂದ್ರ ಮೋದಿ ತಲೆಗೆ ಗುಂಡು ಹಾರಿಸಬೇಕು; ವಿವಾದದ ಕಿಡಿ ಹೊತ್ತಿಸಿದ ಆರ್‌ಜೆಡಿ ನಾಯಕ

ನರೇಂದ್ರ ಮೋದಿ ಅವರು ಮಾರ್ಚ್‌ 21 ಹಾಗೂ ಮಾರ್ಚ್‌ 22ರಂದು ಭೂತಾನ್‌ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ಪಾರೋ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯ ಉಂಟಾದ ಕಾರಣ ಮೋದಿ ಭೂತಾನ್‌ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು. ಇದಾದ ಬಳಿಕ ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆ ನಡೆಸಿ ಮಾರ್ಚ್‌ 22 ಹಾಗೂ 23ರಂದು ಪ್ರವಾಸ ನಿಗದಿಪಡಿಸಿದರು ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version