Site icon Vistara News

Narendra Modi: ಅಮೆರಿಕ ಭದ್ರತಾ ಸಲಹೆಗಾರ-ನರೇಂದ್ರ ಮೋದಿ ಭೇಟಿ; ಯಾವೆಲ್ಲ ವಿಷಯ ಚರ್ಚೆ?

Narendra Modi

PM Narendra Modi meets US NSA Jake Sullivan in Delhi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿಯಲ್ಲಿ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ (US NSA) ಜೇಕ್‌ ಸುಲಿವನ್‌ (Jake Sullivan) ಅವರನ್ನು ಭೇಟಿಯಾಗಿದ್ದಾರೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಎರಡು ದಿನಗಳ ಭೇಟಿಗಾಗಿ ಭಾರತ ಪ್ರವಾಸ ಕೈಗೊಂಡಿರುವ ಜೇಕ್‌ ಸುಲಿವನ್‌ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ರಕ್ಷಣೆ, ಭದ್ರತೆ, ದ್ವಿಪಕ್ಷೀಯ ಸಂಬಂಧ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಜೇಕ್‌ ಸುಲಿವನ್‌ ಅವರನ್ನು ಭೇಟಿಯಾದ ಬಳಿಕ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರು ಪೋಸ್ಟ್‌ ಮಾಡಿದ್ದಾರೆ. “ಅಮೆರಿಕ ಎನ್‌ಎಸ್‌ಎ ಜೇಕ್‌ ಸುಲಿವನ್‌ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದೆ. ಜಾಗತಿಕ ಸ್ಥಿರತೆ ಹಾಗೂ ಅಭಿವೃದ್ಧಿಗಾಗಿ ಅಮೆರಿಕದ ಜತೆ ಭಾರತವು ವ್ಯೂಹಾತ್ಮಕ ಪಾಲುದಾರಿಕೆಯನ್ನು ಮುಂದುವರಿಸಲು ಬದ್ಧವಾಗಿದೆ” ಎಂಬುದಾಗಿ ಬರೆದುಕೊಂಡಿದ್ದಾರೆ. ಜೂನ್‌ 18ರಂದು ಕೂಡ ಜೇಕ್‌ ಸುಲಿವನ್‌ ಅವರು ಭಾರತದಲ್ಲಿಯೇ ಇರಲಿದ್ದಾರೆ.

ಇಟಲಿಯಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದ ಜಿ-7 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಭಾರತ ಹಾಗೂ ಅಮೆರಿಕ ಸಂಬಂಧ, ಪರಸ್ಪರ ಸಹಕಾರ, ನೆರವು, ಒಪ್ಪಂದ, ರಕ್ಷಣೆ ಸೇರಿ ಹಲವು ವಿಷಯಗಳ ಕುರಿತು ನರೇಂದ್ರ ಮೋದಿ ಅವರು ಜೋ ಬೈಡೆನ್‌ ಅವರೊಂದಿಗೆ ಚರ್ಚಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಜೇಕ್‌ ಸುಲಿವನ್‌ ಅವರು ಭಾರತಕ್ಕೆ ಆಗಮಿಸಿರುವುದು ಮಹತ್ವದ ಸಂಗತಿ ಎಂದೇ ಹೇಳಲಾಗುತ್ತಿದೆ.

ದೋವಲ್-ಜೇಕ್‌ ಭೇಟಿ

ಜೇಕ್‌ ಸುಲಿವನ್‌ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೊದಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಭೇಟಿಯಾದರು. ರಕ್ಷಣಾ ಒಪ್ಪಂದಗಳು ಹಾಗೂ ಪ್ರಾದೇಶಿಕ ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸುವ ಭಾರತ-ಅಮೆರಿಕ ನಡುವಿನ ಇನಿಶಿಯೇಟಿವ್‌ ಆನ್‌ ಕ್ರಿಟಿಕಲ್‌ ಆ್ಯಂಡ್‌ ಎಮರ್ಜಿಂಗ್‌ ಟೆಕ್ನಾಲಜೀಸ್‌ (iCET) ಯೋಜನೆ ಜಾರಿ ಕುರಿತು ಇಬ್ಬರೂ ಎನ್‌ಎಸ್‌ಗಳು ಚರ್ಚಿಸಿದರು ಎಂಬುದಾಗಿ ಮೂಲಗಳು ತಿಳಿಸಿವೆ. ಇಂಡಿಯಾ-ಮಿಡಲ್‌ ಈಸ್ಟ್-ಯುರೋಪ್‌ ಎಕನಾಮಿಕ್‌ ಕಾರಿಡಾರ್‌ (IMEC) ಕುರಿತು ಕೂಡ ಚರ್ಚೆ ನಡೆಸಿದರು ಎನ್ನಲಾಗಿದೆ.

ಇದನ್ನೂ ಓದಿ: Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Exit mobile version