Site icon Vistara News

Narendra Modi : ಟ್ರೋಫಿಯನ್ನು ಕೈಯಲ್ಲಿ ಮುಟ್ಟದ ಪ್ರಧಾನಿ ಮೋದಿ, ಕಾರಣವೇನು?

ಬೆಂಗಳೂರು: ವೆಸ್ಟ್​ ಇಂಡೀಸ್​​ನಲ್ಲಿ ನಡೆದ ಟಿ20 ವಿಶ್ವ ಕಪ್​ ಗೆದ್ದು ಭಾರತಕ್ಕೆ ಬಂದ ಟೀಮ್ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ (Narendra Modi) ತಮ್ಮ ನಿವಾಸದಲ್ಲಿ ಸನ್ಮಾನಿಸಿದ್ದಾರೆ. ಈ ವೇಳೆ ಅವರು ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಜತೆ ಅವರು ವಿಶ್ವ ಕಪ್​​ನೊಂದಿಗೆ ಫೋಟೊಗೆ ಫೋಸ್ ಕೊಟ್ಟಿದ್ದಾರೆ. ಆದರೆ ಅವರು ವಿಶ್ವ ಕಪ್​ ಅನ್ನು ಕೈಯಲ್ಲಿ ಮುಟ್ಟಿಲ್ಲ ಎಂಬುದಾಗಿ ವರದಿಯಾಗಿದೆ. ಅವರು ರೋಹಿತ್​ ಮತ್ತು ವಿರಾಟ್​ ಕೊಹ್ಲಿಯ ಕೈಯನ್ನು ಮಾತ್ರ ಹಿಡಿದುಕೊಂಡಿದ್ದಾರೆ. ಅವರು ಆ ರೀತಿ ಮಾಡಿದ ಫೋಟೋ ವೈರಲ್ ಆಗಿದೆ.

ಪ್ರಧಾನಿ ಮೋದಿ ಅವರು ಯಾಕೆ ಟ್ರೋಫಿ ಮುಟ್ಟಿಲ್ಲ ಎಂಬ ಚರ್ಚೆ ಶುರುವಾಗಿದೆ. ಕೆಲವರು ಅದನ್ನು ಉತ್ತಮ ಗುಣವೆಂದು ಕೊಂಡಾಡಿದರೆ ಇನ್ನೂ ಕೆಲವರು ಸರಿಯಲ್ಲ ಎಂಬುದಾಗಿ ಹೇಳಿದ್ದಾರೆ,

ಗುರುವಾರ ಬೆಳಗ್ಗೆ ದೆಹಲಿಗೆ ಆಗಮಿಸಿದ ಆಟಗಾರರು ಬಳಿಕ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ವಿಶ್ವಕಪ್​ ಗೆಲುವಿನ ಕುರಿತು ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು.

ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

ಬಾರ್ಬಡಾಸ್​ನಲ್ಲೇ ಸಿಲುಕಿದ್ದ ಆಟಗಾರರು

ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ (T20 World Cup 2024) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದ ರೋಹಿತ್‌ ಶರ್ಮಾ ನೇತೃತ್ವದ ಭಾರತದ ಕ್ರಿಕೆಟ್‌ ತಂಡವು ಇಂದು ಬೆಳಗ್ಗೆ ಭಾರತಕ್ಕೆ ಆಗಮಿಸಿತ್ತು. ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಿಶೇಷ ಚಾರ್ಟರ್ಡ್‌ ವಿಮಾನದಲ್ಲಿ ಭಾರತ ತಂಡದ ಆಟಗಾರರು ದೆಹಲಿಗೆ ಆಗಮಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣದಿಂದ ಆಟಗಾರರು ಕೆಲವು ದಿನ ಬಾರ್ಬಡಾಸ್​ನಲ್ಲೇ ಸಿಲುಕಿ ಹಾಕಿಕೊಂಡಿದ್ದರು. ಇದೀಗ ತವರಿಗೆ ಆಗಮಿಸಿದ ವಿಶ್ವಕಪ್‌ ಹೀರೋಗಳಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ : Virat kohli: ಏಕಾಂಗಿಯಾಗಿ ಎದುರಾಳಿಯನ್ನು ಧ್ವಂಸಗೊಳಿಸುವ ವೀರ ಹೋರಾಟಗಾರ ವಿರಾಟ್​​​

ಆಟಗಾರರಿಗೆ ಕರೆ ಮಾಡಿದ್ದ ಮೋದಿ

ಜೂನ್‌ 29ರಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ 7 ರನ್‌ಗಳಿಂದ ಜಯ ಸಾಧಿಸಿತ್ತು. ಆ ವೇಳೆ ಆಟಗಾರರಿಗೆ ಕರೆ ಮಾಡಿ ಮೋದಿ ಅಭಿನಂದನೆ ಸಲ್ಲಿಸಿದ್ದರು. ಮೋದಿ ಅವರು ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ, ಅದ್ಭುತ ನಾಯಕತ್ವಕ್ಕಾಗಿ ಅಭಿನಂದನೆ ತಿಳಿಸಿದರು. ಅವರ ಟಿ20 ವೃತ್ತಿ ಜೀವನವನ್ನು ಶ್ಲಾಘಿಸಿದರು. ಜತೆಗೆ ಪ್ರಧಾನಿ ಫೈನಲ್‌ ಪಂದ್ಯದಲ್ಲಿ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ಸಹಾಯ ಮಾಡಿದ ವಿರಾಟ್ ಕೊಹ್ಲಿ (76 ರನ್) ಅವರ ಆಟವನ್ನೂ ಮೆಚ್ಚಿಕೊಂಡರು. ಜತೆಗೆ ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಕೊಡುಗೆಯನ್ನೂ ನೆನಪಿಸಿಕೊಂಡಿದ್ದರು.

ಜತೆಗೆ ಭಾರತೀಯ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೂ ಪ್ರಧಾನಿ ಮೆಚ್ಚುಗೆ ಸೂಚಿಸಿದ್ದರು. ಮಾತ್ರವಲ್ಲ ಅದ್ಭುತ ಕ್ಯಾಚ್‌ ಹಿಡಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂರ್ಯ ಕುಮಾರ್ ಯಾದವ್ ಅವರನ್ನು ಉಲ್ಲೇಖಿಸಲು ಪ್ರಧಾನಿ ಮರೆತಿರಲಿಲ್ಲ. ಗೆಲುವಿಗಾಗಿ ಮುಖ್ಯ ಕೊಡುಗೆ ನೀಡಿದ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಮೋದಿ ಧನ್ಯವಾದ ಅರ್ಪಿಸಿದ್ದರು. ಈ ಕುರಿತಾದ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಪ್ರಧಾನಿ ಅವರ ನಡೆಗೆ ಕ್ರೀಡಾಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದರು.

Exit mobile version