Site icon Vistara News

PM Narendra Modi: ಇಂಡಿಯಾ ಮೈತ್ರಿಕೂಟ ಮತ ಬ್ಯಾಂಕ್‌ಗಾಗಿ ಅಶ್ಲೀಲ ಡ್ಯಾನ್ಸ್‌ ಮಾಡುತ್ತಿದೆ: ಮೋದಿ

pm Narendra Modi

ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟ (INDIA bloc) ತನ್ನ ಮತ ಬ್ಯಾಂಕ್‌ಗಾಗಿ ʼಮುಜ್ರಾʼ (ಒಂದು ಪ್ರಕಾರದ ನೃತ್ಯ) ಮಾಡುತ್ತಿದೆ ಎಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಟೀಕಿಸಿದ್ದಾರೆ.

ಬಿಹಾರದ (Bihar) ಪಾಟಲೀಪುತ್ರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂಡಿಯಾ ಮೈತ್ರಿಕೂಟ ತನ್ನ ಮತ ಬ್ಯಾಂಕ್‌ನ ಗುಲಾಮಗಿರಿಯನ್ನು ಸ್ವೀಕರಿಸಲು ಬಯಸುತ್ತದೆ. ಆದರೆ ನಮಗೆ ಸಂವಿಧಾನವು ಸರ್ವೋಚ್ಚವಾಗಿದೆ ಎಂದು ಹೇಳಿದರು. ಯಾವುದೇ ಸಂದರ್ಭದಲ್ಲಿಯೂ ಭಾರತದ ಸಂವಿಧಾನ ಎಸ್‌ಸಿ/ಎಸ್ ಟಿ, ಒಬಿಸಿಗಳಿಗೆ ನೀಡಿರುವ ಮೀಸಲಾತಿ ಪ್ರಯೋಜನಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಮುಜ್ರಾ ಎಂದರೆ ಮೊಗಲ್ ಆಡಳಿತದ ಕಾಲದಲ್ಲಿ ಬಂದ ನೃತ್ಯ ಪ್ರಕಾರ. ಇದನ್ನು ಮೊದಲು ಹೆಚ್ಚಾಗಿ ರಾಜರು ಮತ್ತು ಗಣ್ಯರ ಆಸ್ಥಾನಗಳಲ್ಲಿ ವೇಶ್ಯೆಯರು ಪ್ರದರ್ಶಿಸುತ್ತಿದ್ದರು. ಹಿಂದಿ ಸಿನಿಮಾಗಳಲ್ಲಿ ಇದು ವ್ಯಾಪಕವಾಗಿದೆ.

“ನಾನು ಬಿಹಾರ, ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯಗಳಿಗೆ ಭರವಸೆ ನೀಡುತ್ತಿದ್ದೇನೆ. ಮೋದಿ ಬದುಕಿರುವವರೆಗೆ ಅವರ ಹಕ್ಕುಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ. ಮೋದಿಗೆ ಸಂವಿಧಾನ ಸರ್ವಶ್ರೇಷ್ಠ, ಮೋದಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವನೆಗಳು ಸರ್ವೋಚ್ಚ. ಇಂಡಿಯಾ ಮೈತ್ರಿಕೂಟ ತನ್ನ ಮತ ಬ್ಯಾಂಕ್‌ನ ಜೀತ ಸ್ವೀಕರಿಸಲು ಬಯಸುತ್ತದೆ, ಅವರು ಹಾಗೆ ಮಾಡಲು ಸ್ವತಂತ್ರರು. ಅವರು ಮುಜ್ರಾ (ನೃತ್ಯ) ಮಾಡಲು ಬಯಸಿದರೆ ಅವರು ಸ್ವತಂತ್ರರು. ನಾನು ಯಾವಾಗಲೂ ಎಸ್‌ಸಿ/ಎಸ್‌ಟಿ/ಒಬಿಸಿ ಮೀಸಲಾತಿ ಪರವಾಗಿ ನಿಂತಿದ್ದೇನೆ” ಎಂದು ಹೇಳಿದ್ದಾರೆ.

ತಮ್ಮ ವೋಟ್ ಬ್ಯಾಂಕ್ ಅನ್ನು ಸಂತೋಷಪಡಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನನ್ನು ಬದಲಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಈ ಮೊದಲು ಎಸ್‌ಸಿ/ಎಸ್‌ಟಿ/ಒಬಿಸಿಗಳು ಸಂಪೂರ್ಣ ಮೀಸಲಾತಿಯನ್ನು ಪಡೆಯುತ್ತಿದ್ದರು. ನಂತರ ಸಾವಿರಾರು ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಘೋಷಿಸಲಾಯಿತು ಎಂದು ಮೋದಿ ಹೇಳಿದರು.

“ಭಾರತದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ಇರುವುದಿಲ್ಲ ಎಂದು ನಮ್ಮ ಸಂವಿಧಾನ ಹೇಳುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಧರ್ಮದ ಆಧಾರದ ಮೇಲೆ ಮೀಸಲಾತಿ ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಆರ್​​ಜೆಡಿ-ಕಾಂಗ್ರೆಸ್ SC/ST/OBC ಕೋಟಾವನ್ನು ಕೊನೆಗೊಳಿಸುವ ಮೂಲಕ ತಮ್ಮ ಮತಬ್ಯಾಂಕ್‌ಗೆ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಲು ಬಯಸುತ್ತಿವೆ” ಎಂದು ಮೋದಿ ನುಡಿದರು.

ಲಾಲೂ ಯಾದವ್ ಅವರ ಆರ್‌ಜೆಡಿಯ ಚುನಾವಣಾ ಚಿಹ್ನೆಯಾದ ಲಾಟೀನು ದೀಪವನ್ನೂ ಮೋದಿ ಗೇಲಿ ಮಾಡಿದ್ದಾರೆ. “ಇದು ಎಲ್‌ಇಡಿ ಬಲ್ಬ್‌ಗಳ ಯುಗ. ಅದರೆ ಬಿಹಾರದಲ್ಲಿ ಜನರು ಲಾಟೀನಿನೊಂದಿಗೆ ತಿರುಗಾಡುತ್ತಿದ್ದಾರೆ. ಇದು ಕೇವಲ ಒಂದು ಮನೆಯನ್ನು ಬೆಳಗಿಸುವ ಲಾಟೀನು. ಈ ಲಾಟೀನು ಬಿಹಾರದಾದ್ಯಂತ ಕತ್ತಲೆಯನ್ನು ಹರಡಿದೆ” ಎಂದಿದ್ದಾರೆ ಮೋದಿ.

ಕಳೆದ ತಿಂಗಳು, ಪ್ರಧಾನಿ ಮೋದಿ ಅವರು ಕಾಂಗ್ರೆಸ್ ದೇಶದ ಜನರ ಸಂಪತ್ತನ್ನು ಕಸಿದುಕೊಂಡು ಅನೇಕ ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತದೆ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ನಂತರ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮೋದಿ, ನನ್ನ ಹೇಳಿಕೆಯು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿಲ್ಲ. ನಾನು ಎಂದಿಗೂ ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

Exit mobile version