Site icon Vistara News

PM Narendra Modi: “ಇವಿಎಂ ಅಪಪ್ರಚಾರ ಮಾಡುವವರಿಗೆ ಕಪಾಳಮೋಕ್ಷ…” ಸುಪ್ರೀಂ ಕೋರ್ಟ್‌ ತೀರ್ಪಿಗೆ ಪ್ರಧಾನಿ ಸ್ವಾಗತ

Modi in Karnataka PM Modi to address rally in Bengaluru Here live video

ಹೊಸದಿಲ್ಲಿ: ಇವಿಎಂ- ವಿವಿಪ್ಯಾಟ್ (EVM- VVPAT) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ (Supreme Court) ತೀರ್ಪನ್ನು ಶುಕ್ರವಾರ ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), “ಈ ಆದೇಶವು ನಿರಂತರವಾಗಿ ಇವಿಎಂ ಬಗ್ಗೆ ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿರುವ ಜನತೆಗೆ ನೀಡಿದ ಬಿಗಿಯಾದ ಕಪಾಳಮೋಕ್ಷವಾಗಿದೆ” ಎಂದು ಹೇಳಿದ್ದಾರೆ.

“ಈ ಜನರು ನಿರಂತರವಾಗಿ ಇವಿಎಂ ಮೇಲೆ ದೋಷ ಹೇರಲು ಪ್ರಯತ್ನಿಸಿದರು. ಆದರೆ ಇಂದು ಸುಪ್ರೀಂ ಕೋರ್ಟ್‌ ಅವರಿಗೆ ಬಹಳ ಬಿಗಿಯಾದ ತಪರಾಕಿ ನೀಡಿದೆ. ಅವರು ಸತ್ಯವನ್ನು ನೋಡಲು ಇಷ್ಟಪಡುವುದಿಲ್ಲ. ಇಂದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ದಿನ” ಎಂದು ಬಿಹಾರದ ಅರಾರಿಯಾದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಹೇಳಿದರು.

“ಇಂಡಿಯಾ ಮೈತ್ರಿಕೂಟʼದ ಪ್ರತಿಯೊಬ್ಬ ನಾಯಕನೂ ಇವಿಎಂ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುವ ಪಾಪವನ್ನು ಮಾಡಿದ್ದಾರೆ. ಆದರೆ ಇಂದು, ದೇಶದ ಪ್ರಜಾಪ್ರಭುತ್ವದ ಶಕ್ತಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿಯನ್ನು ನೋಡಿ. ಇಂದು ಅವರ ಕನಸುಗಳೆಲ್ಲವೂ ನುಚ್ಚುನೂರಾಗುವಂತೆ, ಮತಪೆಟ್ಟಿಗೆಯನ್ನು ಲೂಟಿ ಮಾಡಲು ಉದ್ದೇಶಿಸಿರುವವರಿಗೆ ಸುಪ್ರೀಂ ಕೋರ್ಟ್ ತೀವ್ರ ಹೊಡೆತ ನೀಡಿದೆ” ಎಂದಿದ್ದಾರೆ ಮೋದಿ.

“ಇಂದು ಇಡೀ ಜಗತ್ತು ಭಾರತದ ಪ್ರಜಾಪ್ರಭುತ್ವ, ಭಾರತದ ಚುನಾವಣಾ ಪ್ರಕ್ರಿಯೆ ಮತ್ತು ಚುನಾವಣೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೊಗಳುತ್ತಿರುವಾಗ, ಈ ಜನರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಇವಿಎಂ ಅನ್ನು ದೂಷಿಸುವಲ್ಲಿ ನಿರತರಾಗಿದ್ದರು. ಅವರು ನಿರಂತರವಾಗಿ ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಲು ಪ್ರಯತ್ನಿಸಿದ್ದರು” ಎಂದು ಅವರು ಹೇಳಿದರು.

ಇಂದು ಮುಂಜಾನೆ, ಸುಪ್ರೀಂ ಕೋರ್ಟ್ ಪೇಪರ್ ಬ್ಯಾಲೆಟ್ ಮತದಾನದ ಮನವಿಗಳನ್ನು ತಿರಸ್ಕರಿಸಿತು. ಇವಿಎಂಗಳ ವಿಶ್ವಾಸಾರ್ಹತೆ ಮತ್ತು ವಿವಿಪ್ಯಾಟ್‌ಗಳೊಂದಿಗೆ ಅವುಗಳ ಸಂಯೋಜನೆಯನ್ನು ದೃಢಪಡಿಸಿತು. ಚುನಾವಣಾ ಮತಯಂತ್ರಗಳಲ್ಲಿ (EVM) ದಾಖಲಾದ ಎಲ್ಲ ಮತಗಳನ್ನು ವಿವಿಪ್ಯಾಟ್‌ಗಳ ಜತೆ ತಾಳೆ (VVPAT Verification) ಮಾಡಬೇಕು ಎಂದು ಸಲ್ಲಿಸಿದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಹಾಗೆಯೇ, ದೇಶದಲ್ಲಿ ಬ್ಯಾಲಟ್‌ ಪೇಪರ್‌ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂಬ ಕುರಿತು ಸಲ್ಲಿಸಿದ ಅರ್ಜಿಗಳನ್ನು ಕೂಡ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇದರೊಂದಿಗೆ ದೇಶದಲ್ಲಿ ಬ್ಯಾಲಟ್‌ ಪೇಪರ್‌ ವ್ಯವಸ್ಥೆ ಬರಬೇಕು, ಇವಿಎಂ ಸುರಕ್ಷತೆ ಇಲ್ಲ ಎಂದು ವಾದಿಸುವವರಿಗೆ, ಅರ್ಜಿ ಸಲ್ಲಿಸಿದವರಿಗೆ ಭಾರಿ ಹಿನ್ನಡೆಯಾಗಿದೆ.

ಅರ್ಜಿದಾರರ ವಾದ-ಪ್ರತಿವಾದವನ್ನು ಆಲಿಸಿದ್ದ, ಚುನಾವಣೆ ಆಯೋಗದ ಮಾಹಿತಿಯನ್ನೂ ಪಡೆದಿದ್ದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತ ಅವರು, ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದರು. “ನಾವು ತಾಂತ್ರಿಕ ವಿಭಾಗದ ಎಲ್ಲ ಮಾಹಿತಿಯನ್ನು ಗಮನಿಸಿದ್ದೇವೆ. ಹಾಗಾಗಿ, ಇವಿಎಂ ಮತಗಳನ್ನು ವಿವಿಪ್ಯಾಟ್‌ ಜತೆ ತಾಳೆ ಮಾಡುವ ಅವಶ್ಯಕತೆ ಇಲ್ಲ. ಹಾಗಾಗಿ, ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದ್ದೇವೆ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಇದನ್ನೂ ಓದಿ: VVPAT Verification: ಬ್ಯಾಲಟ್‌ ಪೇಪರ್‌ ಬೇಕಿಲ್ಲ, ವಿವಿಪ್ಯಾಟ್‌ 100% ತಾಳೆಯೂ ಬೇಡ ಎಂದ ಸುಪ್ರೀಂ; ಇವಿಎಂ ವಿರೋಧಿಗಳಿಗೆ ಹಿನ್ನಡೆ

Exit mobile version