Site icon Vistara News

PM Narendra Modi: ಇಂದು ದಕ್ಷಿಣ ಭಾರತದಲ್ಲಿ ಮೋದಿ ಬಿರುಗಾಳಿ ಪ್ರವಾಸ; ಕೇರಳ, ತಮಿಳುನಾಡು, ತೆಲಂಗಾಣದಲ್ಲಿ ಪ್ರಚಾರ

pm narendra modi in kashmir 2

ಹೊಸದಿಲ್ಲಿ: ಮಹತ್ವದ ಲೋಕಸಭೆ ಚುನಾವಣೆಗೆ (Lok Sabha Election 2024) ಇನ್ನು ವಾರಗಳು ಬಾಕಿ ಉಳಿದಿರುವಂತೆಯೇ ಬಿಜೆಪಿ (BJP) ತನ್ನ ದಕ್ಷಿಣ ಭಾರತ (South India) ವಲಯವನ್ನು ಚುರುಕುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಇಂದು ಪಕ್ಷದ ಪ್ರಚಾರವನ್ನು ಮುನ್ನಡೆಸಲಿದ್ದಾರೆ.

ಕೇರಳದ ಜನಸಂಖ್ಯೆಯಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಪ್ರಾಬಲ್ಯ ಹೆಚ್ಚಿದೆ. ಇಲ್ಲಿ ಹಿಂದೂ ಪರ ಪಕ್ಷವಾದ ಬಿಜೆಪಿಗೆ ಪ್ರವೇಶ ಅಸಾಧಾರಣ ಸವಾಲಾಗಿದ್ದು, ರಾಜ್ಯದಲ್ಲಿ ಬಲವಾದ ನೆಲೆಯನ್ನು ಪಡೆಯಲು ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯವನ್ನು ಸೆಳೆಯಲು ಬಿಜೆಪಿ ಹರಸಾಹಸ ಮಾಡುತ್ತಿದೆ.

ಬೆಳಗ್ಗೆ ಕೇರಳದ ಪತ್ತನಂತಿಟ್ಟಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರನ್ನು ಬಿಜೆಪಿಯ ರಾಜ್ಯ ಮುಖ್ಯಸ್ಥ ಕೆ. ಸುರೇಂದ್ರನ್, ಪಕ್ಷದ ಕೇರಳ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರಿಯನ್ ಮತ್ತು ಪತ್ತನಂತಿಟ್ಟ ಜಿಲ್ಲಾಧ್ಯಕ್ಷ ವಿಎ ಸೂರಜ್ ಅವರು ಬರಮಾಡಿಕೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರು ಇಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೂಲಗಳ ಪ್ರಕಾರ, ಒಂದು ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ.

ಎನ್‌ಡಿಎಯ ಲೋಕಸಭೆ ಅಭ್ಯರ್ಥಿಗಳಾದ ವಿ. ಮುರಳೀಧರನ್, ಅನಿಲ್ ಕೆ. ಆಂಟನಿ, ಶೋಭಾ ಸುರೇಂದ್ರನ್ ಮತ್ತು ಬೈಜು ಕಲಾಸಾಲ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದಿರುವ, ಕೇರಳದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಸಹ ಇರುತ್ತಾರೆ.

ತಮಿಳುನಾಡಿನಲ್ಲಿ ಕಳೆದ ವರ್ಷ ಎಐಎಡಿಎಂಕೆ ಪಕ್ಷವು ಎನ್‌ಡಿಎ ಬಣವನ್ನು ತೊರೆದಿದೆ. ಬಿಜೆಪಿಯ ರಾಜ್ಯ ಮುಖ್ಯಸ್ಥ ಕೆ. ಅಣ್ಣಾಮಲೈ ವಿರುದ್ಧ ನಿಂತಿರುವ ಎಐಎಡಿಎಂಕೆ ಮೊದಲ ಬಾರಿಗೆ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿದೆ. ಈ ವರ್ಷ ರಾಜ್ಯಕ್ಕೆ ನೀಡಲಾಗುತ್ತಿರುವ ತಮ್ಮ ಐದನೇ ಭೇಟಿಯಲ್ಲಿ ಪ್ರಧಾನಿ ಮೋದಿ ಕನ್ಯಾಕುಮಾರಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಭಾರತದ ದಕ್ಷಿಣ ತುದಿಯಲ್ಲಿ ಬಿಜೆಪಿ ಉತ್ತಮ ಅಸ್ತಿತ್ವವನ್ನು ಹೊಂದಿದೆ. ದ್ರಾವಿಡ ಹೃದಯಭಾಗದಲ್ಲಿ ಎಐಎಡಿಎಂಕೆಯ ನಿರ್ಗಮನದ ನಂತರ ಯಾವುದೇ ಪ್ರಮುಖ ಮಿತ್ರಪಕ್ಷಗಳಿಲ್ಲದೆ ಹೋರಾಟ ನಡೆಸುತ್ತಿದೆ.

ಚುನಾವಣಾ ಪೂರ್ವದಲ್ಲಿ ರಾಜ್ಯದಲ್ಲಿ ಪಿಎಂಕೆ ಮತ್ತು ನಟ ವಿಜಯಕಾಂತ್ ಅವರ ಡಿಎಂಡಿಕೆಯನ್ನು ಸೆಳೆಯಲು ಪಕ್ಷವು ಪ್ರಯತ್ನಿಸುತ್ತಿದೆ. ಪ್ರಧಾನಿಯವರು ಆಡಳಿತಾರೂಢ ಡಿಎಂಕೆಯ ರಾಜವಂಶದ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ಗುರಿಯಾಗಿಸಿ ಟೀಕಿಸುತ್ತಿದ್ದಾರೆ. ಆದರೆ ಡಿಎಂಕೆ ದಕ್ಷಿಣದ ರಾಜ್ಯಗಳಲ್ಲಿ ಒಕ್ಕೂಟ ವ್ಯವಸ್ಥೆ ಹಾಗೂ ಬಿಜೆಪಿಯ ಅನುದಾನ ತಾರತಮ್ಯವನ್ನು ಬಲವಾಗಿ ಟೀಕೆಗೆ ಗುರಿಯಾಗಿಸಿದೆ. ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕಿ ವಿಜಯಧರಣಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿಗೆ ಅದೃಷ್ಟ ಒಲಿದು ಬಂದಿದೆ.

ಮ್ಯಾರಥಾನ್ ಪ್ರಚಾರದ ಹಾದಿಯಲ್ಲಿರುವ ಪ್ರಧಾನಿ ಇಂದು ತೆಲಂಗಾಣದಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಇಂದು ಸಂಜೆ ಮಲ್ಕಾಜ್‌ಗಿರಿಯಲ್ಲಿ ರೋಡ್‌ಶೋಗಾಗಿ ಬೇಗಂಪೇಟೆಗೆ ಆಗಮಿಸುವ ಅವರು, ಪಕ್ಷದ ಲೋಕಸಭಾ ಅಭ್ಯರ್ಥಿ ಈಟಾಲ ರಾಜೇಂದರ್ ಮತ್ತು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರೊಂದಿಗೆ ಭಾಗವಹಿಸಲಿದ್ದಾರೆ. ರೋಡ್‌ಶೋಗಾಗಿ ಪೊಲೀಸರು ಸಂಚಾರ ಸಲಹೆಯನ್ನು ನೀಡಿದ್ದು, ಕಾರ್ಯಕ್ರಮ ಮುಗಿಯುವವರೆಗೆ ಹಲವಾರು ಪ್ರದೇಶಗಳು ಸಾರ್ವಜನಿಕರ ಓಡಾಟಕ್ಕೆ ಲಭ್ಯವಿಲ್ಲ.

ರಾತ್ರಿ ರಾಜಭವನದಲ್ಲಿ ತಂಗುವ ಪ್ರಧಾನಿ ನಾಳೆ ನಾಗರ್‌ಕರ್ನೂಲ್‌ನಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ನಾಗರ್‌ಕರ್ನೂಲ್‌ನಿಂದ ಬಿಜೆಪಿಯಿಂದ ಆಯ್ಕೆಯಾಗಿರುವ ಪಿ. ಭರತ್. ಹಾಲಿ ಸಂಸದ ಪಿ. ರಾಮುಲು ಅವರ ಪುತ್ರ. ಭಾನುವಾರ ಚಿಲಕಲೂರಿಪೇಟೆಯಲ್ಲಿ ಬಿಜೆಪಿ-ಟಿಡಿಪಿ-ಜನಸೇನಾ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Modi in Karnataka : ಮಾರ್ಚ್‌ 16ರಂದು ಮೋದಿ ಕಲಬುರಗಿಗೆ, 18ರಂದು ಶಿವಮೊಗ್ಗದಲ್ಲಿ ಬೃಹತ್‌ ಸಮಾವೇಶ

Exit mobile version