Site icon Vistara News

PM Narendra Modi: 370ನೇ ವಿಧಿ ರದ್ದು ಬಳಿಕ ಮೊದಲ ಬಾರಿಗೆ ಇಂದು ಪ್ರಧಾನಿ ಮೋದಿ ಕಾಶ್ಮೀರದಲ್ಲಿ, ₹5,000 ಕೋಟಿ ಮೌಲ್ಯದ ಯೋಜನೆಗೆ ಚಾಲನೆ

pm narendra modi in kashmir

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ ನೀಡಿದ್ದ 370ನೇ (article 370) ವಿಧಿಯನ್ನು ರದ್ದುಪಡಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಮೊದಲ ಬಾರಿಗೆ ಶ್ರೀನಗರಕ್ಕೆ (Modi in Kashmir) ಆಗಮಿಸಲಿದ್ದಾರೆ. ಅವರು ಬಕ್ಷಿ ಕ್ರೀಡಾಂಗಣದಲ್ಲಿ ‘ವಿಕಸಿತ ಭಾರತ, ವಿಕಸಿತ ಜಮ್ಮು ಕಾಶ್ಮೀರ’ (Viksit Bharat Viksit Jammu Kashmir) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಕೃಷಿ-ಆರ್ಥಿಕತೆಯನ್ನು ಹೆಚ್ಚಿಸಲು ₹5,000 ಕೋಟಿ ಮೌಲ್ಯದ ‘ಸಮಗ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮ’ವನ್ನು ಸಮರ್ಪಿಸಲಿದ್ದಾರೆ.

ಶ್ರೀನಗರದ ‘ಹಜರತ್‌ಬಾಲ್ ದೇಗುಲದ ಸಮಗ್ರ ಅಭಿವೃದ್ಧಿ’ ಸೇರಿದಂತೆ ಪ್ರವಾಸೋದ್ಯಮ ವಲಯದಲ್ಲಿ ₹1,400 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಪ್ರಧಾನಿ ಪ್ರಾರಂಭಿಸಲಿದ್ದಾರೆ. ಪ್ರವಾಸೋದ್ಯಮದಲ್ಲಿ ರಾಷ್ಟ್ರದ ನಾಡಿಮಿಡಿತವನ್ನು ಗುರುತಿಸುವ ಮೊದಲ ರಾಷ್ಟ್ರವ್ಯಾಪಿ ಉಪಕ್ರಮ ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ ಟೂರಿಸ್ಟ್ ಡೆಸ್ಟಿನೇಶನ್ ಪೋಲ್' ಮತ್ತು ಭಾರತಕ್ಕೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಭಾರತೀಯ ಡಯಾಸ್ಪೊರಾವನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿರುವಚಲೋ ಇಂಡಿಯಾ ಗ್ಲೋಬಲ್ ಡಯಾಸ್ಪೊರಾ ಅಭಿಯಾನ’ಗಳು ಸಹ ಉದ್ಘಾಟನೆಯಾಗಲಿವೆ.

ಪ್ರಧಾನಿ ಮೋದಿಯವರ ಕಾಶ್ಮೀರ ಭೇಟಿಯ ವಿವರ ಇಲ್ಲಿದೆ:

1) ʻವಿಕಸಿತ ಭಾರತ, ವಿಕಸಿತ ಜಮ್ಮು ಕಾಶ್ಮೀರ’ ಕಾರ್ಯಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮುನ್ನ ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜದ ಅಲಂಕಾರ ನಳನಳಿಸುತ್ತಿದೆ. ಡ್ರೋನ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಕಣ್ಗಾವಲಿಗಾಗಿ ಬಳಸಲಾಗುತ್ತಿದ್ದು, ಸ್ಥಳದ ಸುತ್ತ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

2) ಮಾರ್ಗದುದ್ದಕ್ಕೂ ಶಾಲೆಗಳನ್ನು ಮುಚ್ಚಲಾಗಿದೆ. ಹೈ-ಪ್ರೊಫೈಲ್ ಈವೆಂಟ್‌ನ ಸುರಕ್ಷತೆ ಮತ್ತು ಸುಗಮ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಗುರುವಾರ ನಡೆಯಲಿದ್ದ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.

3) ಶ್ರೀನಗರ ಪೊಲೀಸರು ನಗರದಲ್ಲಿ ಡ್ರೋನ್ ಮತ್ತು ಕ್ವಾಡ್‌ಕಾಪ್ಟರ್‌ಗಳ ಹಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಡ್ರೋನ್ ಕಾರ್ಯಾಚರಣೆಗಳಿಗೆ ಶ್ರೀನಗರವನ್ನು “ತಾತ್ಕಾಲಿಕ ಕೆಂಪು ವಲಯ” ಎಂದು ಗೊತ್ತುಪಡಿಸಲಾಗಿದೆ. ನಗರದಲ್ಲಿನ ಎಲ್ಲಾ ಅನಧಿಕೃತ ಡ್ರೋನ್ ಕಾರ್ಯಾಚರಣೆಗಳು ಡ್ರೋನ್ ನಿಯಮಗಳು- 2021ರ ನಿಯಮ 24(2) ರ ಸಂಬಂಧಿತ ನಿಬಂಧನೆಗಳ ಪ್ರಕಾರ ದಂಡನೆಗೆ ಗುರಿಯಾಗುತ್ತವೆ.

4) ಝೀಲಂ ನದಿ ಮತ್ತು ದಾಲ್ ಸರೋವರದಲ್ಲಿ ಮೆರೈನ್ ಕಮಾಂಡೋಗಳನ್ನು ನಿಯೋಜಿಸಲಾಗಿದ್ದು, ಈ ಜಲಮೂಲಗಳನ್ನು ಯಾವುದೇ ವಿಧ್ವಂಸಕ ಚಟುವಟಿಕೆಗಳಿಗೆ ಬಳಸದಂತೆ ತಡೆಯಲಾಗಿದೆ.

5) 2019ರಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಣಿವೆಯಲ್ಲಿ ಪ್ರಧಾನಿ ಮೋದಿಯವರ ಮೊದಲ ರ್ಯಾಲಿಯಿದು, ಇದರಲ್ಲಿ ಸುಮಾರು ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಬಕ್ಷಿ ಕ್ರೀಡಾಂಗಣದಲ್ಲಿ ನಡೆಯಲಿರುವ ರ್ಯಾಲಿಯು ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಿಂದ ಜನರನ್ನು ಸೆಳೆಯುವ ನಿರೀಕ್ಷೆಯಿದೆ. ಪಕ್ಷದ ಮುಖಂಡರು ಕಳೆದ ವಾರ ನಡೆದ ಸಭೆಯಲ್ಲಿ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದರು. ವಿವಿಧ ಇಲಾಖೆಗಳಿಗೆ ಕಾರ್ಯಗಳನ್ನು ನಿಯೋಜಿಸಿದ್ದರು.

6) ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಯುವ ಗಾಯಕ ಇಮ್ರಾನ್ ಅಜೀಜ್ ಅವರು ಕಾಶ್ಮೀರ ಕಣಿವೆಗೆ ಭೇಟಿ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ ಹಾಡನ್ನು ರಚಿಸಿದ್ದಾರೆ. ಸುಮಾರು ಮೂರು ನಿಮಿಷಗಳ ಅವಧಿಯ ಹಾಡು, 370ನೇ ವಿಧಿಯ ರದ್ದು ಸೇರಿದಂತೆ ಮೋದಿ ಮತ್ತು ಅವರ ಸರ್ಕಾರದ ಕ್ರಮಗಳನ್ನು ಶ್ಲಾಘಿಸುತ್ತದೆ. “ಮೋದಿ ಆಯೇಂಗೆ ಮೋದಿ ಆಯೇಂಗೆ, ಕಮಲ್ ಖಿಲಾಯೇಂಗೆ, ಝಂಡಾ ಲೆಹರಾಯೇಂಗೆ” (ಮೋದಿ ಬರುತ್ತಾರೆ, ಕಮಲ ಅರಳುತ್ತದೆ, ಧ್ವಜಾರೋಹಣ ಮಾಡಲಿದ್ದಾರೆ)” ಎಂದು ಆರಂಭವಾಗುವ ಹಾಡು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದನ್ನೂ ಸೂಚಿಸುತ್ತದೆ.

7) ಭಯೋತ್ಪಾದನೆಯ ರಾಜಧಾನಿಯಾಗಿದ್ದ ಜಮ್ಮು ಮತ್ತು ಕಾಶ್ಮೀರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರವಾಸೋದ್ಯಮ ರಾಜಧಾನಿಯಾಗಿ ಪರಿವರ್ತಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ತರುಣ್ ಚುಗ್ ಪ್ರತಿಪಾದಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಸರ್ವತೋಮುಖ ಅಭಿವೃದ್ಧಿಯಾಗಿದೆ ಎಂದಿದ್ದಾರೆ.

8) ಶ್ರೀನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಭಾಗವಹಿಸಲು ಸರ್ಕಾರಿ ನೌಕರರನ್ನು ಒತ್ತಾಯಿಸಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಸ್ತು ಕ್ರಮದ ಬೆದರಿಕೆ ಒಡ್ಡಿ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದಿದ್ದಾರೆ.

9) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಮ್ಮು-ಕಾಶ್ಮೀರಕ್ಕೆ (Jammu Kashmir) ಭೇಟಿ ನೀಡಲು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಕಣಿವೆಯಲ್ಲಿ ನೆಲಬಾಂಬ್‌ ಸ್ಫೋಟಗೊಂಡು (Landmine Blast) ಭಾರತೀಯ ಸೇನೆಯ ಪೋರ್ಟರ್‌ (Porter- ಯೋಧ) ಒಬ್ಬರು ಹುತಾತ್ಮರಾಗಿದ್ದಾರೆ. ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆ ನೌಶೇರಾ ವಲಯದಲ್ಲಿರುವ ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ನೆಲಬಾಂಬ್‌ ಸ್ಫೋಟಿಸಲಾಗಿದೆ.

ಇದನ್ನೂ ಓದಿ: ಮೋದಿ ಭೇಟಿಗೂ ಒಂದು ದಿನ ಮೊದಲೇ ಕಾಶ್ಮೀರದಲ್ಲಿ ಬಾಂಬ್‌ ಸ್ಫೋಟ; ಒಬ್ಬ ಯೋಧ ಹುತಾತ್ಮ

Exit mobile version