ಬೆಂಗಳೂರು: ಒಂದೆರಡು ತಿಂಗಳ ಹಿಂದೆ ಪೋಸ್ಟ್ ಆಫೀಸ್ (Post Office) ಮುಂದೆ ಮಹಿಳೆಯರು (Women) ಭಾರಿ ಪ್ರಮಾಣದಲ್ಲಿ ಅಕೌಂಟ್ (account) ತೆರೆಯಲು ಕ್ಯೂ ನಿಂತಿದ್ದರು. ಇದೀಗ ಮತ್ತೆ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಪೋಸ್ಟ್ ಆಫೀಸ್ ಮುಂದೆ ಜಮಾಯಿಸಿ ತಮ್ಮ ಅಕೌಂಟ್ ತೆರೆಯಲು ಮುಂದಾಗಿದ್ದಾರೆ. ಅಕೌಂಟ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಹಣ ಹಾಕಲಿದ್ದಾರೆ ಎಂಬ ವದಂತಿಯೇ ಇದಕ್ಕೆ ಕಾರಣವಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪೋಸ್ಟ್ ಆಫೀಸ್‌ನಲ್ಲಿರುವ ಮಹಿಳೆಯರ ಅಕೌಮಟ್‌ಗಳಿಗೆ ತಲಾ 3 ಸಾವಿರ ರೂಪಾಯಿ ಹಾಕಲಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಪೋಸ್ಟ್ ಆಫೀಸ್‌ಗಳ ಮುಂದೆ ಕ್ಯೂ ನಿಲ್ಲುತ್ತಿದ್ದು, ಅಕೌಂಟ್ ಓಪನ್ ಮಾಡುತ್ತಿದ್ದಾರೆ. ಜೊತೆಗೆ ಮೋದಿ ಸ್ಕೀಮ್ ಬಗ್ಗೆಯೂ ವಿಚಾರಿಸುತ್ತಿದ್ದಾರೆ.
ಈ ಬಗ್ಗೆ ಮಹಿಳೆಯರನ್ನು ವಿಚಾರಿಸಿದಾಗ, ಮೋದಿ 3 ಸಾವಿರ ಹಾಕ್ತಾರಂತೆ ಎಂದು ಸುದ್ದಿ ಸಿಕ್ಕಿತು, ಅದಕ್ಕೆ ಬಂದೆವು ಎನ್ನುತ್ತಿದ್ದಾರೆ. ಹೆಚ್ಚಿನವರು ಯಾವುದೇ ಅಧಿಕೃತ ಮಾಹಿತಿ ಪಡೆಯದೆ, ಅಕ್ಕಪಕ್ಕದವರು ಹೇಳಿದ ಮಾತುಗಳನ್ನು ಕೇಳಿಕೊಂಡು ಬಂದಿದ್ದಾರೆ. ಹೀಗೆ ಬಂದವರಿಗೆ ನಿಜ ಮಾಹಿತಿ ನೀಡಲು ಅಂಚೆ ಕಚೇರಿ ಸಿಬ್ಬಂದಿ ಪ್ರಯತ್ನಿಸುತ್ತಿದ್ದು, ಪ್ರತಿದಿನ ಇಂಥ ನೂರಾರು ಮಂದಿಗೆ ತಿಳಿಹೇಳಿ ಹೈರಾಣಾಗುತ್ತಿದ್ದಾರೆ.
“ಅಂಥ ಯಾವುದೇ ಸ್ಕೀಮ್‌ಗಳ ಮಾಹಿತಿ ನಮಗೆ ಇಲ್ಲ. ಆದರೆ ಅಕೌಂಟ್ ತೆರೆಯುತ್ತೇವೆ ಎಂದು ಬಂದವರನ್ನು ವಾಪಸ್ ಕಳಿಸುವುದಿಲ್ಲ. ಮಿನಿಮಮ್ ಹಣ ಕಟ್ಟಿಸಿಕೊಂಡು ಖಾತೆ ತೆರೆದು ಕಳಿಸುತ್ತಿದ್ದೇವೆ. ಯಾವುದಾದರೂ ಸರ್ಕಾರಿ ಸ್ಕೀಮ್ ಇದ್ದರೆ ಹಣ ಬರುತ್ತದೆ. ಆದರೆ ನಾವು ಇದಕ್ಕೆ ಖಾತ್ರಿ ಕೊಡುವುದಿಲ್ಲ” ಎಂದು ಅಂಚೆ ಕಚೇರಿ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.
ಒಂದು ತಿಂಗಳ ಹಿಂದೆ, ರಾಹುಲ್ ಗಾಂಧಿ ತಮ್ಮ ಖಾತೆಗಳಿಗೆ ʼಟಕಾಟಕ್ʼ ಹಣ ಹಾಕುತ್ತಾರಂತೆ ಎಂದು ಮಹಿಳೆಯರು ಅಕೌಂಟ್ ತೆರೆಯಲು ಮುಗಿಬಿದ್ದಿದ್ದರು. ಚುನಾವಣೆಗೂ ಮುನ್ನ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಧನಸಹಾಯದ ಆಶ್ವಾಸನೆ ನೀಡಲಾಗಿತ್ತು. ಜೊತೆಗೆ ರಾಹುಲ್ ಗಾಂಧಿ ಕೂಡ ತಮ್ಮ ಭಾಷಣದಲ್ಲಿ ʼಟಕಾಟಕ್ʼ ಹಣ ಹಾಕುವ ಬಗ್ಗೆ ಭರವಸೆ ನೀಡಿದ್ದರು. ಈ ಟಕಾಟಕ್ ನಂಬಿ ಸಾವಿರಾರು ಮಹಿಳೆಯರು ಖಾತೆ ತೆರೆದಿದ್ದರು. ಇದೀಗ ʼಟಕಾಟಕ್ʼ ಕೈಕೊಟ್ಟಿದ್ದರೂ, ಮೋದಿಯಾದರೂ ಹಣ ಹಾಕಬಹುದು ಎಂಬ ಆಸೆಯಲ್ಲಿ ಮಹಿಳೆಯರು ಬರುತ್ತಿದ್ದಾರೆ.