Site icon Vistara News

ವಿಸ್ತಾರ ಸಂಪಾದಕೀಯ | ನ್ಯಾಯಾಂಗ ನೇಮಕಾತಿಗಳಲ್ಲಿ ರಾಜಕೀಯ ಕಾರ್ಯಾಂಗದ ಹಸ್ತಕ್ಷೇಪ ಬೇಡ

Judiciary And Executive System

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು. ಇವು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದರೆ ಪ್ರಜಾಪ್ರಭತ್ವ ವ್ಯವಸ್ಥೆಯು ಯಶಸ್ವಿಯಾಗುತ್ತದೆ. ಈ ಮೂರೂ ಅಂಗಗಳಲ್ಲಿ ಯಾವುದೇ ಒಂದು ಅಂಗವು ಭಿನ್ನ ದಿಕ್ಕಿನಲ್ಲಿ ಸಾಗಿದರೆ, ಅರಾಜಕತೆ ಸೃಷ್ಟಿಯಾಗುತ್ತದೆ. ಈ ಕಾರಣಕ್ಕಾಗಿ ನಮ್ಮ ಸಂವಿಧಾನಕರ್ತೃರು, ಈ ಮೂರೂ ಅಂಗಗಳ ನಡುವೆ ಸಮನ್ವಯ ಮೂಡುವ ರೀತಿಯಲ್ಲಿ ಅವುಗಳ ಕಾರ್ಯಗಳು, ಹೊಣೆಗಾರಿಕೆ ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನಮೂದಿಸಿದ್ದಾರೆ. ಹೀಗಿದ್ದೂ, ಭಾರತದಲ್ಲಿ ನ್ಯಾಯಾಂಗ ನೇಮಕಾತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ (ರಾಜಕೀಯ ಕಾರ್ಯಾಂಗ) ಮತ್ತು ಸುಪ್ರೀಂ ಕೋರ್ಟ್ (ನ್ಯಾಯಾಂಗ) ನಡುವೆ ತಿಕ್ಕಾಟ ಮುಂದುವರಿದಿರುವುದು ದುರದೃಷ್ಟಕರ.

ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯು ಸಂವಿಧಾನದ ಹೊರಗಿನ ವ್ಯವಸ್ಥೆಯಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಟೀಕಿಸಿದರೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು, ಸಂಸತ್ತು ರೂಪಿಸಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(NJAC)ವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದು, ಜನರ ಆದೇಶಕ್ಕೆ ವಿರುದ್ಧವಾದದು ಎಂದು ವಾಗ್ದಾಳಿ ನಡೆಸಿದ್ದರು. ಜವಾಬ್ದಾರಿ ಸ್ಥಾನದಲ್ಲಿರುವವರು ತೂಕಬದ್ಧವಾಗಿ ಮಾತನಾಡಬೇಕು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್‌, ಕೊಲಿಜಿಯಂ ವ್ಯವಸ್ಥೆಯೇ ಸಂವಿಧಾನಬದ್ಧವಾಗಿದೆ ಎಂದು ಸಮರ್ಥಿಸಿಕೊಂಡಿತ್ತು. ಆದರೆ, ಈ ಸಂಘರ್ಷದಿಂದಾಗಿ ದೇಶದಲ್ಲಿ ನ್ಯಾಯದಾನ ವಿಳಂಬವಾಗುತ್ತಿರುವುದು ವಾಸ್ತವ. ಈ ಕುರಿತು ಯೋಚಿಸಬೇಕಾದ ಸಮಯವು ಈಗ ಎದುರಾಗಿದೆ.

ನಾವಿಲ್ಲ ಎರಡು ಸಂಗತಿಗಳ ಬಗ್ಗೆ ಗಮನಹರಿಸಬೇಕು. ಮೊದಲನೆಯದು- ಸಂಘರ್ಷ ಬಿಟ್ಟು ಸಮನ್ವಯತೆಯನ್ನು ಅಳವಡಿಸಿಕೊಳ್ಳುವುದು. ಎರಡನೆಯದು-ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡುವುದು. 2022ಕ್ಕೆ ಅನ್ವಯಿಸಿ ದಾಖಲೆಗಳಲ್ಲಿರುವ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ, ಭಾರತದಲ್ಲಿ 4.7 ಕೋಟಿ ಪ್ರಕರಣಗಳ ವಿಚಾರಣೆ ಬಾಕಿ ಉಳಿದಿವೆ. ಈ ಪೈಕಿ 12.4 ಪ್ರತಿಶತ ಪ್ರಕರಣಗಳು ಹೈಕೋರ್ಟ್‌ಗಳು ಮತ್ತು ವಿವಿಧ ಹಂತದ ಕೋರ್ಟುಗಳಲ್ಲಿ 87.4 ಪ್ರತಿಶತ ಪ್ರಕರಣಗಳಿವೆ! ಈ ಅಂಕಿ ಸಂಖ್ಯೆಗಳು ನ್ಯಾಯಾಂಗ ಎದುರಿಸುತ್ತಿರುವ ಮೂಲಭೂತ ಸೌಕರ್ಯ ಮತ್ತು ಅಗತ್ಯ ಮಾನವ ಸಂಪನ್ಮೂಲ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ನ್ಯಾಯ ಅರಸಿ ನ್ಯಾಯಾಲಯಗಳಿಗೆ ಬಂದ ಕಕ್ಷಿದಾರರ ಹಿತವನ್ನು ಸರ್ಕಾರವಾಗಲೀ, ನ್ಯಾಯಾಲಯಗಳಾಗಲಿ ಕಾಪಾಡುತ್ತಿಲ್ಲ.

ಸಂಸತ್ತಿನಲ್ಲಿ ಮಂಡಿಸಲಾದ ಕಾನೂನು ಮತ್ತುಸಿಬ್ಬಂದಿ ಇಲಾಖೆ ಸ್ಥಾಯಿ ಸಮಿತಿಯ ವರದಿಯಲ್ಲಿ ಕೂಡ ಈ ಬಗ್ಗೆ ಬೆಳಕು ಚೆಲ್ಲಲಾಗಿದೆ. ದೇಶದಲ್ಲಿ 25 ಹೈಕೋರ್ಟ್‌ಗಳಿವೆ. ಈ ಪೈಕಿ ತೆಲಂಗಾಣ, ಪಟನಾ ಮತ್ತು ದೆಹಲಿ ಹೈಕೋರ್ಟ್‌ಗಳಲ್ಲಿ ಖಾಲಿ ಹುದ್ದೆಗಳ ಪ್ರಮಾಣ ಶೇ.50ಕ್ಕಿಂತಲೂ ಹೆಚ್ಚು. 10 ಹೈಕೋರ್ಟ್‌ಗಳಲ್ಲಿ ಶೇ.40ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಜತೆಗೆ, ಡಿಸೆಂಬರ್ 5ರ ಮಾಹಿತಿಯ ಪ್ರಕಾರ, ಮಂಜೂರಾದ 1108 ನ್ಯಾಯಮೂರ್ತಿಗಳ ಹುದ್ದೆಗಳ ಪೈಕಿ 778 ಜಡ್ಜ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಾಹಿತಿಯು ನ್ಯಾಯಾಂಗ ವಲಯವು ಎದುರಿಸುತ್ತಿರುವ ನೇಮಕಾತಿ ಬಿಕ್ಕಟ್ಟನ್ನು ನಮ್ಮ ಮುಂದೆ ತೆರೆದಿಡುತ್ತಿದೆ. ಈ ವಿಷಯದಲ್ಲಿ ಸರ್ಕಾರವಾಗಲೀ, ಸುಪ್ರೀಂ ಕೋರ್ಟ್ ಆಗಲಿ ಸಂಘರ್ಷವನ್ನು ಬಿಟ್ಟು ಸಮನ್ವಯತೆಯನ್ನು ಸಾಧಿಸಬೇಕಾದ ಅಗತ್ಯವಿದೆ.

ಇನ್ನು, ನೇಮಕಾತಿಯ ಮೂಲಕ ನ್ಯಾಯಾಂಗದ ಮೇಲೆ ಸವಾರಿ ಮಾಡುವ ಕಾರ್ಯಾಂಗ ಮತ್ತು ಶಾಸಕಾಂಗಗಳ ಒಳಸುಳಿ ಯಾರಿಗಾದರೂ ಅರ್ಥವಾಗುವಂಥದ್ದು. ಈಗಾಗಲೇ, ಸಂವಿಧಾನಬದ್ಧ ರಚನೆಯಾದ ಸಂಸ್ಥೆಗಳ ನೇಮಕಾತಿಗಳು ರಾಜಕೀಯ ಕಾರ್ಯಾಂಗ ಅಧೀನವೇ ಇದೆ. ಅವುಗಳ ನೇಮಕಾತಿಯನ್ನು ಯಾವ ರೀತಿ ಮಾಡಲಾಗುತ್ತದೆ ಎಂಬುದನ್ನು ನಾವೆಲ್ಲ ನೋಡುತ್ತಿದ್ದೇವೆ. ಅದು ಸಿಬಿಐ, ಸಿವಿಸಿ, ಎನ್ಐಎ, ಚುನಾವಣಾ ಆಯೋಗ ಇತ್ಯಾದಿ ಸಂಸ್ಥೆಗಳ ನೇಮಕಾತಿಯ ಶೇ.100ರಷ್ಟು ಮೆರಿಟ್ ಅಥವಾ ಸಂವಿಧಾನಬದ್ಧವಾಗಿಯೇ ಮಾಡಲಾಗಿದೆ ಎಂದು ಯಾವ ಸರ್ಕಾರವು ಹೇಳಲು ಸಾಧ್ಯವಿಲ್ಲ. ಅಧಿಕಾರದಲ್ಲಿರುವ ಪಕ್ಷಗಳ ಧೋರಣೆಗೆ ಅನುಸಾರವಾಗಿಯೇ ಈ ನೇಮಕಾತಿಗಳು ನಡೆಯುತ್ತವೆ! ಇದರಲ್ಲೇನೂ ಗುಟ್ಟು ಇಲ್ಲ. ಈಗ ಸುಪ್ರೀಂ ಕೋರ್ಟ್, ಹೈಕೋರ್ಟ್‌ನಂಥ ನ್ಯಾಯಮೂರ್ತಿಗಳ ನೇಮಕಾತಿಯೂ ರಾಜಕೀಯ ಕಾರ್ಯಾಂಗದ ಅಡಿಯಲ್ಲೇ ನಡೆಸುವಂತಾದರೆ, ನ್ಯಾಯಾಂಗ ಸ್ವಾತಂತ್ರ್ಯವನ್ನು ಬಲಿ ಕೊಟ್ಟಂತೆಯೇ ಸರಿ.

ನ್ಯಾಯಾಂಗದ ತಾಟಸ್ಥ್ಯ, ಪಾವಿತ್ರ್ಯ, ಸ್ವಾತಂತ್ರ್ಯ ಮತ್ತು ಸಂವಿಧಾನದ ಆಶಯಗಳನ್ನು ಕಾಪಾಡಬೇಕಿದ್ದರೆ ನ್ಯಾಯಾಂಗ ನೇಮಕಾತಿಗಳು ಸಂಪೂರ್ಣವಾಗಿ ಆಡಳಿತ ಪಕ್ಷಗಳ ಅಥವಾ ರಾಜಕೀಯ ಕಾರ್ಯಾಂಗದ ಹಸ್ತಕ್ಷೇಪ ಇಲ್ಲದೇ ನಡೆಯಬೇಕು. ಹಾಗಾಗಿ, ಈಗ ಚಾಲ್ತಿಯಲ್ಲಿರುವ ಕೊಲಿಜಿಯಂ ವ್ಯವಸ್ಥೆ ಸಮಗ್ರ ಹಾಗೂ ಪಾರದರ್ಶಕವಾಗಿದೆ ಮತ್ತು ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ನಡೆಸುವ ರಾಜಕೀಯ ಪಕ್ಷಗಳು ತಮ್ಮ ಹಟಮಾರಿತನವನ್ನು ಬಿಟ್ಟು, ನ್ಯಾಯಾಂಗದೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಹೋಗಬೇಕು. ಅಂತಿಮವಾಗಿ, ನ್ಯಾಯಾಲಯಗಳ ಬಾಗಿಲಿಗೆ ನ್ಯಾಯ ಬೇಡಿ ಬರುವ ಕೋಟ್ಯಂತರ ಜನರಿಗೆ ವಿಳಂಬವಿಲ್ಲದೇ ನ್ಯಾಯದಾನ ದೊರೆಯಬೇಕು.

ಇದನ್ನೂ ಓದಿ | Delay In Judges Appointment | ಜಡ್ಜ್‌ಗಳ ನೇಮಕ ವಿಳಂಬ, ಶಾಸಕಾಂಗ, ನ್ಯಾಯಾಂಗ ಕುರಿತು ಸಂಸದೀಯ ಸಮಿತಿ ಬೇಸರ

Exit mobile version