ಬೆಂಗಳೂರು: ರಾಜ್ಯದ ಮೇಕೆದಾಟು ಯೋಜನೆಗೆ ತಮಿಳುನಾಡು ಮತ್ತೆ ತಗಾದೆ ತೆಗೆದಿರುವುದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ತಮಿಳುನಾಡಿನ ವಿರೋಧ ಪರಿಗಣಿಸದೇ ಈ ಯೋಜನೆಗೆ ಇರುವ ಅಡ್ಡಿಗಳನ್ನು ದೂರ ಮಾಡಬೇಕೆಂದು ಕನ್ನಡ ಪರ ಹೋರಾಟಗಾರರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಒತ್ತಾಯಿಸುತ್ತಿದ್ದಾರೆ.
ಮೇಕೆದಾಟು ಯೋಜನೆ ಘೋಷಣೆಯಾದಾಗಿನಿಂದ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ತಮಿಳುನಾಡು, ಈಗ ಜೂನ್ 17ರಂದು ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತಂತೆ ಚರ್ಚಿಸಬಾರದು ಎಂದು ಈಗ ಒತ್ತಾಯಿಸುತ್ತಿದೆ.
ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಈ ಯೋಜನೆ ಕುರಿತು ಚರ್ಚೆಯಾಗದಂತೆ ನೋಡಿಕೊಳ್ಳಬೇಕೆಂದು ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. “ಕಾವೇರಿ ವಿವಾದ ಕುರಿತ ಸುಪ್ರೀಂ ಕೋರ್ಟ್ ನೀಡಿರುವ ಐತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರಾಧಿಕಾರದ ಸಭೆ ನಡೆಯಬೇಕು. ಈ ಸಭೆಯಲ್ಲಿ ಹೊಸ ಯೋಜನೆ ಮೇಕೆದಾಟು ಕುರಿತು ಚರ್ಚಿಸಬಾರದು. ಏಕೆಂದರೆ ಈ ಯೋಜನೆ ಜಾರಿಗೆ ಬಂದಲ್ಲಿ ನಮ್ಮ ರಾಜ್ಯದ ಸಾವಿರಾರು ರೈತರು ನೀರಿಲ್ಲದೇ, ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿ ಬರುತ್ತದೆʼʼ ಎಂದು ತಮಿಳುನಾಡು ಸಿಎಂ ಈ ಪತ್ರದಲ್ಲಿ ವಿವರಿಸಿದ್ದಾರೆ.
ಮೇಕೆದಾಟು ಯೋಜನೆಯನ್ನು ಪ್ರಶ್ನಿಸಿ ಈಗಾಗಲೇ ತಮಿಳು ನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದರ ವಿಚಾರಣೆ ಇನ್ನೂ ನಡೆಯಬೇಕಿದೆ. ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತು ಚಚ್ಚಿಸುವುದು ಸರಿಯಲ್ಲ. ಈ ವಿಷಯದ ಕುರಿತು ಸಭೆಯಲ್ಲಿ ಪ್ರಸ್ತಾಪಿಸದಂತೆ ಪ್ರಾಧಿಕಾರದ ಮುಖ್ಯಸ್ಥರಿಗೆ ಸೂಚಿಸಲು ಜಲಶಕ್ತಿ ಸಚಿವಾಲಯಕ್ಕೆ ಸೂಚಿಸಿ ಎಂದು ಈ ಪತ್ರದಲ್ಲಿ ಎಂ ಕೆ ಸ್ಟಾಲಿನ್ ಪ್ರಧಾನಿಯವರಲ್ಲಿ ಆಗ್ರಹಿಸಿದ್ದಾರೆ.
ವಿರೋಧ ಕಾನೂನು ಬಾಹಿರ
ತಮಿಳುನಾಡಿನ ಸಿಎಂ ಪ್ರಧಾನಿಗೆ ಪತ್ರ ಬರೆದಿರುವುದು ಕಾನೂನು ಬಾಹಿರ ಎಂದಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು ಎಂದಿದ್ದಾರೆ
ಮಂಗಳವಾರ ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಪದೇ ಪದೇ ತಗಾದೆ ತೆಗೆಯುತ್ತಿದೆ. ಮುಖ್ಯಮಂತ್ರಿ ಸ್ಟಾಲಿನ್ ಪ್ರಧಾನಿಗಳಿಗೆ ಪತ್ರ ಬರೆದಿರುವುದು ವಿಚಾರ ಗೊತ್ತಾಗಿದ್ದು, ಪತ್ರದ ಪ್ರತಿಯನ್ನು ತರಿಸಿಕೊಳ್ಳುತ್ತಿದ್ದೇನೆ. ಅವರು ಏನು ಬರೆದಿದ್ದಾರೆ ಎಂಬುದನ್ನು ನೋಡುತ್ತೇನೆ ಎಂದಿದ್ದಾರೆ.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರಜಲ ಆಯೋಗಕ್ಕೆ ಕಾವೇರಿ ಉಸ್ತುವಾರಿ ಪ್ರಾಧಿಕಾರ ಯೋಜನಾ ವರದಿಗೆ ಒಪ್ಪಿಗೆ ನೀಡುವ ಷರತ್ತಿನ ಮೇಲೆ ಪ್ರಸ್ತಾವ ಸಲ್ಲಿಸಿತ್ತು. ಈಗಾಗಲೇ ಅದೇ ಉಸ್ತುವಾರಿ ಸಮಿತಿಯಲ್ಲಿ 14- 15 ಸಭೆಗಳು ಆಗಿವೆ. ಈಗ ಜೂ. 17 ರಂದು ಅಂತಿಮ ಸಭೆ ನಡೆಯುತ್ತದೆ. ಇದುವರೆಗೆ ಸಭೆಯಲ್ಲಿ ಭಾಗವಹಿಸದ ತಮಿಳುನಾಡು ಸರ್ಕಾರ ಈಗ ಪ್ರಧಾನಿಗೆ ಪತ್ರ ಬರೆದಿದೆ. ಇದಕ್ಕೇನು ಕಾನೂನಿನ ಮಾನ್ಯತೆ ಇಲ್ಲ. ರಾಜಕೀಯ ಕಾರಣಗಳಿಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಅವರೇನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ, ಈ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ದೊರೆಯಲಿದೆ ಎಂದು ಸಿಎಂ ಹೇಳಿದ್ದಾರೆ.
ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೂಡ ತಮಿಳುನಾಡು ಮುಖ್ಯಮಂತ್ರಿ ಪತ್ರ ಬರೆದಿರುವುದು ಕಾನೂನು ಬಾಹಿರ ಎಂದಿದ್ದು, ಕಾವೇರಿ ನದಿಯಲ್ಲಿ ಇನ್ನೂ 4.5 ಟಿಎಂಸಿ ನೀರು ಬಳಕೆ ಮಾಡಲು ರಾಜ್ಯಕ್ಕೆ ಅವಕಾಶ ಇದೆ. ಅದಕ್ಕೆ ಡಿಪಿಆರ್ ಮಾಡಿದ್ದೇವೆಯೇ ಹೊರತು ಹೆಚ್ಚುವರಿ ನೀರಿನ ಬಳಕೆಗೆ ಮುಂದಾಗಿಲ್ಲ. ಇದಕ್ಕೆ ತಮಿಳುನಾಡು ತಗಾದೆ ತೆಗೆಯುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ
ತಮಿಳುನಾಡು ನಿರೀಕ್ಷೆಯಂತೆಯೇ ಖ್ಯಾತೆ ತೆಗೆದಿದೆ. ಇದಕ್ಕೆ ಹೆದರಬಾರದು, ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ಈಗ ರಾಜ್ಯ ಸರ್ಕಾರ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕೇಂದ್ರದ ಮೇಲೆ ಒತ್ತಡ ಹೇರುವ ಧೈರ್ಯ ಬಿಜೆಪಿ ಸರ್ಕಾರಕ್ಕಿಲ್ಲದೇ ಇದ್ದರೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಿ, ಕೇಂದ್ರ ಸಚಿವರ ಜತೆ ನಾವೇ ಮಾತನಾಡುತ್ತೇವೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿ ಪತ್ರ ಬರೆದರೆ ಅದಕ್ಕೆ ಯಾವುದೇ ಮಾನ್ಯತೆ ಇಲ್ಲ. ಇದನ್ನು ಕೇಂದ್ರ ನೆಪ ಮಾಡಿಕೊಂಡು ಯೋಜನೆಗೆ ಅಡ್ಡಗಾಲು ಹಾಕಬಾರದು. ಈ ವಿಷಯದಲ್ಲಿ ಬಿಜೆಪಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ ಈ ಯೋಜನೆ ಜಾರಿಯಾಗುವಂತೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಏನಿದು ಯೋಜನೆ?
ಕುಡಿಯು ನೀರು, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗಾಗಿ ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಯುವ ಹೆಚ್ಚುವರಿ ನೀರು ಬಳಸಿಕೊಳ್ಳಲು ಕನಕಪುರ ತಾಲೂಕಿನ ಮೇಕದಾಟು ಬಳಿ 5,192 ಕೋಟಿ ವೆಚ್ಚದಲ್ಲಿ 66.50 ಟಿಎಂಸಿ ಸಾಮರ್ಥ್ಯದ ಸಮತೋಲನೆ ಜಲಾಶಯ ನಿರ್ಮಿಸಲು ರಾಜ್ಯ ಸರಕಾರ ಯೋಜನೆ ರೂಪಿಸಿದೆ. ಆದರೆ ಇದಕ್ಕೆ ತಮಿಳುನಾಡು ಸರಕಾರದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ| Mekedatu | ಕೇಂದ್ರ ಸರಕಾರಕ್ಕೆ ತಮಿಳುನಾಡು ಸೂಚನೆ ನೀಡುವಂತಿಲ್ಲ: ಸಿಎಂ ಬೊಮ್ಮಾಯಿ ತಿರುಗೇಟು