Site icon Vistara News

ವಿಸ್ತಾರ ಸಂಪಾದಕೀಯ: ಪಶ್ಚಿಮ ಬಂಗಾಳದ ಚುನಾವಣಾ ಹಿಂಸೆ ಆತಂಕಕಾರಿ

West Bengal

ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದೆ. ಮತದಾನದ ದಿನ 13 ಜನರ ಸಾವಾಗಿದೆ. ರಾಜ್ಯದ ಎಲ್ಲ ಕಡೆ ಚುನಾವಣೆ ಸಂಬಂಧಿ ಹಿಂಸಾಚಾರವೇ ಮೆರೆದಿದೆ. ಹೀಗೆ ಕೊಲ್ಲಲ್ಪಟ್ಟ 13 ಮಂದಿಯಲ್ಲಿ 8 ಜನ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು, ಮೂವರು ಸಿಪಿಐ(ಎಂ), ಬಿಜೆಪಿಯ ಒಬ್ಬ ಮತ್ತು ಕಾಂಗ್ರೆಸ್​ನ ಒಬ್ಬ ಕಾರ್ಯಕರ್ತರು. ಒಟ್ಟಾರೆ ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆ ರಕ್ತಸಿಕ್ತ ಅಧ್ಯಾಯವಾಗಿದೆ. ಇಲ್ಲಿ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದಲೂ ಹಿಂಸಾಚಾರ ನಡೆಯುತ್ತಲೇ ಇದೆ. ಮತಪತ್ರಗಳನ್ನು ಸುಟ್ಟಿದ್ದು, ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಇಟ್ಟಿದ್ದು, ಮತ ಹಾಕಲು ಬಂದ ಮತದಾರರ ಮೇಲೆ ದಾಳಿ ಮಾಡಿಸಿದ ಘಟನೆಗಳೂ ನಡೆದಿವೆ. ಇದೊಂದು ಆತಂಕಕಾರಿ ಬೆಳವಣಿಗೆ.

ಪಶ್ಚಿಮ ಬಂಗಾಳದ ಚುನಾವಣೆ ಸಂದರ್ಭ ಯಾವಾಗಲೂ ಸೆಡೆತದಿಂದ, ಬಿಗುವಿನಿಂದ ಕೂಡಿರುತ್ತದೆ. ಈ ಬಾರಿ ಇಲ್ಲಿನ ಒಟ್ಟು 73,887 ಪಂಚಾಯಿತಿ ಸ್ಥಾನಗಳಿಗೆ ನಡೆದ ಚುನಾವಣೆ ಕಣದಲ್ಲಿ ಸುಮಾರು 2.06 ಲಕ್ಷ ಅಭ್ಯರ್ಥಿಗಳು ಇದ್ದರು. 2018ರ ಪಂಚಾಯಿತಿ ಚುನಾವಣೆಯಲ್ಲೂ ಹೀಗೆಯೇ ಹಿಂಸಾಚಾರ ನಡೆದಿತ್ತು. ಆಗ ಟಿಎಂಸಿ ಪಕ್ಷ 95%ಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್‌ಗಳನ್ನು ಗೆದ್ದುಕೊಂಡಿತ್ತು. ಅದರಲ್ಲಿ 34% ಸ್ಥಾನಗಳು ಅವಿರೋಧವಾಗಿದ್ದವು. ಆಗಲೂ ವಿಪಕ್ಷಗಳ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡದ, ಬೆದರಿಕೆ ಒಡ್ಡಿದ ಹಾಗೂ ಚುನಾವಣಾ ರಿಗ್ಗಿಂಗ್ ಮಾಡಿದ ಆರೋಪ ಟಿಎಂಸಿ ಮೇಲಿದೆ. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷ ಇನ್ನಷ್ಟು ಆಕ್ರಮಣಕಾರಿಯಾಗಿತ್ತು. ಆದರೆ ಬಿಜೆಪಿ 18 ಸಂಸದೀಯ ಕ್ಷೇತ್ರಗಳನ್ನು ಗೆದ್ದು ಟಿಎಂಸಿಗೆ ಸವಾಲು ಹಾಕಿತ್ತು. ಇದರೊಂದಿಗೆ ಬಿಜೆಪಿ- ತೃಣಮೂಲ ಕಾರ್ಯಕರ್ತರ ನಡುವೆ ಘರ್ಷಣೆಗಳು ಹೆಚ್ಚಿವೆ. 2021ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಟಿಎಂಸಿ ಮತ್ತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸಾಚಾರ ನಡೆಸಿದ ಆರೋಪಗಳನ್ನು ಎದುರಿಸಿತು. ಈ ಬಗ್ಗೆ ಹೆಚ್ಚಿನ ತನಿಖೆಗೆ ಸಿಬಿಐಗೆ ಕೋಲ್ಕತ್ತಾ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಅಂದರೆ ಇಲ್ಲಿ ಆಡಳಿತ ಪಕ್ಷದಿಂದ ಅಧಿಕಾರದ ದುರುಪಯೋಗ ನಡೆಯುತ್ತಿದೆ ಎಂಬ ಶಂಕೆ ನ್ಯಾಯಾಂಗಕ್ಕೂ ಇದೆ. ಮುಖ್ಯವಾಗಿ, ರಾಜ್ಯದಲ್ಲಿ ಬಿಜೆಪಿ ಸಾಧಿಸುತ್ತಿರುವ ಹಂತಹಂತದ ಅಭಿವೃದ್ಧಿಯು ಆಡಳಿತ ಪಕ್ಷವಾದ ಟಿಎಂಸಿ ಅಸ್ಥಿರವಾಗುವಂತೆ ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೂಗಿನಡಿಯಲ್ಲಿಯೇ ಹಿಂಸಾಚಾರ ನಡೆಯುತ್ತಿದೆ ಎಂಬ ಆರೋಪ ಇದೆ. ಇಷ್ಟೊಂದು ಹಿಂಸೆ ನಡೆಯುತ್ತಿದ್ದರೂ ಆಡಳಿತ ಪಕ್ಷ ಸುಮ್ಮನಿರುವುದು ಇದಕ್ಕೆ ಪುಷ್ಟಿ ಒದಗಿಸಿದೆ. ಪೊಲೀಸ್‌ ವ್ಯವಸ್ಥೆ ಯಾವಾಗಲೂ ಆಡಳಿತ ಪಕ್ಷದ ಕೈಗೊಂಬೆಯಾಗಿರುತ್ತದೆ; ಕಳೆದ ಸಲದ ಚುನಾವಣೆಯಲ್ಲಿ ಪೊಲೀಸರು ಆಡಳಿತ ಪಕ್ಷದ ಕೈಯಾಳುಗಳಂತೆ ವರ್ತಿಸಿದ್ದಾರೆ ಎಂದು ಆಕ್ಷೇಪ ಬಂದಿತ್ತು. ಇವೆಲ್ಲವೂ ಪ್ರಜಾಪ್ರಭುತ್ವದ ನೈಜ ಚೈತನ್ಯವನ್ನು ಕಳೆಗುಂದುವಂತೆ ಮಾಡುವ, ಗಣರಾಜ್ಯದ ಆಶಯಗಳನ್ನು ಕೆಡುವಂತೆ ಮಾಡುವ ಬೆಳವಣಿಗೆಗಳು. 2024ರ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಹಿಡಿತ ಸಾಧಿಸಲಿದೆ, ರಾಜಕೀಯ ಬದಲಾವಣೆಯ ಗಾಳಿ ಯಾವ ಕಡೆಗೆ ಬೀಸುತ್ತಿದೆ ಎಂಬುದನ್ನು ಸದ್ಯದ ಪಂಚಾಯತ್‌ ಚುನಾವಣೆ ಸೂಚಿಸಲಿದೆ. ಇದಕ್ಕಾಗಿಯೇ ಜನಮನದ ಮೇಲೆ ಹಿಡಿತ ಸಾಧಿಸಲು ಎಲ್ಲ ಪಕ್ಷಗಳು ಸೆಣಸಾಡುತ್ತಿವೆ. ಇದು ಎಲ್ಲ ರಾಜ್ಯಗಳಲ್ಲಿಯೂ ಇದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಗಂಭಿರವಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಮಿಶ್ರಫಲದ ಬಜೆಟ್‌, ಉಚಿತದ ಸಿಹಿಗಿಂತ ಕೊರತೆಯ ಕಹಿಯೇ ಅಧಿಕ

ರಾಜಕೀಯ ವೈಷಮ್ಯ ಹಾಗೂ ಹಿಂಸೆಯನ್ನು ಪಶ್ಚಿಮ ಬಂಗಾಳ, ಕೇರಳ, ಬಿಹಾರ, ಉತ್ತರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ. ದಶಕಗಳ ಹಿಂದೆ ಬಿಹಾರ, ಉತ್ತರ ಪ್ರದೇಶಗಳಲ್ಲಿ ಸಾಮಾನ್ಯ ಎನಿಸಿದ್ದ ಚುನಾವಣಾ ಹಿಂಸೆ ಇಂದು ಕಡಿಮೆಯಾಗಿದೆ. ಅದರ ಸ್ಥಾನವನ್ನು ಪ.ಬಂಗಾಳ ತೆಗೆದುಕೊಂಡಿದೆ. ಕೇರಳದಲ್ಲಿ ರಾಜಕೀಯ ಕಗ್ಗೊಲೆಗಳು ನಡೆಯುತ್ತಿವೆ. ರಾಜಕೀಯ ಸಿದ್ಧಾಂತಗಳು ಜನತೆಯ ಮುಂದೆ ಪರೀಕ್ಷೆಗೊಡ್ಡಿ ಚುನಾವಣೆಯು ಪರೀಕ್ಷೆಯಲ್ಲಿ ಜಯ ಹೊಂದಿ ಶಾಸನಭೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಗಾಂಧಿ ತತ್ವ, ಸೆಕ್ಯುಲರಿಸಂ, ರಾಷ್ಟ್ರೀಯತಾವಾದ ಹೀಗೆ ಎಲ್ಲವೂ ಕಾಲದ ಪರೀಕ್ಷೆ, ಜನತೆಯ ಪರೀಕ್ಷೆಗೆ ಒಳಗಾಗಿವೆ. ಆದರೆ ಹಿಂಸೆಯಿಂದ ಯಾವ ಅಧಿಕಾರವನ್ನೂ ಪಡೆಯಲಾಗುವುದಿಲ್ಲ. ಅದು ಜನತೆಯಲ್ಲಿ ಭಯವುಂಟುಮಾಡೀತಲ್ಲದೆ ಅಧಿಕಾರ ತಂದುಕೊಡದು. ಇದನ್ನು ಎಲ್ಲ ಪಕ್ಷಗಳು ಅರ್ಥ ಮಾಡಿಕೊಂಡರೆ ಚೆನ್ನ.

Exit mobile version