ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ (2024-25) ಎರಡನೇ ತ್ರೈಮಾಸಿಕದ ಅವಧಿಗೆ (ಜುಲೈ-ಸೆಪ್ಟೆಂಬರ್ 2024) ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ (Post Office) ಉಳಿತಾಯ ಯೋಜನೆ ಸೇರಿ ಯಾವುದೇ ಕಿರು ಉಳಿತಾಯ ಯೋಜನೆಗಳ (Small Savings Schemes) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿಲ್ಲ. ಇದರಿಂದಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ಸುಕನ್ಯಾ ಸಮೃದ್ಧಿ ಯೋಜನೆ (SSY) ಸೇರಿ ಹಲವು ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಬದಲಾವಣೆಯಾಗದ ಕಾರಣ ಸಣ್ಣ ಪ್ರಮಾಣದಲ್ಲಿ ಠೇವಣಿ ಮಾಡುವವರಿಗೆ ಯಾವುದೇ ಅನುಕೂಲ ಆಗಿಲ್ಲ.
ಬಡ್ಡಿದರದ ಪಟ್ಟಿ ಹೀಗಿದೆ
ಯೋಜನೆಗಳು | ಬಡ್ಡಿದರ |
ಉಳಿತಾಯ ಖಾತೆಯ ಠೇವಣಿ | 4% |
1 ವರ್ಷ ಪೋಸ್ಟ್ ಆಫೀಸ್ ಠೇವಣಿ | 6.9% |
2 ವರ್ಷ ಪೋಸ್ಟ್ ಆಫೀಸ್ ಠೇವಣಿ | 7% |
3 ವರ್ಷ ಪೋಸ್ಟ್ ಆಫೀಸ್ ಠೇವಣಿ | 7.1% |
5 ವರ್ಷ ಪೋಸ್ಟ್ ಆಫೀಸ್ ಠೇವಣಿ | 7.5% |
5 ವರ್ಷ ರೆಕರಿಂಗ್ ಡೆಪಾಸಿಟ್ (RD) | 6.7% |
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC) | 7.7% |
ಕಿಸಾನ್ ವಿಕಾಸ್ ಪತ್ರ | 7.5% |
ಪಿಪಿಎಫ್ | 7.1% |
ಸುಕನ್ಯಾ ಸಮೃದ್ಧಿ ಖಾತೆ | 8.2% |
ಹಿರಿಯ ನಾಗರಿಕರ ಉಳಿತಾಯ ಯೋಜನೆ | 8.2% |
“2024-25ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಬದಲಾವಣೆ ಮಾಡಿಲ್ಲ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಿಗುತ್ತಿದ್ದ ಬಡ್ಡಿದರವೇ ಮುಂದುವರಿಯಲಿದೆ” ಎಂಬುದಾಗಿ ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಕಿರು ಉಳಿತಾಯ ಯೋಜನೆಗಳ ಮೂಲಕ ಠೇವಣಿ ಇರಿಸಿದವರಿಗೆ ತುಸು ನಿರಾಸೆಯಾದಂತಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಇತ್ತು.
ಮತ್ತೊಂದೆಡೆ, ಭವಿಷ್ಯ ನಿಧಿ ಹೊಂದಿರುವ ಉದ್ಯೋಗಿಗಳು ತಮ್ಮ ಖಾತೆಗೆ ಬಡ್ಡಿ ಮೊತ್ತ ಜಮೆಯಾಗುವುದನ್ನು ಕಾಯುತ್ತಿದ್ದಾರೆ. ಅಂತಹವರಿಗೆ ಇದೀಗ ಸಿಹಿ ಸುದ್ದಿ. ಜುಲೈ ಅಂತ್ಯದ ವೇಳೆಗೆ ಬಡ್ಡಿ ಹಣ ಇಪಿಎಫ್ ಒ ಸದಸ್ಯರ ಖಾತೆಗೆ ತಲುಪಬಹುದು. ಇದಕ್ಕಾಗಿ ಶೀಘ್ರದಲ್ಲೇ ಹಣಕಾಸು ಸಚಿವಾಲಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆ ಇದೆ.
ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು ಫೆಬ್ರವರಿಯಲ್ಲಿ ಆರ್ಥಿಕ ವರ್ಷ 2024 ಕ್ಕೆ ಶೇ. 8.25ರ ಬಡ್ಡಿ ದರವನ್ನು ಅನುಮೋದಿಸಿದೆ. ಆದರೆ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಲು ಹಣಕಾಸು ಸಚಿವಾಲಯವು ಇನ್ನೂ ಕಾಯುತ್ತಿದೆ. ಸಾರ್ವತ್ರಿಕ ಚುನಾವಣೆಗಳಿಂದಾಗಿ ಇದು ವಿಳಂಬವಾಗಿದೆ. ಇದು ಜುಲೈ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: EPFO Balance Check: ಜುಲೈ ಅಂತ್ಯದಲ್ಲಿ ಪಿಎಫ್ ಖಾತೆಗೆ ಬಡ್ಡಿ ಹಣ ಬರಲಿದೆ; ಪರಿಶೀಲಿಸುವುದು ಹೇಗೆ?