ಚಿಕ್ಕಬಳ್ಳಾಪುರ: ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ(Karnataka election results 2024) ಕಾಂಗ್ರೆಸ್ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಒಂದು ಮತ ಲೀಡ್ ಪಡೆದರೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ರಾಜೀನಾಮೆಗೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದರು. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಸ್ವಪಕ್ಷದ ಶಾಸಕನ ವಿರುದ್ಧವೇ ಕಾಂಗ್ರೆಸ್ ಕಾರ್ಯಕರ್ತರು ಕೂಡ ತಿರುಗಿಬಿದ್ದಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿರುವುದು ಕಂಡುಬಂದಿದೆ.
ಹೌದು, ಈ ಹಿಂದೆ ನಡೆದಿದ್ದ ಕಾಂಗ್ರೆಸ್ ಸಭೆಯಲ್ಲಿ “ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಅವರಿಗೆ ಒಂದೇ ಒಂದು ಮತದ ಲೀಡ್ ಸಿಕ್ಕರೂ ರಾಜಕೀಯ ನಿವೃತ್ತಿ ಪಡೆಯುವೆ” ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದರು. ಇದೀಗ ಆ ಹೇಳಿಕೆಯೇ ಅವರಿಗೆ ತಲೆನೋವು ತಂದಿದೆ.
ರಾಜೀನಾಮೆ ನೀಡಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಿ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧವೇ ಸ್ವಪಕ್ಷದ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಸೋಲಲು ಶಾಸಕ ಪ್ರದೀಪ್ ಈಶ್ವರ್ ಕಾರಣ. ಅವರು ಆಡಿದ ಮಾತುಗಳೇ ರಕ್ಷಾರಾಮಯ್ಯ ಸೋಲಿಗೆ ಕಾರಣವಾಗಿದೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಯುವ ಕಾಂಗ್ರೆಸ್ ಜಂಟಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಪುತ್ರ ಜಗದೀಶ್ ಪ್ರತಿಕ್ರಿಯಿಸಿ, ಪ್ರದೀಪ್ ಈಶ್ವರ್ ಮಾತುಗಳಿಂದಲೇ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಒಂದಾದವು. ಪಕ್ಷ ಕಟ್ಟಿ ಬೆಳಸಿದೆವು, ಅದರೆ ಪ್ರದೀಪ್ ಈಶ್ವರ್ ಬಂದು ಹಾಳು ಮಾಡಿದರು. ದಯವಿಟ್ಟು ಕೊಟ್ಟ ಮಾತಿನಂತೆ ನಡೆದುಕೊಳ್ಳಿ, ಇಲ್ಲವೆಂದರೆ ಮಾತು ಕಡಿಮೆ ಮಾಡಿ ಎಂದು ಕಿಡಿಕಾರಿದ್ದಾರೆ.
ನಕಲಿ ರಾಜೀನಾಮೆ ಪತ್ರ ವೈರಲ್
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೆಸರಿನಲ್ಲಿ ನಕಲಿ ಪತ್ರ ವೈರಲ್ ಆಗುತ್ತಿದೆ. ರಾಜಕೀಯ ವಿರೋಧಿಗಳಿಂದ ನಕಲಿ ರಾಜೀನಾಮೆ ಪತ್ರ ವೈರಲ್ ಆಗಿದ್ದು, ಇದು ಅಧಿಕೃತ ಪತ್ರವಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ | Chikballapur Election Result 2024 : ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್ಗೆ ಭರ್ಜರಿ ಗೆಲುವು
ಸುಧಾಕರ್ ಭರ್ಜರಿ ಗೆಲುವು; ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಬಿಜೆಪಿ ಕಾರ್ಯಕರ್ತರ ಒತ್ತಾಯ
ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಡಾ.ಕೆ.ಸುಧಾಕರ್ ಭರ್ಜರಿ ಗೆಲುವು ದಾಖಲಿಸಿದ್ದರಿಂದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರ ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ. ಈ ಹಿಂದೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಒಂದು ಮತದ ಲೀಡ್‌ನಿಂದ (Karnataka election results 2024) ಗೆದ್ದರೂ ರಾಜೀನಾಮೆ ನೀಡುವುದಾಗಿ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದರು. ಹೀಗಾಗಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ (Chikballapur Election Result 2024) ಬಿಜೆಪಿಯ ಡಾ.ಕೆ. ಸುಧಾಕರ್ (Dr K Sudhakar) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ 1,62,099 ಮತಗಳ ಅಂತರದಿಂದ ಜಯಭೇರಿ ಮೊಳಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಚಿವ ಸುಧಾಕರ್ ಅವರು ಈ ಬಾರಿ ಲೋಕಸಭಾ ಟಿಕೆಟ್ ಪಡೆದು ಗೆದ್ದು ಬೀಗಿದ್ದಾರೆ. ಹೀಗಾಗಿ ಶಾಸಕ ಪ್ರದೀಪ್ ಈಶ್ವರ್ ಈ ಹಿಂದೆ ಹೇಳಿದ್ದ ಮಾತುಗಳನ್ನು ಉಲ್ಲೇಖಿಸಿ ಬಿಜೆಪಿ ಕಾರ್ಯಕರ್ತರು ಟ್ರೋಲ್ ಮಾಡುತ್ತಿದ್ದಾರೆ.
“ನನ್ನ ಮಾತಿಗೆ ನಾನು ಬದ್ಧ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿ ಹೆಚ್ಚು ಮತಗಳನ್ನು ಪಡೆದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು, ಶಾಸಕ ಸ್ಥಾನಕ್ಕೆ ಜೂನ್ 5ರಂದು ಬೆಳಗ್ಗೆ 5ಗಂಟೆಗೆ ರಾಜೀನಾಮೆ ನೀಡಲಿದ್ದೇನೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆಗೆ ನಾನೇ ನೇರ ಹೊಣೆ ಎಂದು” ಶಾಸಕ ಪ್ರದೀಪ್ ಈಶ್ವರ್ ಅವರು ಹೇಳಿದಂತಿರುವ ಪೋಸ್ಟರ್ ವೈರಲ್ ಮಾಡಲಾಗಿದೆ. ಆದರೆ, ಇದು ಶಾಸಕ ಪ್ರದೀಪ್ ಈಶ್ವರ್ ಅವರ ಅಧಿಕೃತ ಪೋಸ್ಟರ್ ಅಲ್ಲ. ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ | Kolar Election Result 2024 : ಕೋಲಾರದಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಗೆಲುವು
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಅವರು ಕಾಂಗ್ರೆಸ್ನ ಎಂ.ವೀರಪ್ಪ ಮೊಯ್ಲಿ ಅವರನ್ನು 1,82,110 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.53.74ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿ ಹಾಲಿ ಸಂಸದ ಬಚ್ಚೇಗೌಡರ ಬದಲಿಗೆ ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿದ್ದ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಬಿಜೆಪಿ ಲೋಕಸಭಾ ಚುನಾವಣಾ ಟಿಕೆಟ್ ನೀಡಿತ್ತು. ಇದೀಗ ಸುಧಾಕರ್ ಅವರು ಭಾರಿ ಅಂತರರಿಂದ ಗೆಲುವು ದಾಖಲಿಸಿದ್ದು, ಕಾರ್ಯಕರ್ತರರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.