ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಬಳಿಕ ಮತ್ತೆ ʼನಮಸ್ತೆ ಚಿಕ್ಕಬಳ್ಳಾಪುರʼ ಕಾರ್ಯಕ್ರಮದ ಮೂಲಕ ಮನೆಮನೆಗೆ ತೆರಳಿ ಜನರ ಅಹವಾಲು ಸ್ವೀಕರಿಸಲು ಶಾಸಕ ಪ್ರದೀಪ್ ಈಶ್ವರ್ ಮುಂದಾಗಿದ್ದಾರೆ. ಈ ವೇಳೆ ಕ್ಷೇತ್ರದ ನೂತನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಶುಭ ಹಾರೈಸಿರುವ ಅವರು, ಸುಧಾಕರ್ ದೆಹಲಿಯಲ್ಲಿ ಆರಾಮಾಗಿ ಇರ್ತಾರೆ. ನಾವು ನಮ್ಮ ಹೆಂಡತಿ, ಮಕ್ಕಳ ಜೊತೆ ಆರಾಮಾಗಿರ್ತೀವಿ, ನೀವ್ಯಾಕೆ ನಮಗೋಸ್ಕರ ಹೊಡೆದಾಡ್ತೀರಾ, ಯಾಕೆ ಸುಮ್ಮನೆ ಬಟ್ಟೆ ಹರ್ಕೋತೀರಾ ಎಂದು ಕಾರ್ಯಕರ್ತರಿಗೆ ಹೇಳಿದರು.
ಕ್ಷೇತ್ರದಲ್ಲಿ ಡಾ.ಕೆ. ಸುಧಾಕರ್‌ಗೆ ಒಂದು ವೋಟ್ ಲೀಡ್ ಬಂದರೂ ರಾಜೀನಾಮೆ ಕೊಡೋದಾಗಿ ಹೇಳಿದ್ದರಿಂದ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯಗಳು ಕೇಳಿಬಂದಿದ್ದವು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಶುಕ್ರವಾರ ʼನಮಸ್ತೆ ಚಿಕ್ಕಬಳ್ಳಾಪುರʼ ಕಾರ್ಯಕ್ರಮ ನಡೆಸಲಾಯಿತು. ನಗರದ 17ನೇ ವಾರ್ಡ್‌ನಲ್ಲಿ ಮನೆಮನೆಗೆ ತೆರಳಿ ಶಾಸಕ ಪ್ರದೀಪ್ ಈಶ್ವರ್, ಜನರ ಅಹವಾಲು ಆಲಿಸಿದರು.
ಈ ವೇಳೆ ನೂತನ ಸಂಸದ ಡಾ.ಕೆ.ಸುಧಾಕರ್‌ಗೆ ಶುಭ ಹಾರೈಸಿದ ಪ್ರದೀಪ್ ಈಶ್ವರ್, ಒಳ್ಳೆ ಕೆಲಸ ಮಾಡಿಕೊಂಡು ಹೋಗಲಿ. ಜನಾಭಿಪ್ರಾಯ ಸುಧಾಕರ್ ಪರವಾಗಿ ಬಂದಿದೆ. ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಗಲಾಟೆಗಳಾಗುತ್ತಿವೆ. ನನ್ನ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ತಕ್ಷಣ ನಾನು ರಿಯಾಕ್ಟ್ ಮಾಡಿದ್ರೆ ನಮ್ಮ ಕಾರ್ಯಕರ್ತರು, ಅವರ ಕಾರ್ಯಕರ್ತರು ಹೊಡೆದಾಡಿಕೊಳುತ್ತಾರೆ. ನಾನು ಬೈಯ್ಯಬೇಕಾ, ನಾನೇ ಅಖಾಡಕ್ಕೆ ಇಳಿಯುತ್ತೇನೆ. ನನ್ನ ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ಬಲಿ ಕೊಡಲ್ಲ. ನನ್ಮ ಅಸ್ತಿತ್ವದ ಪ್ರಶ್ನೆ ನಾನೇ ಕಾಪಾಡಿಕೊಳ್ತೀನಿ ಎಂದರು.
ಇದನ್ನೂ ಓದಿ | DK Shivakumar: ಎತ್ತಿನಹೊಳೆ ಕಾಮಗಾರಿಗೆ 500 ಎಕರೆ ನೀಡಲು ಅರಣ್ಯ ಇಲಾಖೆ ಒಪ್ಪಿಗೆ
ನಾಲ್ಕೈದು ಕಡೆ ದಾಳಿಯಾದರೂ ನಾನು ತಾಳ್ಮೆಯಿಂದ ಇದ್ದೇನೆ. ಕೆ.ಸುಧಾಕರ್ ದೆಹಲಿಯಲ್ಲಿ ಆರಾಮಾಗಿ ಇರುತ್ತಾರೆ. ನಾನು ಬೆಂಗಳೂರಿನಲ್ಲಿ ಆರಾಮಾಗಿ ಇರುತ್ತೇನೆ. ನಾವು ನಮ್ಮ ಹೆಂಡತಿ, ಮಕ್ಕಳ ಜೊತೆ ಆರಾಮಾಗಿರ್ತೀವಿ. ನೀವ್ಯಾಕೆ ನಮಗೋಸ್ಕರ ಹೊಡೆದಾಡ್ತೀರಾ? ಯಾಕೆ ಸುಮ್ಮನೆ ಬಟ್ಟೆ ಹರ್ಕೋತೀರಾ? ನಮಗೆಲ್ಲಾ ನಮ್ಮ ಹೆಂಡತಿ ಮಕ್ಕಳೇ ಮುಖ್ಯ ಎಂದು ಹೇಳುವ ಮೂಲಕ ನಾವೆಲ್ಲಾ ಒಂದೇ ಎನ್ನುವ ಅರ್ಥದಲ್ಲಿ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ.
ಮನೆಗೆ ಕಲ್ಲು ಹೊಡೆದ ನಾಲ್ಕು ಜನರನ್ನು ಠಾಣೆಗೆ ಕರೆಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೇಕ್ ರಾಜೀನಾಮೆ ಪತ್ರ ಹರಿಬಿಟ್ಟಿದ್ದಾರೆ. ಮೈಸೂರಿನ ಅವಿನಾಶ್ ಜೊತೆ ಇನ್ನಿಬ್ಬರು ಹುಡುಗರು ಈ ರೀತಿ ಮಾಡಿದ್ದಾರೆ. ಫೇಕ್ ರಾಜೀನಾಮೆ ಲೆಟರ್ ಹರಿಬಿಟ್ಟಿರುವ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಅಖಾಡದಲ್ಲಿ ನಾನು ಇದ್ದಿದ್ರೆ ಅದರ ಕಥೆ ಬೇರೆ ಆಗ್ತಿತ್ತು
ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಪರೋಕ್ಷವಾಗಿ ರಕ್ಷಾರಾಮಯ್ಯಗೆ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ಅಖಾಡದಲ್ಲಿ ನಾನು ಇದ್ದಿದ್ದರೆ ಅದರ ಕಥೆ ಬೇರೆ ಆಗ್ತಿತ್ತು. ಎಲ್ಲರೂ ಪ್ರದೀಪ್ ಈಶ್ವರ್ ಆಗಕ್ಕೆ ಸಾಧ್ಯವಿಲ್ಲ. ಇನ್ನು ಮುಂದೆ ನಾನೆ ಮನೆಮನೆಗೆ ಸುತ್ತುತ್ತೇನೆ. ಕಾರ್ಯಕರ್ತರನ್ನು ಬಲಪಡಿಸುತ್ತೇನೆ. ಕಾಂಗ್ರೆಸ್ ಪಕ್ಷ ದೊಡ್ಡದು, ಪ್ರದೀಪ್ ಈಶ್ವರ್ ಅಲ್ಲ. ನನ್ನಂಥಹ ಅಹಿಂದ ಹುಡುಗರ ರಕ್ಷಣೆ ಸಿಗಬೇಕಾದರೆ ಕಾಂಗ್ರೆಸ್ ಉಳಿಯಬೇಕು. ಚಿಕ್ಕಬಳ್ಳಾಪುರಲ್ಲಿ ಈ ಸೋಲು ಸೋಲಲ್ಲ, ಗೆಲುವು ಇನ್ನು ಐದು ವರ್ಷ ಮುಂದಕ್ಕೆ ಹೋಗಿದೆ ಅಷ್ಟೇ ಎಂದು ಹೇಳಿದರು.
ಇದನ್ನೂ ಓದಿ | Rahul Gandhi: ನನ್ನ ಮೇಲೆ ಮೋದಿಗಿರುವಷ್ಟು ದೇವರ ಕೃಪೆ ಇಲ್ಲ ಎಂದ ರಾಹುಲ್ ಗಾಂಧಿ; ಏಕಿಂಥ ಮಾತು?
ಯಾರೇ ಆಗಿದ್ರೂ ಶಿಕ್ಷೆ ಆಗಲೇ ಆಗುತ್ತೆ
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಕೇಸ್‌ನಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ. ರೇಣುಕಾಸ್ವಾಮಿ ಹತ್ಯೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತಪ್ಪಿತಸ್ತರು ಯಾರೆ ಇದ್ದರೂ ಕಾನೂನು ಕ್ರಮ ಜರುಗಿಸಬೇಕು. ಬೆಂಗಳೂರಿನ ಪೊಲೀಸರು ಬಲಿಷ್ಠವಾಗಿದ್ದಾರೆ. ಕಾನೂನಿಗಿಂತ ದೊಡ್ಡವರು ಈ ಭೂಮಿ ಮೇಲೆ ಯಾರೂ ಇಲ್ಲ. ಯಾರೇ ಆಗಿದ್ರೂ ತಪ್ಪಿಗೆ ಶಿಕ್ಷೆ ಆಗಲೇ ಆಗುತ್ತೆ ಎಂದು ಪ್ರದೀಪ್ ಈಶ್ವರ್ ಅಭಿಪ್ರಾಯಪಟ್ಟರು.