Site icon Vistara News

Prajwal Revanna Case : ಪೆನ್​ಡ್ರೈವ್ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವುದರಿಂದ ಹಿಡಿದು ಪ್ರಜ್ವಲ್ ಬಂಧನದವರೆಗೆ; ಪ್ರಕರಣದ ಟೈಮ್​ಲೈನ್​ ಇಲ್ಲಿದೆ

Prajwal revanna Case

ಬೆಂಗಳೂರು : ಸೆಕ್ಸ್ ವಿಡಿಯೋ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು 31ರಂದು ರಾತ್ರಿ ಎಸ್​ಐಟಿ ಪೊಲೀಸರು (Prajwal Revanna Case) ಬಂಧಿಸಿದ್ದಾರೆ. ಅವರನ್ನು ಕಸ್ಟಡಿಗೆ ತೆಗೆದುಕೊಂಡು ಪೊಲೀಸರು ನಾಳೆ ಬಂಧನ ಪ್ರಕ್ರಿಯೆಗಳನ್ನು ಮುಗಿಸಲಿದ್ದಾರೆ. ಇದರೊಂದಿಗೆ ಇಡೀ ಭಾರತವನ್ನೇ ತಲ್ಲಣಗೊಳಿಸಿದ್ದ ಸೆಕ್ಸ್​ ಸ್ಕ್ಯಾಂಡಲ್​ ಒಂದರ ಪ್ರಮುಖ ಆರೋಪಿ ಪೊಲೀಸ್​ ಬಲೆಗೆ ಬಿದ್ದಂತಾಗಿದೆ. 33 ದಿನಗಳ ಕಾಲ ನಡೆದ ಹಲವಾರು ಬೆಳವಣಿಗೆಗಳ ಬಳಿಕ ಅವರು ಕಾನೂನಿನ ಕುಣಿಕೆಯೊಳಗೆ ಸಿಲುಕಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ 2014 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಅವರು ಚುನಾವಣೆಯಲ್ಲಿ ಗೆದ್ದಿದ್ದರು. ಸ್ಥಳೀಯ ಬಿಜೆಪಿ ನಾಯಕರ ಪ್ರತಿರೋಧದ ನಡುವೆ ಅವರು 2024 ರ ಲೋಕಸಭಾ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿದ್ದರು. ಈ ವೇಳೆ ಪ್ರಜ್ವಲ್​ಗೆ ಸೇರಿದ್ದ ಎನ್ನಲಾದ 2,976 ಸೆಕ್ಸ್ ವಿಡಿಯೋಗಳನ್ನು ಒಳಗೊಂಡಿರುವ ಪೆನ್ ಡ್ರೈವ್ ವಿಚಾರ ಬೆಳಕಿಗೆ ಬಂದಿತ್ತು. ಆದರೆ, ಏಪ್ರಿಲ್​ 26ರಂದು ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುಣಾವಣೆ ಬಳಿಕ ಈ ಪ್ರಕರಣ ಕಾವು ಪಡೆಯಿತು. ಸಿಎಂ ಸಿದ್ದರಾಮಯ್ಯ ತನಿಖೆಗೆ ಆದೇಶ ಮಾಡುವಲ್ಲಿಂದ ಆರಂಭವಾದ ಈ ಪ್ರಕರಣ ಪ್ರಜ್ವಲ್​ ಬಂಧನದೊಂದಿಗೆ ಸ್ಪಷ್ಟ ಸ್ವರೂಫ ಪಡೆಯಿತು. ಹೀಗೆ ಪೆನ್​ಡ್ರೈವ್​ ಹಗರಣ ಬಯಲಿಗೆ ಬಂದಿದ್ದರಿಂದ ಹಿಡಿದು ಬಂಧನದವರೆಗಿನ ಕೆಲವು ಘಟನೆಗಳನ್ನು ಈ ಕೆಳಗೆ ನೀಡಲಾಗಿದೆ.

ಇಲ್ಲಿದೆ ನೋಡಿ ಪ್ರಕರಣದ ಸಂಕ್ಷಿಪ್ತ ರೂಪ

ಏಪ್ರಿಲ್ 19: ಹಾಸನ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ವೀಡಿಯೊಗಳನ್ನು ಹೊಂದಿರುವ ಪೆನ್ ಡ್ರೈವ್ ಗಳನ್ನು ಸಾವಿರಾರು ಸಂಖ್ಯೆಯಲ್ಲಿ ಪತ್ತೆಯಾದವು. ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಅದು ದೇವೇಗೌಡರ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿದರೆ. ಬಿಜೆಪಿಗೆ ಮುಜುಗರವನ್ನುಂಟು ಮಾಡಿತು.

ಏಪ್ರಿಲ್ 24: ಮಹಿಳಾ ಸಂಘಟನೆಗಳ ವೇದಿಕೆಯಾದ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯು’ ವೀಡಿಯೊಗಳ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆಯಿತು.

ಏಪ್ರಿಲ್ 25: ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆ ಒತ್ತಾಯಿಸಿ ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಜಿಪಿ ಅಲೋಕ್ ಮೋಹನ್ ಅವರಿಗೆ ಪತ್ರ ಬರೆಯಿತು.

ಏಪ್ರಿಲ್ 26: ತಮ್ಮ ವಿರುದ್ಧದ ಆರೋಪಗಳನ್ನು ಪ್ರಜ್ವಲ್ ರೇವಣ್ಣ ನಿರಾಕರಿಸಿದರು. ಯಾವುದೇ ಅಳುಕಿಲ್ಲದೆ ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದರು. ಅದೇ ದಿನ ರಾತ್ರಿ, ಅವರು ಸದ್ದಿಲ್ಲದೆ ದೇಶವನ್ನು ತೊರೆದರು.

ಏಪ್ರಿಲ್ 27: ಲೈಂಗಿಕ ಕಿರುಕುಳ ಹಗರಣದಲ್ಲಿ ಪ್ರಜ್ವಲ್​ ರೇವಣ್ಣ ಭಾಗಿಯಾಗಿರುವುದನ್ನು ದೃಢಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಐಟಿ ರಚನೆ ಮಾಡುವುದಾಗಿ ಘೋಷಿಸಿದರು.

ಏಪ್ರಿಲ್ 28: ಸರ್ಕಾರದ ಆದೇಶದಂತೆ ರಚನೆಯಾದ ಎಸ್​ಐಡಿ ಪೊಲೀಸರು ಪ್ರಜ್ವಲ್ ವಿರುದ್ಧ ಎಫ್ಐಆರ್ ದಾಖಲಿಸಿದರು.

ಏಪ್ರಿಲ್ 30: ಆರೋಪಿಗಳನ್ನು ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದರು. ಇದೇ ದಿನ ಒತ್ತಡಕ್ಕೆ ಮಣಿದ ಜೆಡಿಎಸ್ ಪಕ್ಷದ ವರಿಷ್ಠರು, ಪ್ರಜ್ವಲ್ ಅವರನ್ನು ಪಕ್ಷದಿಂದ ಅಮಾನತು ಮಾಡಿದರು.

ಮೇ 1: ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಾಣಿಸಿಕೊಂಡ ಪ್ರಜ್ವಲ್ ರೇವಣ್ಣ ‘ಸತ್ಯವೇ ಮೇಲುಗೈ ಸಾಧಿಸುತ್ತದೆ’ ಎಂದು ಹೇಳಿಕೆ ನೀಡಿದರು ತನಿಖಾ ಸಂಸ್ಥೆಗಳ ಮುಂದೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿದರು.

ಮೇ 2: ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿ ಬಚ್ಚಿಟ್ಟುಕೊಂಡಿದ್ದು ಕುಳಿತಿದ್ದಾರೆ. ಸಂಸದರಾಗಿರುವ ಅವರ ರಾಜತಾಂತ್ರಿಕ ಪಾಸ್​ಪೋರ್ಟ್​ ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು.

ಮೇ 3: ಪ್ರಜ್ವಲ್ ರೇವಣ್ಣ ವಿರುದ್ಧ ಜೆಡಿಎಸ್ ಮಹಿಳಾ ಕಾರ್ಯಕರ್ತೆಯೊಬ್ಬರು ಎರಡನೇ ಎಫ್ಐಆರ್ ದಾಖಲಿಸಿದರು. ತನ್ನ ಕಚೇರಿಯಲ್ಲಿ ಪ್ರಜ್ವಲ್ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದರು. ಬ್ಲ್ಯಾಕ್​ಮೇಲ್ ಮಾಡಲು ಕೃತ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ದೂರಿದರು.

ಮೇ 4: ಲೈಂಗಿಕ ಹಗರಣದ ಸಂತ್ರಸ್ತೆಯೊಬ್ಬರನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಪ್ರಜ್ವಲ್ ತಂದೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಎಸ್ಐಟಿ ಬಂಧಿಸಿತು. ಅಪಹರಣಕ್ಕೊಳಗಾದ ಮಹಿಳೆಯನ್ನು ಎಸ್ಐಟಿ ಪತ್ತೆ ಹಚ್ಚಿ ರಕ್ಷಿಸಿತು.

ಮೇ 5: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ನಿಯೋಗದೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದರು.

ಮೇ 6: ಪ್ರಜ್ವಲ್ ಅವರಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾದ ಸಂತ್ರಸ್ತರಿಗಾಗಿ ಸಹಾಯವಾಣಿ ಆರಂಭಿಸಿದ ಎಸ್ಐಟಿ.

ಮೇ 13: ಪ್ರಜ್ವಲ್ ತಂದೆ ಎಚ್.ಡಿ.ರೇವಣ್ಣ ಜಾಮೀನಿನ ಮೇಲೆ ಬಿಡುಗಡೆ ಆದರು. ಅದೇ ದಿನ ಮಾಜಿ ಮುಖ್ಯಮಂತ್ರಿ ಮತ್ತು ಪ್ರಜ್ವಲ್​ ಚಿಕ್ಕಪ್ಪ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಜ್ವಲ್ ತಕ್ಷಣವೇ ಭಾರತಕ್ಕೆ ಹಿಂತಿರುಗಿ ಎಸ್ಐಟಿ ಮುಂದೆ ಹಾಜರಾಗಬೇಕು ಎಂದು ಮನವಿ ಮಾಡಿದ್ದರು.

ಮೇ 15: ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸುವಂತೆ ಒತ್ತಾಯಿಸಿ 107 ಬುದ್ಧಿಜೀವಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದರು.

ಮೇ 23: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಜ್ವಲ್ ಗೆ ಬಹಿರಂಗ ಹೇಳಿಕೆ ನೀಡಿ ಭಾರತಕ್ಕೆ ಮರಳುವಂತೆ ಕಠಿಣ ಎಚ್ಚರಿಕೆ ನೀಡಿದರು. ಅದೇ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡನೇ ಪತ್ರ ಬರೆದು ಪ್ರಜ್ವಲ್ ಅವರ ಪಾಸ್​ಪೋರ್ಟ್​​ ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.

ಮೇ 27: ಮೇ 31 ರಂದು ಬೆಳಿಗ್ಗೆ 10 ಗಂಟೆಗೆ ಅಧಿಕಾರಿಗಳ ಮುಂದೆ ಹಾಜರಾಗಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ಘೋಷಿಸುವ ಮತ್ತೊಂದು ವೀಡಿಯೊವನ್ನು ಪ್ರಜ್ವಲ್ ಬಿಡುಗಡೆ ಮಾಡಿದರು.

ಇದನ್ನೂ ಓದಿ: 31ರಂದೇ ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರಲು ಕಾರಣವೇನು? ಇಲ್ಲಿದೆ ಇಂಟರೆಸ್ಟಿಂಗ್‌ ಸ್ಟೋರಿ

ಮೇ 28: ಜರ್ಮನಿಯ ಮ್ಯೂನಿಚ್​ನಿಂದ ಭಾರತಕ್ಕೆ ಬರುವ ವಿಮಾನಕ್ಕೆ ಟಿಕೆಟ್​ ಬುಕ್ ಮಾಡಿದ ಪ್ರಜ್ವಲ್​ ರೇವಣ್ಣ

ಮೇ 30: ಮಧ್ಯಾಹ್ನ 3 ಗಂಟೆಗೆ ಜರ್ಮನಿಯ ಮ್ಯೂನಿಚ್​ನಿಂದ ವಿಮಾನ ಏರಿದ ಪ್ರಜ್ವಲ್ ರೇವಣ್ಣ.

ಮೇ 31: ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್​ನನ್ನು ಬಂಧಿಸಿದ ಪೊಲೀಸರು.

ಪ್ರಜ್ವಲ್ ವಿರುದ್ಧ ದಾಖಲಾಗಿರುವ ಐಪಿಸಿಯ ಸೆಕ್ಷನ್​ಗಳು

ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್ 376 (2) ಎನ್ (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು), 506 (ಕ್ರಿಮಿನಲ್ ಬೆದರಿಕೆ), 354 (ಎ) (1) (ಅಹಿತಕರ ರೀತಿಯಲ್ಲಿ ವರ್ತಿಸುವುದು, ಅಶ್ಲೀಲ ಲೈಂಗಿಕ ನಡವಳಿಕೆ, ಲೈಂಗಿಕ ಅನುಕೂಲಗಳಿಗೆ ಒತ್ತಾಯಿಸುವುದು), 354 (ಬಿ) (ಮಹಿಳೆಯ ಮೇಲೆ ಕ್ರಿಮಿನಲ್ ಬಲ ಪ್ರಯೋಗ) ಮತ್ತು 354 (ಸಿ) (ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಹಿಳೆಯ ಚಿತ್ರವನ್ನು ಸೆರೆಹಿಡಿಯುವುದು) ಅಡಿಯಲ್ಲಿ ಕೇಸ್​ ದಾಖಲಾಗಿದೆ.

Exit mobile version