Site icon Vistara News

Prajwal Revanna Case: ನಾನು ಸೇರಿ ಸುಮಾರು 30 ಜನರ ಫೋನ್ ಟ್ಯಾಪ್: ಸರ್ಕಾರದ ವಿರುದ್ಧ ಎಚ್‌ಡಿಕೆ ಬಾಂಬ್‌!

HD Kumaraswamy

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣದ (Prajwal Revanna Case) ಬಳಿಕ ನಾನು ಸೇರಿದಂತೆ ನಮ್ಮ ಸುತ್ತಲೂ ಇರುವ ಸುಮಾರು 30 ಜನರ ಫೋನ್ ಟ್ಯಾಪ್‌ (Phone Tapping) ಆಗುತ್ತಿದೆ. ರೇವಣ್ಣ ಫೋನ್ ಕೂಡ ಟ್ಯಾಪ್‌ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಗಂಭೀರ ಆರೋಪ ಮಾಡಿದ್ದಾರೆ.

ಹಾಸನ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರಜ್ವಲ್‌ ಎಲ್ಲಿದ್ದರೂ ಕರೆಸುವುದಕ್ಕೆ ರೇವಣ್ಣಗೆ ಹೇಳಿದ್ದೇನೆ. ಆದರೆ. ನಾವು ಏನು ಮಾತನಾಡುತ್ತೇವೆ ಎಂದು ತಿಳಿಯಲು ಫೋನ್‌ ಕದ್ದಾಲಿಗೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ಕಿಡಿಕಾರಿದ್ದಾರೆ.

ದೇವೇಗೌಡರು ರಾಜೀನಾಮೆ ಕೊಡಲು ಮುಂದಾಗಿದ್ದರು

ಹಾಸನ ಪೆನ್ ಡ್ರೈವ್ ಪ್ರಕರಣದಿಂದ ನೊಂದು ದೇವೇಗೌಡರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದರು. ಯಾವ ಮುಖ ಇಟ್ಟುಕೊಂಡು ನಾನು ರಾಜ್ಯಸಭೆಗೆ ಹೋಗಲಿ ಅಂತ ಹೇಳಿ, ರಾಜೀನಾಮೆ ಕೊಡಲು ಮುಂದಾಗಿದ್ದರು. ಎಷ್ಟು ದಿನ ಅಂತ ಹೊರಗೆ ಇರಬೇಕು. ಬಂದು ತನಿಖೆ ಎದುರಿಸಬೇಕು ಎಂದು ಅವರು ಹೇಳಿರುವುದಾಗಿ ಎಚ್‌ಡಿಕೆ ಹೇಳಿದ್ದಾರೆ.

ಇನ್ನು ಪ್ರಜ್ವಲ್‌ ಎಲ್ಲಿದ್ದರೂ ಕರೆಸಲು ಮಾಧ್ಯಮದ ಮೂಲಕ ಮನವಿ ಮಾಡು ಅಂತ ರೇವಣ್ಣಗೆ ಹೇಳಿದ್ದೇನೆ. ದೇವೇಗೌಡರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದಾಗ, ಯಾರೋ ಮಾಡಿದ ತಪ್ಪಿಗೆ ನೀವು ರಾಜೀನಾಮೆ ಕೊಟ್ಟರೆ ರಾಜ್ಯಕ್ಕೆ ನಷ್ಟ ಅಂತ ಹೇಳಿದ್ದೇನೆ. ಈ ಪ್ರಕರಣದಿಂದ ದೇವೇಗೌಡ್ರು ನೊಂದಿದ್ದಾರೆ. ಯಾವ ಮುಖ ಹೊತ್ತು ರಾಜ್ಯಸಭೆಯಲ್ಲಿ ಕೂರಲಿ ಅಂತ ಹೇಳಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | CM Siddaramaiah: ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕಾರ ಕಾಂಗ್ರೆಸ್‌ಗೆ ಎಷ್ಟು ಸೀಟ್‌? ಸಂಪುಟ ಪುನಾರಚನೆ ಇಲ್ಲ!

ಅವರೇನು ಭಯೋತ್ಪಾದಕರಾ? ಎಂದ ಡಿಕೆಶಿ

ರೇವಣ್ಣ-ಕುಮಾರಸ್ವಾಮಿ ಫೋನ್ ಕದ್ದಾಲಿಕೆಯನ್ನು ಸರ್ಕಾರ ಮಾಡುತ್ತಿದೆ ಎಂಬ ಹೆಚ್ಡಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಫೋನ್ ಕದ್ದಾಲಿಕೆ ಸರ್ಕಾರ ಮಾಡಿಲ್ಲ. ಅಂತಹ ಮುಟ್ಟಾಳ್ ಕೆಲಸ ನಮ್ಮ ಸರ್ಕಾರ ಮಾಡಲ್ಲ. ಅವರೇನು ಭಯೋತ್ಪಾದಕರಾ? ಅವರು ನಮ್ಮ ನಾಯಕರು ಎಂದು ವ್ಯಂಗ್ಯವಾಡಿದ್ದಾರೆ.

ಪ್ರಜ್ವಲ್‌ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸುವುದೇ ಸೂಕ್ತ: ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸಬೇಕು ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ಸಂತ್ರಸ್ತೆ ಹೆಣ್ಣು ಮಕ್ಕಳ ಮುಖವನ್ನು ಬ್ಲರ್ ಮಾಡಿಯೂ ತೋರಿಸಿಲ್ಲ. ರಾಜಕಾರಣಕ್ಕಾಗಿ ಈ ರೀತಿ ಮಾಡುವುದು ಎಷ್ಟು ಸರಿ? ಇಡೀ ರಾಜ್ಯದ ಜನಕ್ಕೆ ಈ ರೀತಿಯ ತೋರಿಸಿದ್ದು ಯಾರು? ಅವರ ಬಗ್ಗೆ ಯಾಕೆ ತನಿಖೆ ಆಗುತ್ತಿಲ್ಲ? ಇದರಲ್ಲಿ ಯಾರ ಪಾತ್ರ ಇದೆಯೋ , ರಾಜ್ಯ ಸರ್ಕಾರದ ಜವಾಬ್ದಾರಿ ಇದೆ. ಇದು ಇವತ್ತು ರಾಷ್ಟ್ರದ ಮಟ್ಟದಲ್ಲಿ ಸುದ್ದಿ ಆಗಿದೆ. ಇದಕ್ಕೆ ಉತ್ತರ ಸಿಗಬೇಕು. ತನಿಖೆ ಪಾರದರ್ಶಕವಾಗಿ ಆಗಬೇಕು ಅಲ್ವಾ‌? ಎಂದು ನಿಖಿಲ್‌ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಎಸ್ಐಟಿ ತನಿಖೆ ಎದುರಿಸುವುದು ಸೂಕ್ತ. ಘಟ‌ನೆ ಆದ ದಿನವೇ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಬೇಕು ಅಂತ. ಎಸ್‌ಐಟಿ ತನಿಖೆ ಮಾಡುತ್ತಲಿದೆ. ಹೀಗಾಗಿ ಸಂಸದರು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಪ್ರಜ್ವಲ್‌ ನನ್ನ ಜತೆಯಂತೂ ಸಂಪರ್ಕದಲ್ಲಿಲ್ಲ ಎಂದು ನಿಖಿಲ್‌ ಹೇಳಿದರು.

ದೇವೇಗೌಡ ಆತ್ಮಹತ್ಯೆ ಹೇಳಿಕೆ; ಶಿವರಾಮೇಗೌಡ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕೆಂಡ

ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್‌.ಆರ್. ಶಿವರಾಮೇಗೌಡ (LR Shivarame Gowda) ಅವರ ಮಧ್ಯೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೊ ಈಗ ಎಲ್ಲಡೆ ವೈರಲ್‌ ಆಗಿದೆ. ಅಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (HD Dewegowda) ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಇದನ್ನು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಖಂಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ನಿನ್ನೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಆಡಿಯೊವನ್ನು ನಾನು ಕೇಳಿದೆ. ದೇವೇಗೌಡರ ಬಗ್ಗೆ ಈ ರೀತಿ ಲಘುವಾಗಿ ಮಾತನಾಡಬಾರದು. ರಾಜಕಾರಣ ಬೇರೆಯೊಬ್ಬರ ಸಾವು ಬಯಸುವುದು ಅವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾವಿನ ಹೆಸರಲ್ಲಿ ರಾಜಕೀಯ ಮಾಡೋದು ಸರಿಯಲ್ಲ

ಇಡೀ ರಾಜ್ಯದ ಜನ ಶಿವರಾಮೇಗೌಡರ ಆಡಿಯೊವನ್ನು ಕೇಳಿದ್ದಾರೆ. ದೇಶದ ಮಾಜಿ ಪ್ರಧಾನಿಗಳು, ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ ಕನ್ನಡದ ಹೆಮ್ಮೆಯ ಮಾಜಿ ಪ್ರಧಾನಿಗಳ ವಿರುದ್ಧ ಇಂಥ ಹೇಳಿಕೆಯನ್ನು ಕೊಡಬಾರದಿತ್ತು. ಅವರ ಸಂಸ್ಕೃತಿ, ಮನಸ್ಥಿತಿ ಹೇಗಿದೆ ಅ‌ನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯವನ್ನು ಮಾಡಿ ಯಾರು ಬೇಡ ಎಂದು ಹೇಳುತ್ತಾರೆ? ಆದರೆ, ಇನ್ನೊಬ್ಬರ ಸಾವಿನ ಹೆಸರಲ್ಲಿ ರಾಜಕೀಯ ಮಾಡೋದು ಸರಿಯಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ನಮ್ಮ ಬಳಿ ಅಡ್ಜೆಸ್ಟ್‌ಮೆಂಟ್‌ ಸಂಸ್ಕೃತಿ ಇಲ್ಲ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಹೀಗೆ ಮಾಡಿದ್ದಾರೆ ಎಂದು ಶಿವರಾಮೇಗೌಡ ಅವರು ಹೇಳಿರುವ ಮಾತುಗಳು ಆಡಿಯೊದಲ್ಲಿ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್‌ ಕುಮಾರಸ್ವಾಮಿ, ಚುನಾವಣೆಗಳಲ್ಲಿ ಅಡ್ಜಸ್ಟ್‌ಮೆಂಟ್‌ ಕೆಲವು ಸಲ ಆಗುತ್ತದೆ. ಅದು ಹೊರಗೂ ಬರುತ್ತದೆ. ಆದರೆ, ನನ್ನ ಬಗ್ಗೆ ನಮ್ಮ ತಂದೆ ಎಂದೂ ಹೀಗೆ ಯೋಚನೆ ಮಾಡಿಲ್ಲ. ನಮ್ಮ ತಂದೆ ರಾಜ್ಯದ, ಜನರ ಬಗ್ಗೆ ಯೋಚನೆ ಮಾಡ್ತಾರೆ. ಬಹಳ ಜನ ಅಡ್ಜೆಸ್ಟ್‌ಮೆಂಟ್‌ ಮಾಡಿಕೊಂಡು ಇವತ್ತು ಬಹಳ ಒಳ್ಳೇ ಸ್ಥಾನದಲ್ಲಿ ಇದ್ದಾರೆ. ಆದರೆ, ನಮ್ಮ ಬಳಿ ಆ ರೀತಿ ಯಾವ ಅಡ್ಜೆಸ್ಟ್‌ಮೆಂಟ್‌ ಸಂಸ್ಕೃತಿ ಇಲ್ಲ ಎಂದು ಹೇಳಿದರು.

ಶಿವರಾಮೇಗೌಡ ಮಾತನಾಡಿರುವ ಪ್ರತಿ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ಕೈವಾಡ ಇದೆ ಎಂಬುದು ಗೊತ್ತಾಗುತ್ತದೆ. ಅವರೂ ಕೂಡಾ ಸರ್ಕಾರದ ಪ್ರಮುಖ ವ್ಯಕ್ತಿಯೊಬ್ಬರ ಹೆಸರು ಹೇಳಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು.

ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಗನ ಭವಿಷ್ಯದ ಚಿಂತೆ ಅಂತಾರೆ. ಎರಡು ಚುನಾವಣೆಯನ್ನು ನಾನು ಎದುರಿಸಿದ್ದೇನೆ. ಕೆಲವೊಮ್ಮೆ ಕೆಲವು ಸಂದರ್ಭದಲ್ಲಿ ಅಡ್ಜೆಸ್ಟ್‌ಮೆಂಟ್‌ ಒಳಗೆ ಹೊರಗೆ ಆಗುತ್ತದೆ. ಆದರೆ, ನಮ್ಮ ವಿಚಾರದಲ್ಲಿ ಹೀಗೆ ಆಗಲಿಲ್ಲ. ನನ್ನ ವಿಷಯದಲ್ಲಿ ದೊಡ್ಡ ಮಟ್ಟದಲ್ಲಿ ಕೂರಿಸಬೇಕು ಅನ್ನೋ ಚಿಂತನೆ ಕುಮಾರಣ್ಣರಿಗೆ ಇಲ್ಲ. ಅವರಿಗೆ ರಾಜ್ಯದ ಜನತೆ ಬಗ್ಗೆ ಇದ್ದ ಕಮಿಟ್ಮೆಂಟ್, ಬದ್ಧತೆ ಹಿನ್ನೆಲೆಯಲ್ಲಿ ಅವರು ಯಾವುದೇ ರೀತಿಯ ಯೋಚನೆಯನ್ನು ಮಾಡಲಿಲ್ಲ. ನಾನು ಸೋತ ಬಳಿಕವೂ ರಾಮನಗರ, ಮಂಡ್ಯದಲ್ಲಿ ಓಡಾಡುತ್ತಿದ್ದೇನೆ. ಅನೇಕ ರಾಜಕಾರಣಿ ಮಕ್ಕಳು ಅಡ್ಜೆಸ್ಟ್‌ಮೆಂಟ್‌ ಮೂಲಕ ಉತ್ತಮ ಸ್ಥಾನಗಳಲ್ಲಿದ್ದಾರೆ. ನನಗೆ ಹಾಗೇ ಆಗಿಲ್ಲ. ನಾನು ಒಬ್ಬನೇ ಓಡಾಡುತ್ತಿದ್ದೇನೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: CM Siddaramaiah: ಸರ್ಕಾರಕ್ಕೆ ಒಂದು ವರ್ಷ; ಹಲವು ಕನಸು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ! ಮಾಧ್ಯಮ ಸಂವಾದದ ಲೈವ್‌ ಇಲ್ಲಿದೆ

ನೂರು ಕೋಟಿ ರೂಪಾಯಿ ಆಫರ್ ವಿಚಾರವೂ ತನಿಖೆ ಆಗಬೇಕು

ಶಿವರಾಮೇಗೌಡ ಒಬ್ಬ ಸರ್ಕಾರದ ವ್ಯಕ್ತಿಯ ಹೆಸರನ್ನು ಉಲ್ಲೇಖಿಸುತ್ತಾರೆ. ಹಾಸನದ ಸಂಸದರ ವಿಡಿಯೊ ರಿಲೀಸ್ ಆದ ಬಳಿಕ ಸಂತ್ರಸ್ತೆ ಮುಖವನ್ನು ಬ್ಲರ್ ಮಾಡಲಿಲ್ಲ. ಸಂಸದರ ಮೇಲೆ ಆರೋಪ ಕೇಳಿಬಂದಿದೆ. ಆರೋಪಿ ಅದನ್ನು ಎದುರಿಸಲಿ. ಆದರೆ, ಸಂತ್ರಸ್ತೆಯರ ವಿಡಿಯೊ ಬಿಡುಗಡೆ ಮಾಡಿ ಮಾನ ಹರಾಜು ಮಾಡೋದು ಯಾಕೆ? ವಿಡಿಯೊ ರಿಲೀಸ್ ಮಾಡಿದವರ ಬಗ್ಗೆ ಕ್ರಮ ಯಾಕೆ ಆಗುತ್ತಿಲ್ಲ. ನೂರು ಕೋಟಿ ರೂಪಾಯಿ ಆಫರ್ ವಿಚಾರವೂ ತನಿಖೆ ಆಗಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು.

Exit mobile version