Site icon Vistara News

Prajwal Revanna Case: ಪ್ರಜ್ವಲ್‌ ಕೇಸ್‌ನಲ್ಲಿ ಸಂತ್ರಸ್ತೆಯರಿಗಾಗಿ ಹೆಲ್ಪ್‌ಲೈನ್‌ ಆರಂಭಿಸಿದ ಎಸ್‌ಐಟಿ

Prajwal Revanna Case

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣಕ್ಕೆ (Prajwal Revanna Case) ಸಂಬಂಧಿಸಿ ಸಂತ್ರಸ್ತ ಮಹಿಳೆಯನ್ನು ಕಿಡ್ಡ್ಯಾಪ್‌ ಮಾಡಿದ ಆರೋಪದಲ್ಲಿ ಈಗಾಗಲೇ ಶಾಸಕ ಎಚ್‌.ಡಿ.ರೇವಣ್ಣ ಬಂಧನವಾಗಿದೆ. ಪ್ರಕರಣದಲ್ಲಿ ಇನ್ನೂ ಹಲವು ಸಂತ್ರಸ್ತೆಯರು ಇರುವುದರಿಂದ ಅವರಿಗೆ ಕಾನೂನು ನೆರವು ಮತ್ತು ರಕ್ಷಣೆ ಪಡೆಯಲು ಎಸ್‌ಐಟಿಯಿಂದ ಹೆಲ್ಪ್‌ಲೈನ್‌ ತೆರೆಯಲಾಗಿದೆ.

ಈ ಬಗ್ಗೆ ಎಸ್‌ಐಟಿ ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು ಈಗಾಗಲೇ ವಿಶೇಷ ತನಿಖಾ ತಂಡ (SIT) ವನ್ನು ರಚಿಸಲಾಗಿದೆ. ತನಿಖೆ ವೇಳೆ ಘಟನೆಗೆ ಸಂಬಂಧಪಟ್ಟಂತೆ ಇನ್ನೂ ಸಂತ್ರಸ್ತರಿರುವುದು ಗೊತ್ತಾಗಿದ್ದು, ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರಿಗೆ (ಮಾಹಿತಿದಾರರಿಗೆ) ಕಾನೂನಿನ ನೆರವು ಮತ್ತು ರಕ್ಷಣೆ ಹಾಗೂ ಇನ್ನಿತರ ಯಾವುದೇ ಸಹಾಯ ಬೇಕಾದಲ್ಲಿ ಹೆಲ್ಪ್‌ಲೈನ್‌ ನಂ. 6360938947 ಗೆ ಕರೆ ಮಾಡಬಹುದು. ಸಂತ್ರಸ್ತರು ಅಥವಾ ಬಾತ್ಮೀದಾರ ವಿವರಗಳನ್ನು ಗುಪ್ತವಾಗಿಡಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

ಇದನ್ನೂ ಓದಿ | Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.‌ಡಿ. ರೇವಣ್ಣ (HD Revanna) ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಇಂದು ಭಾನುವಾರ (ಮೇ 5) ಕೋರ್ಟ್‌ ರಜೆ ಇರುವ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರನ್ನು ಕೋರಮಂಗಲದಲ್ಲಿರುವ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ನಿವಾಸಕ್ಕೆ ಕರೆತರಲಾಗಿತ್ತು. ಜಡ್ಜ್‌ ಮುಂದೆ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ಎಸ್‌ಐಟಿ ಪರ ವಕೀಲರು, ಪ್ರಕರಣದ ತೀವ್ರತೆಯನ್ನು ವಿವರಿಸಿ ರೇವಣ್ಣ ಅವರನ್ನು ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದರು. ಆದರೆ, ಇದಕ್ಕೆ ರೇವಣ್ಣ ಪರ ವಕೀಲರಾದ ಮೂರ್ತಿ ಡಿ. ನಾಯಕ್‌ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಎಸ್‌ಐಟಿಯವರು ತಮ್ಮ ಕಕ್ಷಿದಾರರಿಗೆ ಕಿರುಕುಳವನ್ನು ನೀಡುತ್ತಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ವಾದವನ್ನು ಮಂಡಿಸಿದರು.

ಈ ವೇಳೆ ರಿಮೈಂಡ್‌ ಕಾಪಿ‌ಯನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಿದ್ದಾರೆ. ಸುಮಾರು 15 ಅಂಶಗಳನ್ನು ಉಲ್ಲೇಖ ಮಾಡಿ 5 ದಿನಗಳ ಕಾಲ ಕಸ್ಟಡಿಗೆ ವಹಿಸುವಂತೆ ಕೋರಿದ್ದಾರೆ. ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ರವೀಂದ್ರ ಕುಮಾರ್ ಬಿ. ಕಟ್ಟಿಮನಿ ಅವರು, ಎಚ್‌.ಡಿ. ರೇವಣ್ಣ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.

ಬಿಗಿ ಭದ್ರತೆ ಒದಗಿಸಿದ್ದ ಪೊಲೀಸ್‌!

ಎಚ್.ಡಿ. ರೇವಣ್ಣ‌ ಪ್ರಭಾವಿ ನಾಯಕ ಹಾಗೂ ಶಾಸಕರಾಗಿರುವ ಕಾರಣ ಈಗಾಗಲೇ ಕೋರಮಂಗಲದ ನ್ಯಾಯಾಧೀಶರ ಮನೆ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ‌ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಭದ್ರತೆಯೊಂದಿಗೆ ಅವರನ್ನು ಜಡ್ಜ್‌ಗೆ ಹಾಜರುಪಡಿಸಲಾಯಿತು.

ಇದನ್ನೂ ಓದಿ | Prajwal Revanna Case: ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಕೇಸ್‌; ರೇವಣ್ಣ ಬಂಧನ ಕ್ರಮ ಸರಿ ಇದೆ ಎಂದ ಆರ್.‌ ಅಶೋಕ್‌!

ರೇವಣ್ಣಗೆ ಮತ್ತೊಮ್ಮೆ ಮೆಡಿಕಲ್ ಟೆಸ್ಟ್

ನ್ಯಾಯಾಧೀಶರ ಮುಂದೆ ಎಚ್.ಡಿ. ರೇವಣ್ಣ ಅವರನ್ನು ಹಾಜರುಪಡಿಸುವ ಮುನ್ನ ಬೋರಿಂಗ್‌ ಆಸ್ಪತ್ರೆಯಲ್ಲಿ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಹೃದಯ ತಜ್ಞರು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ತಜ್ಞರ ಬಳಿ ತಪಾಸಣೆ ನಡೆಸಲಾಗಿದೆ.

Exit mobile version