ಹೊಸದಿಲ್ಲಿ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅನರ್ಹತೆಯ ಪ್ರಕರಣ (Disqualification) ಇಂದು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ವಿಚಾರಣೆಗೆ ಬರಲಿದೆ. ಹಿಂದೆ ಹೈಕೋರ್ಟ್ (Karnataka High Court) ಪ್ರಜ್ವಲ್ ರೇವಣ್ಣ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದು, ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.
ಆಸ್ತಿ ಮೌಲ್ಯ (Illegal Assets) ತಪ್ಪಾಗಿ ಬಹಿರಂಗಪಡಿಸಿರುವುದು, ಚುನಾವಣಾ ಆಯೋಗ (Election Commission) ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಖರ್ಚು ಮಾಡಿರುವುದು ಸೇರಿ ಹಲವು ಆರೋಪಗಳನ್ನು ಪ್ರಜ್ವಲ್ ಎದುರಿಸುತ್ತಿದ್ದಾರೆ. ನ್ಯಾ.ಸೂರ್ಯಕಾಂತ್ ಅವರ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆ ನಡೆಯಲಿದೆ.
2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಸಲ್ಲಿಸಲಾದ ತಮ್ಮ ಅಫಿಡವಿಟ್‌ನಲ್ಲಿ ಸುಳ್ಳು ದಾಖಲೆ ಸಲ್ಲಿಸಿದ, ಹಾಗೂ ಚುನಾವಣಾ ಅಕ್ರಮಗಳ ಆರೋಪದ ಮೇಲೆ ಜನತಾ ದಳ (ಜಾತ್ಯತೀತ) ನಾಯಕ ಪ್ರಜ್ವಲ್ ರೇವಣ್ಣ ಅವರನ್ನು ಕರ್ನಾಟಕ ಹೈಕೋರ್ಟ್ ಹಾಸನ ಜಿಲ್ಲೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಿತ್ತು. ಏಕ ಪೀಠದ ನ್ಯಾಯಾಧೀಶ ಕೆ.ನಟರಾಜನ್ ಅವರು ಈ ತೀರ್ಪು ನೀಡಿದ್ದರು.
ಪ್ರಜ್ವಲ್ ಅವರು ಕರ್ನಾಟಕದ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಪುತ್ರ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ. ಲೋಕಸಭೆಯಲ್ಲಿ ಹಾಸನವನ್ನು ಪ್ರತಿನಿಧಿಸುವ ಅವರು ಜೆಡಿಎಸ್‌ನಿಂದ ಏಕೈಕ ಸಂಸದರಾಗಿದ್ದಾರೆ.
ಕ್ಷೇತ್ರದ ಮತದಾರರಾದ ಎ. ಮಂಜು ಮತ್ತು ಜಿ. ದೇವರಾಜೇಗೌಡ ಎಂಬವರು ಸಲ್ಲಿಸಿದ್ದ ಅರ್ಜಿಗಳನ್ನು ಆಧರಿಸಿ ಅನರ್ಹತೆ ತೀರ್ಪು ನೀಡಲಾಗಿತ್ತು. ಮಂಜು ಮಾಜಿ ಬಿಜೆಪಿ ಅಭ್ಯರ್ಥಿಯಾಗಿದ್ದು, 2019ರ ಚುನಾವಣೆಯಲ್ಲಿ ರೇವಣ್ಣ ವಿರುದ್ಧ ಸೋತಿದ್ದರು. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮೊದಲು, ಮಂಜು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು.
ಈ ಹಿಂದೆ, ತಾಂತ್ರಿಕ ಮತ್ತು ಇತರ ಅನುಸರಣೆ ಕಾರ್ಯವಿಧಾನದ ಕಾರಣಗಳನ್ನು ಉಲ್ಲೇಖಿಸಿ ಮಂಜು ಮತ್ತು ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ನಂತರ ಅರ್ಜಿಗಳ ವಿಚಾರಣೆ ನಡೆದಿತ್ತು.
ಇದನ್ನೂ ಓದಿ: Prajwal Revanna : ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ರಿಲೀಫ್; ಸಂಸದ ಸ್ಥಾನಕ್ಕೆ ಚ್ಯುತಿಯಿಲ್ಲ, ಚುನಾವಣೆ ಸ್ಪರ್ಧೆಗೂ ಅಡ್ಡಿಇಲ್ಲ