ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಪೆನ್ಡ್ರೈವ್ ಹಗರಣದ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣನನ್ನು (Prajwal Revanna) ಎಸ್ಐಟಿ ತನಿಖಾಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆದರೆ, ಪೊಲೀಸರು ಕೇಳುವ ಎಲ್ಲ ಪ್ರಶ್ನೆಗಳಿಗೆ ಪ್ರಜ್ವಲ್ ರೇವಣ್ಣ ‘ನಾನವನಲ್ಲ, ನನಗೆ ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡುತ್ತಿದ್ದಾರೆ. ಈ ಮೂಲಕ ಆರಂಭಿಕ ಹಂತದಲ್ಲಿ ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸಿದ್ದತೆ ನಡೆಸಿಕೊಂಡು ಬಂದಿದ್ದಾನೆ ಪ್ರಜ್ವಲ್ ರೇವಣ್ಣ
ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂದಲು 24 ಗಂಟೆಗಳ ಅವಧಿಯನ್ನು ಹೊಂದಿದ್ದಾರೆ. ಹೀಗಾಗಿ ಪೊಲೀಸರು ಪ್ರಾಥಮಿಕ ಹಂತದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಮಾತ್ರ ಯಾವುದೆಕ್ಕೂ ಸಮರ್ಥ ಉತ್ತರ ನೀಡುತ್ತಿಲ್ಲ ಎಂದು ಹೇಳಲಾಗಿದೆ.
ಎಸ್ಐಟಿ ಪೊಲೀಸರು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿರುವ ಮೂರು ಎಫ್ಐಆರ್ ಕುರಿತಾಗಿ ಪ್ರಶ್ನೆಗಳನ್ನು ಕೇಳುತತಿದ್ದಾರೆ. ಅವರ ಹೇಳಿಕೆಗಳ ಕುರಿತು ವಿಡಿಯೊ ದಾಖಲೆಯನ್ನು ಸೃಷ್ಟಿಸಲು ಪೊಲೀಸರು ಮುಂದಾಗಿದ್ದಾರೆ. ಅದೇ ರೀತಿ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎಂದು ಹೇಳಲಾದ ವಿಡಿಯೊಗಳಲ್ಲಿರುವ ಕೆಲವು ದೃಶ್ಯಗಳ ಕುರಿತೂ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ಆಮೀಷ ಒಡ್ಡಿ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದೀರಾ? ಬಿಡುಗಡೆಗೊಂಡ ವಿಡಿಯೊದಲ್ಲಿ ಇರುವವರು ನೀವೇನಾ ಎಂಬ ಪ್ರಶ್ನೆಗಳನ್ನು ಪೊಲೀಸರು ಕೇಳುತ್ತಿದ್ದಾರೆ. ಆದರೆ, ಎಲ್ಲ ಪ್ರಶ್ನೆಗಳಿಗೆ ಪ್ರಜ್ವಲ್ ಒಂದೇ ಉತ್ತರ ನೀಡುತ್ತಿದ್ದಾರೆ. ಇವೆಲ್ಲವೂ ತನ್ನ ವಿಡಿಯೊಗಳು ಅಲ್ಲ. ಎಲ್ಲವನ್ನೂ ಎಡಿಟ್ ಮಾಡಿ ಮಾರ್ಫ್ ಮಾಡಲಾಗಿದೆ. ವಿಡಿಯೊದಲ್ಲಿ ನಾನು ಇದ್ದೇನೆ ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಎಲ್ಲವನ್ನೂ ದ್ವೇಷದಿಂದ ಮಾಡಿರುವಂಥದ್ದು. ಎಲ್ಲಾ ವಿಡೀಯೋಗಳನ್ನು ತಿರುಚಲಾಗಿದೆ. ಇದು ತನ್ನದಲ್ಲ ಎಂದ ಮೇಲೆ ಉಳಿದ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರ ಇಲ್ಲ ಎಂದು ಪ್ರಜ್ವಲ್ ಹೇಳಿಕೆ ನೀಡಿದ್ದಾರ ಎಂಬುದಾಗಿ ಮೂಲಗಳು ತಿಳಿಸಿವೆ.
ಪರಾರಿಯಾಗಿದ್ದು ಯಾಕೆ?
ವಿಡಿಯೊ ಅಲ್ಲ ಎಂದ ಮೇಲೆ ವಿದೇಶಕ್ಕೆ ಪರಾರಿಯಾಗಿದ್ದು ಯಾಕೆ? ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತೆ ಎಂದು ನಿಮಗೆ ಗೊತ್ತಿದ್ದೇ ವಿದೇಶಕ್ಕೆ ಹೋದ್ರಾ ಎಂಬುದಾಗಿಯೂ ಪೊಲೀಸರು ಮರುಪ್ರಶ್ನೆಗಳನ್ನು ಹಾಕಿದ್ದಾರೆ. ನನ್ನ ಪ್ರವಾಸ ಪೂರ್ವನಿಯೋಜಿತ. ಅದಕ್ಕೆ ಮೊದಲೇ ಪ್ಲ್ಯಾನ್ ರೆಡಿ ಆಗಿತ್ತು. ವಿಡಿಯೊ ನನ್ನದಲ್ಲ ಎಂಬ ಕಾರಣಕ್ಕೆ ನಾನು ಧೈರ್ಯವಾಗಿದ್ದೆ. ಹೀಗಾಗಿ ನಾನು ವಿದೇಶದಲ್ಲಿ ಟೂರ್ ಮಾಡುತ್ತಿದ್ದೆ. ಹೀಗಾಗಿ ನನಗೆ ಮೊದಲು ಮಾಹಿತಿ ಬಂದಾಗ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.
ಇದನ್ನೂ ಓದಿ ;Bhavani Reavanna : ಭವಾನಿ ರೇವಣ್ಣಗೆ ಬಂಧನ ಭೀತಿ; ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ
ಪೆನ್ಡ್ರೈವ್ ಮೂಲಕ ಸಿಕ್ಕಿರುವ ವಿಡಿಯೋಗಳು ಇಷ್ಟರ ಮಟ್ಟಿಗೆ ಸದ್ದು ಮಾಡುತ್ತೆ ಎಂದು ಗೊತ್ತಿರಲಿಲ್ಲ. ಆದರೆ ನನ್ನ ವಿರುದ್ಧ ಮಾಡಿರುವ ಷಡ್ಯಂತ್ರಕ್ಕೆ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದೆ. ಈ ಹಿಂದೆ ನಾನು ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹಾಕಿದ್ದ ವೇಳೆ ತಪ್ಪು ಮಾಡಿಲ್ಲ ಎಂಬ ಕಾರಣಕ್ಕೆ ಏಳು ದಿನಗಳ ಕಾಲ ಸಮಯ ಕೇಳಿದ್ದೆ. ಆದರೆ, ಇದೊಂದು ಕ್ರಿಮಿನಲ್ ಪಿತೂರಿ. ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲೆಂದೇ ನಾನಾ ರೀತಿಯಲ್ಲಿ ಒತ್ತಡ ತಂದು ದೊಡ್ಡ ಮಟ್ಟಕ್ಕೆ ಸುದ್ದಿ ಮಾಡಲಾಗಿದೆ ಎಂದು ಪ್ರಜ್ವಲ್ ಹೇಳಿಕೆ ನೀಡಿದ್ದಾರೆ.
ನನ್ನ ವಿರುದ್ಧದ ಷಡ್ಯಂತ್ರದಿಂದಾಗಿ ನಾನು ಭಾರತಕ್ಕೆ ಬರಲು ಭಯ ಪಡುವಂತಾಗಿದೆ. ಆಗಿರುವ ಮೋಸದಿಂದ ನಾನು ಖಿನ್ನತೆಗೆ ಒಳಗಾಗಿದ್ದೆ. ಹೀಗಾಘಿ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.
ಸಮಸ್ಯೆ ತರಲಿದೆ 376(2)n ಸೆಕ್ಷನ್
ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ 376(2)n ದಾಖಲಾಗಿದೆ. ಇದು ನಿರಂತರವಾಗಿ ಒಬ್ಬ ಮಹಿಳೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಸೆಕ್ಷನ್ ಆಗಿದೆ. ಈ ಸೆಕ್ಷನ್ ನಡಿಯಲ್ಲಿ ಸ್ಟೇಟ್ಮೆಂಟ ಕೊಟ್ಟಿರುವ ಮಹಿಳೆಯ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ತಮ್ಮ ವಶಕ್ಕೆ ಪ್ರಜ್ವಲ್ ಪಡೆದ ತಕ್ಷಣ ಇದೇ ಸೆಕ್ಷನ್ ನಡಿ ದಾಖಲಾದ ಪ್ರಕರಣದ ಬಗ್ಗೆ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ.
ಸಂತ್ರಸ್ತೆಯ ಹೇಳಿಕೆ ಹೇಳಿಕೆ ಆಧರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಫಾರ್ಮ್ ಹೌಸ್ ನಲ್ಲಿ ಪ್ರಜ್ವಲ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಇದಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ತಾನು ಅತ್ಯಾಚಾರ ಮಾಡಿದ್ದೇ ಆದಲ್ಲಿ ಮೂರ್ನಾಲ್ಕು ವರ್ಷ ಸುಮ್ಮನಿರೋದಕ್ಕೆ ಕಾರಣವೇನು ಎಂದು ಪ್ರಜ್ವಲ್ ಪ್ರಶ್ನಿಸಿದ್ದಾರೆ.
ತಾನು ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ. ನನ್ನ ರಾಜಕೀಯ ಭವಿಷ್ಯ ಹಾಗು ತನ್ನ ಕುಟುಂಬದ ವರ್ಚಸ್ಸು ಹಾಳು ಮಾಡುವ ಸಲುವಾಗಿ ನಡೆದಿರುವ ಷಡ್ಯಂತ್ರ ಇದಾಗಿದೆ. ಈಗಾಗಲೆ ತನ್ನದಲ್ಲದ ತಪ್ಪಿಗೆ ತನ್ನ ಕುಟುಂಬ ನೋವು ಅನುಭವಿಸ್ತಾ ಇದೆ ಎಂದು ಪ್ರಜ್ವಲ್ ಹೇಳಿದ್ದಾರೆ.
ನನ್ನ ತಂದೆ ಜೈಲಿಗೆ ಕೂಡ ಹೋಗಿ ಬಂದಿದ್ದಾರೆ. ಇದರಿಂದಾಗಿ ಎಲ್ಲರೂ ಸಮಸ್ಯೆಯಾಗಿ ಉಳಿದಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಪ್ರಜ್ವಲ್ ಪದೇಪದೇ ಹೇಳುತ್ತಿದ್ದಾರೆ. ಇಂತಹ ಕೀಳು ಮಟ್ಟದ ಬೆಳವಣಿಗೆಯಿಂದ ತನಗೆ ಆಘಾತವಾಗಿದೆ ಎಂದ ಪ್ರಜ್ವಲ್ ಪೊಲೀಸರು ಮುಂದೆ ಹೇಳಿಕೆ ನೀಡಿದ್ದಾರೆ