ಗೌಹಾಟಿ: ಏಕರೂಪ ನಾಗರಿಕ ಸಂಹಿತೆಯ (Uniform Civil Code – UCC) ಅಳವಡಿಕೆಯ ಮೊದಲಿನ ಪ್ರಮುಖ ಹೆಜ್ಜೆಯಾಗಿ, ಅಸ್ಸಾಂ ಕ್ಯಾಬಿನೆಟ್ ಶುಕ್ರವಾರ ʼಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯಿದೆ- 1935ʼ ಅನ್ನು ರದ್ದುಗೊಳಿಸಿದೆ.
ಇದರೊಂದಿಗೆ, ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳು ಈಗ ವಿಶೇಷ ವಿವಾಹ ಕಾಯಿದೆಯ ಅಡಿಯಲ್ಲಿ ಬರುತ್ತವೆ. ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆಯ ಶಾಸನವನ್ನು ಸ್ವತಂತ್ರ ಭಾರತದಲ್ಲಿ ಅಂಗೀಕರಿಸಿದ ಮೊದಲ ರಾಜ್ಯವಾದ ಕೆಲವೇ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಅಸ್ಸಾಂ ಸಚಿವ ಜಯಂತ ಮಲ್ಲಾ ಬರುವಾ, ಕ್ಯಾಬಿನೆಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದರು. ಫೆಬ್ರವರಿ 28ರವರೆಗೆ ಅಸ್ಸಾಂ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಇಲ್ಲಿ ಈ ವಿಧೇಯಕವನ್ನು ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
“ನಾವು ಏಕರೂಪ ನಾಗರಿಕ ಸಂಹಿತೆಯತ್ತ ಸಾಗುತ್ತಿದ್ದೇವೆ ಎಂದು ಮುಖ್ಯಮಂತ್ರಿ ಇತ್ತೀಚೆಗೆ ಹೇಳಿದ್ದಾರೆ. ಈ ಪ್ರಯಾಣದಲ್ಲಿ ಬಹಳ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯಿದೆ- 1935, ಇದರ ಅಡಿಯಲ್ಲಿ 94 ಮುಸ್ಲಿಂ ರಿಜಿಸ್ಟ್ರಾರ್‌ಗಳು ಇನ್ನೂ ಕಾರ್ಯನಿರ್ವಹಿಸುತ್ತಿದ್ದಾರೆ. ಅದನ್ನು ರದ್ದುಗೊಳಿಸಲಾಗುತ್ತದೆ” ಎಂದು ಮಲ್ಲಾ ಬರುವಾ ಹೇಳಿದರು.
ಈ ನಿರ್ಧಾರವು ಬಾಲ್ಯ ವಿವಾಹಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿಯನ್ನು ಇನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನೋಂದಣಾಧಿಕಾರಿಗಳು ನಿರ್ವಹಿಸುತ್ತಾರೆ ಎಂದು ಮಲ್ಲಾ ಹೇಳಿದರು. ಮುಸ್ಲಿಂ ಕಾಯಿದೆಯಡಿ ವಿವಾಹ ನೋಂದಣಿ ಮಾಡುತ್ತಿರುವ 94 ಮುಸ್ಲಿಂ ರಿಜಿಸ್ಟ್ರಾರ್‌ಗಳಿಗೆ ಒಂದು ಬಾರಿಯ ಪರಿಹಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಏಕರೂಪ ನಾಗರಿಕ ಸಂಹಿತೆ (UCC) ಅಂದರೆ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು, ನಿರ್ವಹಣೆ ಇತ್ಯಾದಿ ವಿಷಯಗಳಲ್ಲಿ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯಿಸುವ ಒಂದು ಕಾನೂನು ಆಗಿದೆ. ಭಾರತವು ಏಕರೂಪ ಕ್ರಿಮಿನಲ್ ಕೋಡ್ ಅನ್ನು ಹೊಂದಿದೆ. ಆದರೆ ಎಲ್ಲಾ ನಾಗರಿಕರು ಏಕರೂಪದ ನಾಗರಿಕ ಕಾನೂನನ್ನು ಹೊಂದಿಲ್ಲ. ಈ ತಿಂಗಳ ಆರಂಭದಲ್ಲಿ, ಉತ್ತರಾಖಂಡವು ಎಲ್ಲಾ ಸಮುದಾಯಗಳ ನಡುವೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ಏಕರೂಪದಲ್ಲಿ ನಿಯಂತ್ರಿಸುವ ಕಾನೂನನ್ನು ಅಂಗೀಕರಿಸಿತು.
ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ