Site icon Vistara News

Private Laboratory: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ಒಳಗಿನ ಖಾಸಗಿ ಲ್ಯಾಬ್‌ ಬಂದ್‌; ಸರ್ಕಾರದ ಖಡಕ್‌ ಆದೇಶ!

Private Laboratory within 200 metres of government hospital closed

ಬೆಂಗಳೂರು: ಸರ್ಕಾರಿ ಆಸ್ಪತ್ರೆಯಿಂದ 200 ಮೀಟ‌ರ್ ಅಂತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು (Private Laboratory) ಪರಿಶೀಲನೆ ನಡೆಸಿ, ಹಾಲಿ ಇರುವ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಲ್ಲಿ ಅವುಗಳನ್ನು ಮುಚ್ಚಿಸುವಂತೆ ರಾಜ್ಯ ಸರ್ಕಾರ (Karnataka Government order) ಆದೇಶ ನೀಡಿದೆ. ಖಾಸಗಿ ಲ್ಯಾಬ್‌ಗಳ ಕುರಿತು ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ಈ ಮೂಲಕ ಅನಧಿಕೃತವಾಗಿ ಖಾಸಗಿ ಪ್ರಯೋಗಾಲಯಗಳನ್ನು ನಡೆಸುತ್ತಿದ್ದವರಿಗೆ ಶಾಕ್ ಕೊಡಲಾಗಿದೆ.

ಈಗಾಗಲೇ ಇರುವ ಕಾಯ್ದೆಯಂತೆ (2019ರ ಆದೇಶದನ್ವಯ) ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡುವಂತಿಲ್ಲ. ಇಷ್ಟಾದರೂ ಕೆಲವು ಖಾಸಗಿ ಲ್ಯಾಬೋರೇಟರಿಗಳು ತಲೆ ಎತ್ತಿವೆ ಎಂಬ ದೂರುಗಳು ಸಾಕಷ್ಟು ಬಂದಿವೆ. ಈ ಹಿನ್ನೆಲೆಯುಲ್ಲಿ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಕೆ.ಪಿ.ಎಂ.ಇ ಅಧಿನಿಯಮ 2017 ರ ಸೆಕ್ಷನ್ (22) ರಸ್ತೆಯ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನವನ್ನು ನೀಡಿದ್ದಾರೆ. ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು, ನೋಂದಣಿ ಮತ್ತು ಕುಂದು ನಿವಾರಣಾ ಪ್ರಾಧಿಕಾರ, ಕೆ.ಪಿ.ಎಂ.ಇಗೆ ಈ ನಿರ್ದೇಶನವನ್ನು ನೀಡಲಾಗಿದೆ. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಮಾರ್ಚ್‌ 30ರೊಳಗೆ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆದೇಶದಲ್ಲೇನಿದೆ?

ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ, 2017ರ ಸೆಕ್ಷನ್ 6ರನ್ವಯ, ದಿನಾಂಕ 04-04-2019 ರಿಂದ ಜಾರಿಗೆ ಬರುವಂತೆ, ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ/ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪ್ರವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡತಕ್ಕದ್ದಲ್ಲ.

ಆದಾಗ್ಯೂ, ಕೆಲವು ಅನಧಿಕೃತ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, ಸರ್ಕಾರಿ ಆಸ್ಪತ್ರೆಯಿಂದ 200 ಮೀಟ‌ರ್ ಅಂತರದೊಳಗೆ ಕಾರ್ಯ ನಿರ್ವಹಿಸುತ್ತಿರುವ ಸಂಬಂಧ ಈ ಆಯುಕ್ತಾಲಯಕ್ಕೆ ದೂರು ಸ್ವೀಕೃತಗೊಂಡ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ, ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಡುವ ಮತ್ತು ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸ್ಥಳ ಪರಿಶೀಲನೆ ಮಾಡುವಂತೆ ಮತ್ತು ಅವುಗಳು ಕೆ.ಪಿ.ಎಂ.ಇ ಕಾಯ್ದೆ ಅಥವಾ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಅಂತಹ ಪ್ರಯೋಗಾಲಯಗಳನ್ನು ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ & ಕುಂದು ಕೊರತೆ ನಿವಾರಣಾ ಪ್ರಾಧಿಕಾರ) & ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿತ್ತು. ಹಾಗಿದ್ದರೂ ಸದರಿ ಆದೇಶದಂತೆ ಯಾವುದೇ ಜಿಲ್ಲೆಗಳು ಕಟ್ಟು ನಿಟ್ಟಿನ ಕ್ರಮವಹಿಸದೇ ಇರುವುದನ್ನು ಗಮನಿಸಲಾಗಿ, ಈ ಕೆಳಗಿನಂತೆ ಆದೇಶಿಸಿದೆ.

ಇದನ್ನೂ ಓದಿ: Job News: ಶೀಘ್ರ 1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕ; ವೇತನದಲ್ಲೂ ಹೆಚ್ಚಳ!

ದಿನಾಂಕ 04.04.2019 ದ ನಂತರದಿಂದ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, “ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ/ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪ್ರವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರ್‌ಗಳ ದೂರದ ಒಳಗೆ ಕಾರ್ಯನಿರ್ವಹಿಸುತ್ತಿದ್ದಲ್ಲಿ, ಅಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ.ಪಿ.ಎಂ.ಇ ಯ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು, ಪ್ರಾಧಿಕೃತ ಅಧಿಕಾರಿಗಳು, ಕೆ.ಪಿ.ಎಂ.ಇ ಇವರಿಗೆ ಆದೇಶಿಸಲು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ) ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮತ್ತೊಮ್ಮೆ ನಿರ್ದೇಶಿಸಿದೆ. ಹಾಗೂ ಮೊಹರು ಬಂದ್‌ ಮಾಡಲಾದಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸಂಪೂರ್ಣ ಕ್ರೋಢೀಕೃತ ವಿವರವನ್ನು ದಿನಾಂಕ: 30.03.2024 ರೊಳಗೆ dd2medical@gmail.com ಗೆ ತಪ್ಪದೆ ರವಾನಿಸಲು ಎಲ್ಲ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Exit mobile version