Site icon Vistara News

ವಿಸ್ತಾರ ಸಂಪಾದಕೀಯ: ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪಬ್ಲಿಕ್‌ ಪರೀಕ್ಷೆ ಪೂರಕ

public exam

2022-23ನೇ ಸಾಲಿನಿಂದಲೇ ರಾಜ್ಯದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪಬ್ಲಿಕ್‌ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಪರೀಕ್ಷೆ ನಡೆಸಲಿದ್ದು, ಮಾರ್ಚ್‌ 9ರಿಂದ ಮಾ.17ರವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಇನ್ನು ಮುಂದೆ ಪ್ರತಿ ವರ್ಷ 5 ಮತ್ತು 8ನೇ ತರಗತಿಗೆ ಈ ಪಬ್ಲಿಕ್‌ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ರೂಪಿಸಿದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ (KSEEB) ಪರೀಕ್ಷೆ ನಡೆಸುವ ಮತ್ತು ಮೌಲ್ಯಮಾಪನದ ಜವಾಬ್ದಾರಿ ವಹಿಸಲಾಗಿದೆ. ಖಾಸಗಿ ಶಾಲಾ ಆಡಳಿತಗಳು ಇದನ್ನು ಸ್ವಾಗತಿಸಿವೆ. ನೂತನ ಉಪಕ್ರಮದ ಆಶಯ, ರೂಪುರೇಷೆಗಳನ್ನು ತುಸು ಪರೀಕ್ಷಿಸಿ ನೋಡಬೇಕಿದೆ.

ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಒಂದರಿಂದ ಪದವಿಯವರೆಗೂ ಎಲ್ಲ ಮಟ್ಟದಲ್ಲಿಯೂ ವಿದ್ಯಾರ್ಥಿಗಳ ಕಲಿಕೆ ಪ್ರಕ್ರಿಯೆಯಲ್ಲಿ ಭಾರಿ ಕೊರತೆ ಉಂಟಾಗಿತ್ತು. ಪ್ರೌಢಶಾಲೆಗಿಂತ ನಂತರದ, ಇಂಟರ್‌ನೆಟ್‌ ಬಳಕೆಯನ್ನು ಬಲ್ಲ ಮಕ್ಕಳು ಚೇತರಿಸಿಕೊಂಡರು. ಆದರೆ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಇದು ಸಾಧ್ಯವಾಗಲಿಲ್ಲ. ಹೀಗಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮಗಳು ಅಗತ್ಯವಾದವು. ಪ್ರಸ್ತುತ 2022-23ನೇ ಸಾಲಿನಲ್ಲಿ ಮಕ್ಕಳ ಕಲಿಕಾ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಕಲಿಕೆ ಚುರುಕಾಗಿದೆಯೇ, ಶೈಕ್ಷಣಿಕ ಗುಣಮಟ್ಟ ಹೇಗಿದೆ ಎಂದು ತಿಳಿಸಲು ಯಾವುದೇ ಮೌಲ್ಯಮಾಪನ ವಿಧಾನಗಳಿಲ್ಲ. 1ನೇ ತರಗತಿಯಿಂದ 9ನೇ ತರಗತಿವರೆಗೆ ಪರೀಕ್ಷೆಗಳಿಲ್ಲ. ಬದಲಾಗಿ ನಿರಂತರ ಸಮಗ್ರ ಮೌಲ್ಯಮಾಪನ (ಸಿಸಿಇ) ಪದ್ಧತಿಯಿದೆ. ಇದು ಗಣಿತ, ವಿಜ್ಞಾನ, ಇತಿಹಾಸದಂಥ ಪ್ರಮುಖ ವಿಷಯಗಳ ಕಲಿಕೆಯ ಮೌಲ್ಯಮಾಪನದಲ್ಲಿ ಹೆಚ್ಚಿನ ಪ್ರಯೋಜನಕ್ಕೆ ಬರುತ್ತಿಲ್ಲ. ಹೀಗಾಗಿ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಒಟ್ಟಾರೆಯಾಗಿ ಮಕ್ಕಳ ಕಲಿಕೆಯ ಮಟ್ಟವೇನು? ಕೊರತೆಗಳೇನು? ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ? ಇವುಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಹೊಸ ಪದ್ಧತಿಯನ್ನು ಜಾರಿಗೊಳಿಸಲಾಗುತ್ತಿದೆ. ಈ ಉದ್ದೇಶದಿಂದ ಈ ಯೋಜನೆ ಸ್ವಾಗತಾರ್ಹ. ಕೆಲ ವರ್ಷಗಳ ಮೊದಲು 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಅದನ್ನು ನಿಲ್ಲಿಸಿಯೇ ಬಹಳ ವರ್ಷಗಳಾಗಿವೆ. ಇದ್ದಕ್ಕಿದ್ದಂತೆ ಹತ್ತನೇ ತರಗತಿಯಲ್ಲಿ ಪಬ್ಲಿಕ್‌ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗೆ ಪೂರ್ವಭಾವಿಯಾಗಿ 8ನೇ ತರಗತಿಯ ಪಬ್ಲಿಕ್‌ ಪರೀಕ್ಷೆಯ ಅನುಭವ ಇರುವುದು ಒಳ್ಳೆಯದು. ಇನ್ನು ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲೆಗೆ ದಾಟಿಕೊಳ್ಳುವ ಹಂತದಲ್ಲಿ ಒಂದು ಪಬ್ಲಿಕ್‌ ಪರೀಕ್ಷೆ ಇಡುವುದು ಕೂಡ ಉಚಿತವಾಗಿದೆ. ಇದರಿಂದ ಮೌಲ್ಯಾಂಕನ ವಿಶ್ಲೇಷಣೆ ಮಾಡಿ, ಕಲಿಕಾ ಪ್ರಗತಿ ಕುಂಠಿತವಾಗಿರುವ ವಿಷಯವಾರು, ಶಾಲಾವಾರು, ತಾಲೂಕುವಾರು ವಿಶ್ಲೇಷಣೆ ನಡೆಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ಮತ್ತು ಬೋಧನಾ ಪ್ರಕ್ರಿಯೆ ರೂಪಿಸಲು ಇಲಾಖೆಗೆ ಸಹಾಯವಾಗಲಿದೆ.

ಈ ಪರೀಕ್ಷೆ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಹಾಗೂ ಹೆಚ್ಚಿನ ಬೋಧನಾ ಕೌಶಲಗಳನ್ನು ಅಳವಡಿಸಲು ಇಲಾಖೆಗೆ ನೆರವಾಗುವ ಉದ್ದೇಶದಿಂದ ಏರ್ಪಡಿಸಲಾಗಿದೆ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಪರಿಶೀಲಿಸಿ ಉತ್ತೀರ್ಣತೆ- ಅನುತ್ತೀರ್ಣತೆಯನ್ನೂ ಘೋಷಿಸಲಾಗುತ್ತದೆ. ಇದು ಕಲಿಕೆಯಲ್ಲಿ ಹೆಚ್ಚಿನ ಗಂಭೀರತೆಯನ್ನು ತರಬಹುದಾಗಿದೆ. ಇದುವರೆಗೆ 9ನೇ ತರಗತಿಯವರೆಗೂ ಯಾವುದೇ ಅನುತ್ತೀರ್ಣತೆಯ ಸಾಧ್ಯತೆ ಇಲ್ಲವಾಗಿದ್ದರಿಂದ, ಕಲಿಕೆಯ ಗಂಭೀರತೆಯನ್ನು ಪರಿಶೀಲಿಸುವ ಸಾಧ್ಯತೆಯೇ ಇರಲಿಲ್ಲ. ಶಿಕ್ಷಣ ಎಂದರೆ ಒಂದು ಮಟ್ಟದ ಮೌಲ್ಯಮಾಪನ ಇರುವುದು ಅಗತ್ಯವೇ ಆಗಿದೆ. ಶಿಕ್ಷಣ ತಜ್ಞರೂ ಇದನ್ನು ಒಪ್ಪುತ್ತಾರೆ. ಈ ವರ್ಷದಿಂದ ಜಾರಿಯಾಗಿರುವ ನೂತನ ಶಿಕ್ಷಣ ನೀತಿಯು ಮಕ್ಕಳಲ್ಲಿ ಕೌಶಲ ಹಾಗೂ ಮಾತೃಭಾಷಾ ಕಲಿಕೆಯತ್ತ ಹೆಚ್ಚಿನ ಗಮನವನ್ನು ನೀಡುತ್ತಿದೆ. ಹೀಗಾಗಿ ಈಗ ರೂಪಿಸಲಾಗುತ್ತಿರುವ ಪಬ್ಲಿಕ್‌ ಪರೀಕ್ಷೆಗಳೂ ಅದೇ ರೀತಿ ಇರಬೇಕಾದುದು ಅಪೇಕ್ಷಣೀಯ. ತಾಲೂಕು ಮಟ್ಟದಲ್ಲಿ ಮೌಲ್ಯಮಾಪನ ನಡೆಯಲಿರುವುದರಿಂದ, ಇದು ಹೆಚ್ಚಿನ ಒತ್ತಡವನ್ನೂ ಸೃಷ್ಟಿಸಲಾರದು ಎಂದು ನಂಬಬಹುದು. ಒಟ್ಟಾರೆ, ಪ್ರಾಥಮಿಕ ಹಂತದಲ್ಲೇ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಇದು ನೆರವಾಗಲಿದೆ. ಮಕ್ಕಳು ಉನ್ನತ ಶಿಕ್ಷಣವನ್ನು ಧೈರ್ಯವಾಗಿ ಮತ್ತು ಸರಾಗವಾಗಿ ಎದುರಿಸಲು ಇದರಿಂದ ಅನುಕೂಲವಾಗಲಿದೆ.

ಇದನ್ನೂ ಓದಿ | ಸಂಪಾದಕೀಯ | ಚೀನಾದ ಉದ್ಧಟತನಕ್ಕೆ ತಕ್ಕ ಪ್ರತ್ಯುತ್ತರ ಅಗತ್ಯ

Exit mobile version