2022-23ರ ಸಾಲಿನಿಂದಲೇ ರಾಜ್ಯದ ಎಲ್ಲಾ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪಬ್ಲಿಕ್ (Public Exam) ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಈ ಪಬ್ಲಿಕ್ ಪರೀಕ್ಷೆ ಉಪಕ್ರಮದ ವಿರುದ್ಧ ಖಾಸಗಿ ಶಾಲಾ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ನಡೆಸಲಿದ್ದ ಈ ಪರೀಕ್ಷೆಗಳು ಮಾರ್ಚ್ 27ರಿಂದ ನಡೆಯುವುದು ಎಂದು ನಿಗದಿಯಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ, ಪಬ್ಲಿಕ್ ಪರೀಕ್ಷೆಯ ಅಗತ್ಯದ ಬಗ್ಗೆ ಅತಂತ್ರ ಸ್ಥಿತಿಯಂತೂ ಉದ್ಭವವಾಗಿದೆ. ಹಾಗಾಗಿ ಮಕ್ಕಳು ಮತ್ತು ಪೋಷಕರು ಮತ್ತೆ ಮಾನಸಿಕ ಒತ್ತಡ ಅನುಭವಿಸುವಂತಾಗಿದೆ. ಈ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕಿದೆ.
ಪಬ್ಲಿಕ್ ಪರೀಕ್ಷೆಯನ್ನು ನಡೆಸುವುದು ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಉತ್ತಮ ಎಂಬ ಅಭಿಮತವನ್ನು ಅನೇಕ ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ. ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಒಂದರಿಂದ ಪದವಿಯವರೆಗೂ ಎಲ್ಲ ಮಟ್ಟದಲ್ಲಿಯೂ ವಿದ್ಯಾರ್ಥಿಗಳ ಕಲಿಕೆ ಪ್ರಕ್ರಿಯೆಯಲ್ಲಿ ಭಾರಿ ಕೊರತೆ ಉಂಟಾಗಿತ್ತು. ಪ್ರೌಢಶಾಲೆಯ, ಇಂಟರ್‌ನೆಟ್ ಬಳಕೆಯನ್ನು ಬಲ್ಲ ಮಕ್ಕಳು ಚೇತರಿಸಿಕೊಂಡರು. ಆದರೆ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಇದು ಸಾಧ್ಯವಾಗಲಿಲ್ಲ. ಹೀಗಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮಗಳು ಅಗತ್ಯವಾದವು. 2022-23ನೇ ಸಾಲಿನಲ್ಲಿ ಮಕ್ಕಳ ಕಲಿಕಾ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಕಲಿಕೆ ಚುರುಕಾಗಿದೆಯೇ ಎಂದು ತಿಳಿಸಲು ಯಾವುದೇ ಮೌಲ್ಯಮಾಪನ ವಿಧಾನಗಳಿಲ್ಲ. 1ನೇ ತರಗತಿಯಿಂದ 9ನೇ ತರಗತಿವರೆಗೆ ಪರೀಕ್ಷೆಗಳಿಲ್ಲ. ಬದಲಾಗಿ ನಿರಂತರ ಸಮಗ್ರ ಮೌಲ್ಯಮಾಪನ (ಸಿಸಿಇ) ಪದ್ಧತಿಯಿದೆ. ಇದು ಗಣಿತ, ವಿಜ್ಞಾನ, ಇತಿಹಾಸದಂಥ ಪ್ರಮುಖ ವಿಷಯಗಳ ಕಲಿಕೆಯ ಮೌಲ್ಯಮಾಪನದಲ್ಲಿ ಹೆಚ್ಚಿನ ಪ್ರಯೋಜನಕ್ಕೆ ಬರುತ್ತಿಲ್ಲ. ಹೀಗಾಗಿ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಯಾವ ರೀತಿ ಇದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಪದ್ಧತಿಯ ಜಾರಿಗೆ ಮುಂದಾಗಿತ್ತು.
ಆದರೆ ಇದನ್ನು ವಿರೋಧಿಸಿ ಖಾಸಗಿ ಶಾಲೆಗಳ ಒಕ್ಕೂಟ ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿತ್ತು. ರಾಜ್ಯಮಟ್ಟದ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದರಿಂದ ಮೌಲ್ಯಮಾಪನ ವಿಧಾನವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ; ಒತ್ತಡವನ್ನು ಉಂಟುಮಾಡುತ್ತದೆ. ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರವು ಪೋಷಕರು ಮತ್ತು ಶಾಲೆಗಳ ಜೊತೆಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ವಾದಿಸಿತು. ನ್ಯಾಯಪೀಠ ಪರೀಕ್ಷೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಶಿಕ್ಷಣ ಇಲಾಖೆ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದಾಗ, ಪರೀಕ್ಷೆ ನಡೆಸಲು ಷರತ್ತುಬದ್ಧ ಅನುಮತಿಯನ್ನು ಕೋರ್ಟ್ ನೀಡಿತ್ತು. ಮಾರ್ಚ್ 27ರಿಂದಲೇ ಪರೀಕ್ಷೆಯನ್ನು ಮರುನಿಗದಿ ಮಾಡಲು ಸೂಚಿಸಿತ್ತು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳಿಗೆ ಕಡಿವಾಣ ಅಗತ್ಯ
ಈ ನಡುವೆ ಖಾಸಗಿ ಶಾಲೆಗಳ ಒಕ್ಕೂಟವು ಸುಪ್ರೀಂ ಕೋರ್ಟ್ ಮೊರೆ ಹೊಕ್ಕಿದೆ. ಮುಂದಿನ ವಿಚಾರಣೆ ಮಾರ್ಚ್ 27ರಂದೇ ನಡೆಯಲಿದೆ. ಹೈಕೋರ್ಟ್‌ನ ತೀರ್ಪಿನಲ್ಲಿ ಸುಪ್ರೀಂ ಮಧ್ಯಪ್ರವೇಶಿಸಿಲ್ಲವಾದ್ದರಿಂದ, ಪಬ್ಲಿಕ್ ಪರೀಕ್ಷೆಯೇನೋ ನಡೆಯಬಹುದು. ಆದರೆ ಅಡ್ಡಗೋಡೆಯ ಮೇಲಿನ ದೀಪದ ಪರಿಸ್ಥಿತಿ ಮುಂದುವರಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಇಷ್ಟೊಂದು ಪ್ರಮುಖ ವಿಚಾರದಲ್ಲಿ ಒಂದು ಒಮ್ಮತವನ್ನು ಪಡೆಯಲು ಶಿಕ್ಷಣ ಇಲಾಖೆ ವಿಫಲವಾದುದು ಎದ್ದು ಕಾಣಿಸುತ್ತಿದೆ. ಈ ಬಗ್ಗೆ ಚರ್ಚೆ ನಡೆಸಿ ಸಹಮತ ಮೂಡಿದ ಬಳಿಕವೇ ಸರ್ಕಾರ ಪಬ್ಲಿಕ್ ಪರೀಕ್ಷೆ ನಡೆಸಬೇಕಿದ್ದುದು ನ್ಯಾಯ. ಅನಗತ್ಯವಾಗಿ ಮಕ್ಕಳು ಹಾಗೂ ಶಿಕ್ಷಕರ ಮೇಲೆ ಒತ್ತಡ ಸೃಷ್ಟಿಸುವ ಈ ಪರೀಕ್ಷೆಗಳು ಅಗತ್ಯವಿಲ್ಲ ಎಂಬ ವಾದವೂ ಸಾಕಷ್ಟು ಬಲವಾಗಿಯೇ ಇದೆ. ಇದೇ ವೇಳೆ ಕೆಲವು ಖಾಸಗಿ ಶಾಲೆಗಳ ಒಕ್ಕೂಟಗಳು ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದೂ ಸರಿಯಲ್ಲ. ಸರ್ಕಾರ ಕೂಡಲೇ ಖಾಸಗಿ ಶಾಲಾ ಒಕ್ಕೂಟಗಳ ಜತೆ ಮಾತನಾಡಿ ಈ ಪರೀಕ್ಷಾ ಗೊಂದಲ ಪರಿಹರಿಸಬೇಕು. ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ನಿರಂತರವಾಗಿ ಮುಂದುವರಿದು, ಪರೀಕ್ಷೆ ಅಯೋಮಯವಾಗಿ ಪುಟ್ಟ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವಂತಾಗಬಾರದು.