ಪುಣೆ: ಐಷಾರಾಮಿ ಪೋರ್ಷೆ ಕಾರು ಅಪಘಾತದ (Pune Porsche Crash) ಆರೋಪಿಯಾಗಿರುವ ಬಾಲಕನ ತಂದೆ ಮತ್ತು ಅಜ್ಜನಿಗೆ ಪುಣೆ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಅವರಿಬ್ಬರನ್ನು ಕುಟುಂಬದ ಚಾಲಕನನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಮೇ ಅಂತ್ಯಕ್ಕೆ 17 ವರ್ಷದ ಬಾಲಕನ ತಂದೆ, ಮಹಾರಾಷ್ಟ್ರದ ಬಿಲ್ಡರ್ ವಿಶಾಲ್ ಅಗರ್ವಾಲ್ ಮತ್ತು ಆತನ ಅಜ್ಜನಿಗೆ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯ ಜಾಮೀನು ನೀಡಿದೆ.
ಪೊಲೀಸರ ಪ್ರಕಾರ, ಬಾಲಕನ ತಂದೆ ಮತ್ತು ಅಜ್ಜ ಮೇ 19 ರಂದು ರಾತ್ರಿ 11 ಗಂಟೆಗೆ ಪೊಲೀಸ್ ಠಾಣೆಯಿಂದ ಹೊರಟ ನಂತರ ತಮ್ಮ ಕುಟುಂಬ ಕಾರು ಚಾಲಕನನ್ನು ಅಪಹರಿಸಿದ್ದರು. ಅವರನ್ನು ತಮ್ಮ ಬಂಗಲೆಯಲ್ಲಿ ಇಟ್ಟುಕೊಂಡು ಅಪಘಾತ ಸಂಭವಿಸಿದಾಗ ನಾನೇ ಕಾರು ಓಡಿಸುತ್ತಿದ್ದೆ ಎಂದು ಒಪ್ಪಿಕೊಳ್ಳುವಂತೆ ಬೆದರಿಕೆ ಒಡ್ಡಿದ್ದರು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.
ಕುಡಿದ ಮತ್ತಿನಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕ್ ಹೋಗುದ್ದಿ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಿಗೆ ಡಿಕ್ಕಿ ಹೊಡೆದಿತ್ತು. ಈ ಪ್ರಕರಣದಲ್ಲಿ ಅಪಹರಣ ಮತ್ತು ಅಕ್ರಮ ಬಂಧನ ಪ್ರಕರಣದಲ್ಲಿ ತನ್ನ ಕಕ್ಷಿದಾರರಿಗೆ ನ್ಯಾಯಾಲಯ ಜಾಮೀನು ನೀಡಿದೆ ಎಂದು ಪ್ರತಿವಾದಿ ವಕೀಲ ಪ್ರಶಾಂತ್ ಪಾಟೀಲ್ ಮಾಹಿತಿ ನೀಡಿದರು.
ಇದನ್ನೂ ಓದಿ: NEET PG exam : ಮೋಸ ತಡೆಯಲು ಕ್ರಮ; ನೀಟ್ ಪರೀಕ್ಷೆ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಪ್ರಶ್ನೆ ಪತ್ರಿಕೆ ತಯಾರಿ!
ನನ್ನ ಕಕ್ಷಿದಾರರು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತಾರೆ. ನ್ಯಾಯಾಲಯದ ಕಠಿಣ ಷರತ್ತುಗಳಿಗೆ ಬದ್ಧರಾಗಿರುತ್ತಾರೆ ಎಂದು ಪಾಟೀಲ್ ಹೇಳಿದ್ದಾರೆ. ಬಾಲಾಪರಾಧಿ ನ್ಯಾಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮೇ 21 ರಂದು ಬಂಧಿಸಲ್ಪಟ್ಟ ಅಗರ್ವಾಲ್ಗೆ ಕಳೆದ ತಿಂಗಳು ನ್ಯಾಯಾಲಯ ಜಾಮೀನು ನೀಡಿತ್ತು. ಪೋಷಕರಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣ ಬಿಲ್ಡರ್ ವಿರುದ್ಧ ಮೋಟಾರು ವಾಹನ ಕಾಯ್ದೆ (ಎಂವಿಎ) ಮತ್ತು ಬಾಲನ್ಯಾಯ ಕಾಯ್ದೆ (ಜೆಜೆಎ) ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೂನ್ 25 ರಂದು, ಬಾಂಬೆ ಹೈಕೋರ್ಟ್ ಬಾಲಕನನ್ನು ವೀಕ್ಷಣಾ ಗೃಹದಿಂದ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತು. ಅವನ ಬಂಧನದ ಬಗ್ಗೆ ಬಾಲನ್ಯಾಯ ಮಂಡಳಿಯ (ಜೆಜೆಬಿ) ಆದೇಶವು ಕಾನೂನುಬಾಹಿರವಾಗಿದೆ ಎಂದು ಹೇಳಿತ್ತು.