ಶಿವಮೊಗ್ಗದ ರಾಗಿಗುಡ್ಡದಲ್ಲಿ ಭಾನುವಾರ ಈದ್ ಮಿಲಾದ್ ಮೆರವಣಿಗೆ (Eid milad procession) ಸಂದರ್ಭದಲ್ಲಿ ಗಲಭೆ (Shivamogga Violence) ಸೃಷ್ಟಿಯಾಗಿದೆ. ಸೋಮವಾರ ಇದು ಸ್ವಲ್ಪ ತಣ್ಣಗಾಗಿದ್ದರೂ ಭಯದ ವಾತಾವರಣ ಮುಂದುವರಿದಿದೆ. ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆದಿತ್ತು. ಹಿಂದುಗಳ ಏಳು ಮನೆಗಳ ಮೇಲೆ ದಾಳಿ ನಡೆದಿದೆ. ಮೆರವಣಿಗೆಯಲ್ಲಿ ಬಹಿರಂಗವಾಗಿ ಕತ್ತಿ ಝಳಪಿಸಿದ್ದು ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತಿವೆ. ಜತೆಗೆ ಮಚ್ಚು, ಲಾಂಗುಗಳು ಇದ್ದವು ಎನ್ನುವುದು ಸಾರ್ವಜನಿಕರ ಹೇಳಿಕೆ. ಎರಡು ದಿನದ ಹಿಂದಷ್ಟೇ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಶಾಂತಿಯುತವಾಗಿ ನಡೆದಿದ್ದು ಎಲ್ಲರಿಗೂ ನೆಮ್ಮದಿ ತಂದಿತ್ತು. ಆದರೆ ಭಾನುವಾರ ಈದ್ ಮಿಲಾದ್ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿದ್ದು, ಮೆರವಣಿಗೆಯಲ್ಲಿದ್ದ ಕೆಲ ಕಿಡಿಗೇಡಿಗಳು, ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿಕೊಂಡು, ಕೇವಲ ಹಿಂದೂಗಳ ಮನೆಗಳನ್ನೇ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಕಿಟಕಿ, ಬಾಗಿಲುಗಳು ಕಲ್ಲಿನಿಂದ, ಮಚ್ಚಿನಿಂದ ಜಖಂಗೊಳಿಸಿದ್ದರೆ, ವಾಹನಗಳ ಮೇಲೆ ಕಲ್ಲು ಎತ್ತಿ ಹಾಕಿ ಕ್ರೌರ್ಯ ಮೆರೆದಿದ್ದಾರೆ. ಅಲ್ಲದೇ, ಹಿಂದೂಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ಶಿವಮೊಗ್ಗದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಇದಕ್ಕೆಲ್ಲ ಕಲಶವಿಟ್ಟಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ʼಶಿವಮೊಗ್ಗದಲ್ಲಿ ನಡೆದಿರುವುದು ಸಣ್ಣ ಗಲಾಟೆʼ ಎಂದಿದ್ದಾರೆ. ಈ ಹೇಳಿಕೆ ಹಾಸ್ಯಾಸ್ಪದವೂ ಹೌದು, ಆತಂಕಕಾರಿಯೂ ಹೌದು. ಹಾಗಾದರೆ ʼದೊಡ್ಡ ಗಲಾಟೆʼ ಎನಿಸಬೇಕಾದರೆ ಎಷ್ಟು ಜೀವಗಳಿಗೆ ಹಾನಿಯಾಗಬೇಕು? ಎಷ್ಟು ಜನರಿಗೆ ಗಾಯವಾದರೆ, ಎಷ್ಟು ಮನೆಗಳು ಹೊತ್ತಿ ಉರಿದರೆ ಸರ್ಕಾರ ಅದನ್ನು ʼಗಂಭೀರʼ ಎಂದು ಪರಿಗಣಿಸುತ್ತದೆ? ಈ ಬಗೆಗಿನ ಒಂದು ಪಟ್ಟಿಯನ್ನೂ ಗೃಹ ಸಚಿವರು ತಯಾರು ಮಾಡಿ ಬಹಿರಂಗಗೊಳಿಸುವುದು ಒಳ್ಳೆಯದು; ಮುಂದಾಗಬಹುದಾದ ಗಲಭೆಗಳು ಗಂಭೀರವೋ ಅಲ್ಲವೋ ಎಂದು ನಿರ್ಣಯಿಸಲು ಸುಲಭವಾಗುತ್ತದೆ!
ಮಲೆನಾಡು ಜಿಲ್ಲೆಯಾದ ಶಿವಮೊಗ್ಗದಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಕೋಮು ಸಂಘರ್ಷ ನಡೆಯುತ್ತದೆ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಈ ಸಲ ಕೋಮು ಸಾಮರಸ್ಯ ಕದಡುವ, ಅಶಾಂತಿ ಸೃಷ್ಟಿಸುವ ಉದ್ದೇಶ ಈ ಮೆರವಣಿಗೆಯ ಮುನ್ನವೇ ಕಾರ್ಯಪ್ರವೃತ್ತವಾಗಿರುವುದು ಸ್ಪಷ್ಟ. ಗಲಭೆ ವೇಳೆ ತಲ್ವಾರ್, ಮಚ್ಚುಗಳು ಝಳಪಿಸಲಾಗಿದೆ. ಇವು ಏಕಾಏಕಿ ಮೆರವಣಿಗೆಯ ನಡುವೆ ಸಿದ್ಧತೆಯಿಲ್ಲದೇ ಹೇಗೆ ಬರಲು ಸಾಧ್ಯ? ಪ್ರಮುಖ ಸರ್ಕಲ್ ಒಂದರಲ್ಲಿ ಎರಡು ಅಲಗಿನ ಕತ್ತಿಯ ದೊಡ್ಡದೊಂದು ಪ್ರತಿಕೃತಿ ಇಡಲಾಗಿತ್ತು. ಇದರ ಅರ್ಥವೇನು? ಇದು ಏನನ್ನು ಸಂಕೇತಿಸುತ್ತದೆ? ಈದ್ ಮಿಲಾದ್ ಶಾಂತಿ ಹಾಗೂ ಭ್ರಾತೃತ್ವದ ಹಬ್ಬವೇ ಆಗಿದ್ದರೆ, ಅಲ್ಲಿ ಚೂರಿಯ ಪ್ರತಿಕೃತಿಗೆ ಕೆಲಸವೇನು?
ಈದ್ ಮಿಲಾದ್ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯದ ಕೆಲವು ಪುಂಡರು ಔರಂಗಜೇಬ್ ಬಾವುಟ ಪ್ರದರ್ಶಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈದ್ ಮೆರವಣಿಗೆಯ ಮೇಲೆ ಔರಂಗಜೇಬನಿಗೆ ಏನು ಕೆಲಸ? ಇದರರ್ಥ ಇಷ್ಟೆ, ಔರಂಗಜೇಬ ಬಹಿರಂಗವಾಗಿ ಹಿಂದೂಗಳನ್ನು ʼಕಾಫಿರರುʼ ಅರ್ಥಾತ್ ʼಧರ್ಮದ್ರೋಹಿಗಳುʼ ಎಂದು ಕರೆದಿದ್ದ. ಹಿಂದೂಗಳನ್ನು ದೊಡ್ಡ ಸಂಖ್ಯೆಯಲ್ಲಿ ಇಸ್ಲಾಂಗೆ ಮತಾಂತರ ಮಾಡುವುದಕ್ಕೆ ಪ್ರೇರಣೆ, ಸಹಾಯ ಒದಗಿಸುತ್ತಿದ್ದ. ಇವನ ಆಡಳಿತದ ಕಾಲದಲ್ಲಿ ಲಕ್ಷಾಂತರ ಮಂದಿ ಹಿಂದೂಗಳನ್ನು ಬಲವಂತವಾಗಿ ಮುಸ್ಲಿಮರನ್ನಾಗಿಸಲಾಯಿತು. ಕಾಶಿ, ಮಥುರಾ ಮುಂತಾದ ದೇವಾಲಯ ನಗರಿಗಳನ್ನು ಈತ ನೆಲಸಮ ಮಾಡಿದ. ಕಾಶಿಯಲ್ಲಿ ಈತ ಮಾಡಿದ ಹಾನಿ ಇಂದಿಗೂ ಧಾರ್ಮಿಕ ಹಿಂದೂಗಳನ್ನು ಆಕ್ರೋಶಕ್ಕೊಳಪಡಿಸುತ್ತದೆ. ಇಂಥ ನರರಕ್ಷಾಸನನ್ನು ಮಾದರಿಯಾಗಿ, ಐಕಾನ್ ಆಗಿ ಪ್ರದರ್ಶಿಸುವ ಮೂಲಕ ಇವರು ಯಾವ ಸಂದೇಶ ನೀಡಹೊರಟಿದ್ದಾರೆ?
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ‘ಸ್ವಚ್ಛತೆಯೇ ಸೇವೆ’ ಜನಾಂದೋಲನ ನಿರಂತರವಾಗಿರಲಿ
ಇಷ್ಟೆಲ್ಲ ಕಣ್ಣೆದುರು ನಡೆಯುತ್ತಿದ್ದರೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿದ್ದು ನಾಚಿಕೆಗೇಡಿನ ಸಂಗತಿ. ಶಿವಮೊಗ್ಗದಲ್ಲಿ ಆಗಾಗ ಕೋಮು ಗಲಭೆಗಳು ನಡೆಯುತ್ತಲೇ ಇರುತ್ತವೆ. ಇದರ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ಕೈವಾಡ ಇರುವುದು ಹಗಲಿನಷ್ಟೇ ನಷ್ಟ. ಈ ಹಿಂದೆ ಹರ್ಷ ಎಂಬ ಹಿಂದೂ ಸಂಘಟನೆಯ ಯುವಕನನ್ನು ಅಮಾನುಷವಾಗಿ ಇಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈಗ ದುಷ್ಕರ್ಮಿಗಳು ಎಸ್‌ಪಿ ಮೇಲೆಯೇ ಕಲ್ಲು ತೂರಿದ್ದಾರೆ. ಇನ್ನು ಜನ ಸಾಮಾನ್ಯರ ಕತೆ ಏನು? ರಾಜ್ಯದ ಕಾಂಗ್ರೆಸ್ ಸರಕಾರ ರಾಜಕೀಯ ಕಾರಣಕ್ಕಾಗಿ ಒಂದು ಸಮುದಾಯವನ್ನು ಓಲೈಸುತ್ತಿದೆ, ನಿರ್ದಿಷ್ಟ ಸಮುದಾಯದ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ರಾಜ್ಯ ಸರ್ಕಾರ ತನ್ನ ರಾಜಕೀಯ ಹಿತಾಸಕ್ತಿ, ವೋಟ್ ಬ್ಯಾಂಕ್ ರಾಜಕೀಯ ಪಕ್ಕಕ್ಕಿಟ್ಟು ಗಲಭೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದು ಬೇರೆ ಪ್ರದೇಶಗಳಿಗೂ ವ್ಯಾಪಿಸಬಹುದು. ಗಲಭೆಕೋರರನ್ನು ಮಟ್ಟ ಹಾಕಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು. ಈ ಗಲಭೆಯ ಹಿಂದಿನ ಶಕ್ತಿ ಯಾವುದು, ಇದು ಪೂರ್ವ ಯೋಜಿತವೇ? ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು.