ಪಿಸ್ತೂಲ್, ಬಂದೂಕು ಮುಂತಾದ ಅಕ್ರಮ ಶಸ್ತ್ರಾಸ್ತ್ರಗಳ ಪಿಡುಗು ಕರ್ನಾಟಕ ಸೇರಿದಂತೆ ದೇಶಾದ್ಯಂತ ವ್ಯಾಪಿಸುತ್ತಿದೆ. ಮಚ್ಚು, ಲಾಂಗ್ ಹಿಡಿದು ಪಾತಕ ಕೃತ್ಯ ಎಸಗುತ್ತಿದ್ದ ಪಾತಕಿಗಳು ಈಗ ರಾಜಾರೋಷವಾಗಿ ಪಿಸ್ತೂಲು ತೋರಿಸಿ ಬೆದರಿಸಲಾರಂಭಿಸಿದ್ದಾರೆ. ಗುಂಡು ಹಾರಾಟ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಅಕ್ರಮ ಶಸ್ತ್ರಾಸ್ತ್ರಗಳು ಗಂಭೀರ ಸಮಸ್ಯೆ, ಕಠಿಣ ಕಾನೂನು ಅಗತ್ಯ ಎಂದು ಹೇಳಿದೆ. ಜನರು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿ, ನಡೆಸಿರುವ ಕ್ರೈಂಗಳ ಬಗ್ಗೆ ವಿವಿಧ ರಾಜ್ಯಗಳು ಕೊಟ್ಟ ಅಂಕಿ-ಸಂಖ್ಯೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜ್ಯಗಳು ನೀಡಿದ ಮಾಹಿತಿ ಪ್ರಕಾರ ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಉತ್ತರ ಭಾಗದ ಇತರ ರಾಜ್ಯಗಳಲ್ಲೇ ಈ ಅಕ್ರಮ ಶಸ್ತ್ರಾಸ್ತ್ರ ಅಪರಾಧ ಪ್ರಕರಣಗಳು ಹೆಚ್ಚಿದೆ.
ಸುಪ್ರೀಂ ಕೋರ್ಟ್ ಗಮನಿಸಿರುವಂತೆ, ಇದೊಂದು ಕಳವಳಕಾರಿ ಮತ್ತು ಗಂಭೀರ ಸಮಸ್ಯೆ. ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ನಮ್ಮಲ್ಲಿ ಕಾಯಿದೆ ಇದೆ. ʼಭಾರತೀಯ ಶಸ್ತ್ರಾಸ್ತ್ರ ಕಾಯಿದೆ- 1959ʼರಲ್ಲಿ ಸೂಚಿಸಿರುವಂತೆ, ಸಂಬಂಧಿತ ಪ್ರಾಧಿಕಾರದ ಪರವಾನಗಿ ಹೊಂದಿದ ಬಂದೂಕುಗಳನ್ನು ಹೊಂದಲು ಮಾತ್ರ ಭಾರತೀಯ ಪ್ರಜೆಗೆ ಅವಕಾಶವಿದೆ. ಲೈಸೆನ್ಸ್ ಇಲ್ಲದ ಬಂದೂಕು- ಗನ್ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ತಯಾರಿಸುವುದು, ಹೊಂದಿರುವುದು, ಮಾರುವುದು, ವರ್ಗಾಯಿಸುವುದು, ಪಲ್ಲಟಿಸುವುದು, ಪರೀಕ್ಷಿಸುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ ಮೂರರಿಂದ ಏಳು ವರ್ಷದವರೆಗೆ ಜೈಲುಶಿಕ್ಷೆ ಹಾಗೂ ದಂಡವನ್ನು ವಿಧಿಸಬಹುದು. ಆದರೆ ಕಾಯಿದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಳೆರಕ್ಷಣೆಗೆ ಬಂದೂಕು ಹೊಂದಿದ ರೈತರನ್ನು ಬೆದರಿಸುವುದಕ್ಕೆ ಮಾತ್ರ ಶಸ್ತ್ರಾಸ್ತ್ರ ಕಾಯಿದೆ ಸಮರ್ಥವಾಗಿದೆ. ನಿಜಕ್ಕೂ ಅಕ್ರಮ ಬಂದೂಕು ಹೊಂದಿದ್ದು, ಅವುಗಳನ್ನು ಮಾರಕ ಉದ್ದೇಶಗಳಿಗೆ ಬಳಸುತ್ತಿರುವವರನ್ನು ಶಿಕ್ಷಿಸುವಷ್ಟು ಇದು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಈ ಕಾಯಿದೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಸಾಧ್ಯವಾದರೆ ಇದಕ್ಕೆ ಕೊನೆ ಹಾಡಬಹುದು.
ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರಗಳು ಗಂಭೀರ ಸಮಸ್ಯೆ, ಕಠಿಣ ಕಾನೂನು ಅಗತ್ಯ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸಲಹೆ
ಬಂದೂಕು ಸಂಸ್ಕೃತಿಗೆ ಈಗಲೇ ಕಡಿವಾಣ ಹಾಕದಿದ್ದರೆ ಅಮೆರಿಕದಂಥ ಸನ್ನಿವೇಶ ಇಲ್ಲೂ ಉದ್ಭವವಾಗುವ ದಿನ ದೂರವಿಲ್ಲ. ಏಕೆಂದರೆ ಗನ್‌ಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡುವ ಮತ್ತು ಅಕ್ರಮ ಬಂದೂಕುಗಳಿಗೆ ಕಡಿವಾಣ ಹಾಕದ ಕಾರಣ, ಅಮೆರಿಕದಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಯುವ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದನ್ನೂ ಸುಪ್ರೀಂ ಕೋರ್ಟ್ ಗಮನಿಸಿದೆ. ಅಮೆರಿಕದಲ್ಲಿ ಈ ಭಯಾನಕ ಪರಿಸ್ಥಿತಿ ಯಾಕೆ ಬಂದಿದೆ ಎಂದರೆ, ಅಲ್ಲಿನ ಸಾಂಸಾರಿಕ ಅಸ್ಥಿರತೆಗಳು ಹೆಚ್ಚಿದ್ದು, ಮಾನಸಿಕ ಕ್ಷೋಭೆಯೂ ಹೆಚ್ಚಿದೆ. ಮೊದಲೇ ಮನೋವಿಕಲ್ಪ ಹೊಂದಿದ ವ್ಯಕ್ತಿಗಳಿಗೆ ಸುಲಭವಾಗಿ ಬಂದೂಕುಗಳು ದೊರೆತಾಗ ಅನಾಹುತಕ್ಕೆ ಎಡೆಯಾಗುತ್ತದೆ. ಭಾರತದಲ್ಲಿ ಬಂದೂಕು ಪರವಾನಗಿ ಹೊಂದುವುದು ಅಷ್ಟು ಸುಲಭವಾಗಿಲ್ಲ. ಆದರೆ ಅಕ್ರಮ ಬಂದೂಕುಗಳ ಹಾವಳಿ ಸಾಕಷ್ಟಿದೆ. ಜತೆಗೆ ಮತಾಂಧತೆಯಂತಹ ಮನೋವೈಕಲ್ಯಗಳು ಕೂಡ ಸೇರಿಕೊಂಡುಬಿಟ್ಟರೆ ಅನಾಹುತವೇ ಆಗುವುದು ಖಚಿತ. ದಿನದಿಂದ ದಿನಕ್ಕೆ ಸಮಾಜದಲ್ಲಿ ದ್ವೇಷವೂ ಹೆಚ್ಚುತ್ತಿದೆ; ಹೀಗಾಗಿ ಬಂದೂಕಿನ ದುರ್ಬಳಕೆಯಾಗದು ಎಂದು ಹೇಳುವಂತಿಲ್ಲ. ಒಂದು ದೇಶವನ್ನು ನಾಶ ಮಾಡಲು ಅಲ್ಲಿಗೆ ಮಾದಕ ದ್ರವ್ಯ ಹಾಗೂ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆಗುವಂತೆ ನೋಡಿಕೊಂಡರೆ ಸಾಕು. ದಕ್ಷಿಣ ಅಮೆರಿಕದ ಹಲವು ದೇಶಗಳು ಇಂದು ಇವೆರಡರ ʼಡೆಡ್ಲಿ ಕಾಂಬಿನೇಶನ್ʼನಿಂದಾಗಿ ಸರ್ವನಾಶದ ಅಂಚಿನಲ್ಲಿವೆ. ಇವೆರಡನ್ನೂ ತಡೆಗಟ್ಟುವುದು ಎನ್‌ಐಎಯಂಥ ರಾಷ್ಟ್ರೀಯ ತನಿಖಾ ಸಂಸ್ಥೆಗಳ ಮೊದಲ ಆದ್ಯತೆ ಆಗಬೇಕು. ಅಕ್ರಮ ಶಸ್ತ್ರಾಸ್ತ್ರ ಬಳಕೆ ಮಾಡುವವರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಕಠಿಣ ಕ್ರಮ ಕೈಗೊಳ್ಳಬೇಕು.