ತುಮಕೂರು: ಸಿದ್ದರಾಮಯ್ಯ ಕೊಟ್ಟಿದ್ದು ಬರೀ ಟಿಪ್ಪು ಭಾಗ್ಯ, ಟಿಪ್ಪು ಅಂದರೆ ಅವರು ಪ್ರಾಣ ಬಿಡ್ತಾರೆ. ಟಿಪ್ಪುಗಾಗಿ ಪ್ರಾಣ ಬಿಡೋ ಕಾಂಗ್ರೆಸ್ (Karnataka Elections) ನಮಗೆ ಬೇಕಾಗಿಲ್ಲ: ಹೀಗೆಂದು ಅಬ್ಬರಿಸಿದ್ದಾರೆ ಕಂದಾಯ ಸಚಿವ ಆರ್. ಅಶೋಕ್. ತುಮಕೂರಿನಲ್ಲಿ ಮಾತನಾಡಿದ ಅವರು, ʻʻಸಿದ್ದರಾಮಯ್ಯ ಅವರು ಟಿಪ್ಪು ಭಾಗ್ಯ ಕೊಟ್ಟಿದ್ದಾರೆ, ಟಿಪ್ಪು ಜಯಂತಿ ಮಾಡಿದ್ದಾರೆ. ಟಿಪ್ಪು ಜಯಂತಿ ಮಾಡಿದಾಗ ಕೊಲೆ ಆಯ್ತು. ಇದು ಅವರು ಕೊಟ್ಟಿರುವ ಭಾಗ್ಯʼʼ ಎಂದು ಕಾಲೆಳೆದರು.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪಿಎಫ್‌ಐ ಅಪರಾಧಿಗಳಿಗೆ ಏನೇ ಅಪರಾಧ ಮಾಡುವುದಿದ್ದರೂ ಲೈಸೆನ್ಸ್ ಕೊಟ್ಟ ಹಾಗೆ ಆಯಿತು. ಅವರು ಇನ್ನಷ್ಟು ಗಲಾಟೆ ಮಾಡಲಿ ಅಂತಾನೇ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅವರನ್ನೆಲ್ಲ ಬೀದಿಗೆ ಬಿಡಲಾಯಿತು. ಈಗ ಕೇಂದ್ರ ಸಕಾರ ಪಿಎಫ್‌ಐ ಬ್ಯಾನ್ ಮಾಡುವ ಮೂಲಕ ಅವರೆಲ್ಲರಿಗೆ ಬಿಸಿ ಮುಟ್ಟಿಸಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಎಲ್ಲರ ಪರವಾಗಿದ್ದಾರೆ ಎನ್ನುವುದು ಬರೀ ಸುಳ್ಳು. ಅಲ್ಪಸಂಖ್ಯಾತರು ಅಂದ್ರೆ ಸಾಕು ಅವರಿಗೆ ಅದೇನೋ ಓಲೈಕೆ. ಟಿಪ್ಪು ಅಂದರೆ ಪ್ರಾಣ ಬಿಡ್ತಾರೆʼʼ ಎಂದರು.
ಬೊಮ್ಮಾಯಿ ಬಡಾಯಿ ಕೊಚ್ಚಿಕೊಳ್ಳೋರಲ್ಲ
ʻʻನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿ ಅಲ್ಲ. ಅನ್ನ ಭಾಗ್ಯ ಅಕ್ಕಿಗೆ ಮೋದಿ ಅಕ್ಕಿ ಅಂತ ಹೆಸರು ಇಡುವಂತಹ ಕೆಲಸಕ್ಕೆ ಬೊಮ್ಮಾಯಿ ಅವರು ಹೋಗಿಲ್ಲ. ಬೊಮ್ಮಾಯಿ ಅವರು ಮಾಡಿದ್ದು ರೈತರ ವಿದ್ಯಾನಿಧಿ ಯೋಜನೆ, ನೀರಾವರಿ ಯೋಜನೆ ಕೆಲಸ. ಮನೆ ಮನೆಗೆ ನೀರು ಕೊಡುವ ಕೆಲಸʼʼ ಎಂದರು ಅಶೋಕ್.
ಕಾಂಗ್ರೆಸ್‌ಗೆ ಹೊಟ್ಟೆ ಉರಿ ಜೋರಾಗಿದೆ
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಿಸಿರುವುದು ಕಾಂಗ್ರೆಸ್‌ಗೆ ಭಾರಿ ಸಮಸ್ಯೆಯಾಗಿದೆ. ಕೆಂಪೇ ಗೌಡರ ಪ್ರತಿಮೆ ಸ್ಥಾಪನೆ ಮಾಡಿದ ಮೇಲಂತೂ ಹೊಟ್ಟೆ ಉರಿ ಜೋರಾಗಿದೆ. ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಬರಲ್ಲ ಅನ್ನೋದು ಅವರಿಗೆ ಗೊತ್ತಾಗಿದೆ. ಗುಜರಾತ್ ಎಲೆಕ್ಷನ್ ಆದ ಮೇಲಂತೂ ಕರ್ನಾಟಕದಲ್ಲಿ ಗಂಟು ಮೂಟೆ ಕಟ್ಟಿಕೊಂಡು ಹೋಗೋ ಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ.ʼʼ ಎಂದು ಅಶೋಕ್ ನುಡಿದರು.
ಸರ್ಫ್, ನಿರ್ಮಾ ಎಲ್ಲ ಹಾಕಿ ತೊಳದಾಗಿದೆ!
ʻʻಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷ ಆಗೋಗೂ ಯೋಗ್ಯತೆ ಇಲ್ಲದ ಹಾಗೇ ಆಗಿದೆ. ಕರ್ನಾಟಕದಕ್ಕೂ ಅದೇ ಸ್ಥಿತಿ ಬರುತ್ತದೆ. ಆಮ್ ಆದ್ಮಿ ಪಾರ್ಟಿ ಸರ್ಫ್, ನಿರ್ಮಾ ಎಲ್ಲ ಹಾಕಿ ಕಾಂಗ್ರೆಸನ್ನು ತೊಳೆದಿದೆ. ಕರ್ನಾಟಕದಲ್ಲಿಯೂ ಸಹ ಅದೇ ರೀತಿ ಆಮ್ ಆದ್ಮಿ ಪಾರ್ಟಿ ಕಾಂಗ್ರೆಸನ್ನು ತೊಳೆಯುತ್ತೆʼʼ ಎಂದು ಗೇಲಿ ಮಾಡಿದರು ಅಶೋಕ್.
ಮೋದಿಯವರು ಪ್ರತಿ ೧೫ ದಿನಕ್ಕೆ ಒಮ್ಮೆ ಬರ್ತಾರೆ
ಕರ್ನಾಟಕದಲ್ಲೂ ಗುಜರಾತ್ ಮಾಡೆಲ್ ಜಾರಿ ಬಗ್ಗೆ ಕೇಳಿದಾಗ, ʻʻಗುಜರಾತ್ ಮಾಡೆಲ್ ಗುಜರಾತ್ ಮಾಡೆಲ್ಲೇ. ಕರ್ನಾಟಕ ಮಾಡೆಲ್ ಕರ್ನಾಟಕ ಮಾಡೆಲ್ಲೇ. ಕೇಂದ್ರದ ನಾಯಕರೆಲ್ಲ ರಾಜ್ಯಕ್ಕೆ ಬರ್ತಾರೆ. ಈ ತಿಂಗಳಿನಲ್ಲೇ ನಾಯಕರ ದಂಡು ಬರಲಿದೆ. ಮೋದಿಯವರು ಪ್ರತಿ 15 ದಿನಕ್ಕೆ ಒಂದು ಬಾರಿ ಕರ್ನಾಟಕಕ್ಕೆ ಬರ್ತಾರೆ. ಅಮಿತ್ ಷಾ ಪ್ರತಿ ತಿಂಗಳು ನಾಲ್ಕು ಬಾರಿ ಬರ್ತಾರೆ. ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿಕೊಂಡು ಕಾರ್ಯತಂತ್ರ ರೂಪಿಸುತ್ತಾರೆ ಎಂದು ಹೇಳಿದರು.
ಬಿಜೆಪಿಯ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಬಗ್ಗೆ ಕೇಳಿದಾಗ, ʻಗುತ್ತಿಗೆದಾರರು ಮಾಡಿದ ಆರೋಪದ ಬಗ್ಗೆ ಪೊಲೀಸ್ ತನಿಖೆ ಆಗಿದೆ. ಬಿ ರಿಪೋರ್ಟ್ ಕೂಡಾ ಆಗಿದೆ. ಅದೆಲ್ಲಾ ಮುಗಿದ ಅಧ್ಯಾಯ. ಟಿಕೆಟ್ ಬಗ್ಗೆ ಪಾರ್ಟಿ ಹೈಕಮಾಂಡ್ ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತದೆ. ನಾವು ಟಿಕೆಟ್ ಕೊಡುವಂತಹ ಮಟ್ಟಕ್ಕೆ ಇನ್ನೂ ಬಂದಿಲ್ಲ. ಈಗ ಗೆಲ್ಲಿಸೋ ಮಟ್ಟಕ್ಕೆ ಬಂದಿದ್ದೀವಿʼʼ ಎಂದು ಹೇಳಿದರು.
ʻʻಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವ ಪ್ರಶ್ನೆಯೇ ಇಲ್ಲ. ಶ್ರೀರಾಮುಲು, ನಾನು, ಮುಖ್ಯಮಂತ್ರಿಗಳು ಎಲ್ಲಾರು ಸೇರಿ ಜನಾರ್ದನ ರೆಡ್ಡಿ ಜೊತೆ ಮಾತಾಡಿದ್ದೀವಿ. ಅವೆಲ್ಲಾ ಶುದ್ಧ ಸುಳ್ಳು. ಅವರು ಹಿಂದೆಯೂ ಬಿಜೆಪಿಗೆ ಬೆಂಬಲ ಕೊಟ್ಟಿದ್ದರು. ಮುಂದೆಯೂ ಬಿಜೆಪಿಯನ್ನೇ ಬೆಂಬಲಿಸುತ್ತಾರೆʼʼ ಎಂದರು.
ಡಿಕೆಶಿಯದು ಒದ್ದಾಟ ಅಲ್ಲ ಪರದಾಟ
ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಮುನ್ನಡೆಸಲು ಒದ್ದಾಡುತ್ತಿದ್ದಾರೆ ಎಂಬ ಮಾಜಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ʻʻಡಿ.ಕೆ. ಶಿವಕುಮಾರ್ ಅವರದು ಒದ್ದಾಟ ಅಲ್ಲ ಪರದಾಟ. ಒಂದು ಕಡೆ ದಲಿತ ಮುಖ್ಯಮಂತ್ರಿ ಪರಮೇಶ್ವರ್ ಅವರ ತಂಡ. ಇನ್ನೊಂದು ಕಡೆ ಕಾಲು ಎಳೆಯೋಕೆ ಸಿದ್ದರಾಮಯ್ಯ. ಇದರಲ್ಲಿ ಬಹಳ ತೊಂದರೆಗೆ ಸಿಕ್ಕಿರೋದು ಡಿಕೆ ಶಿವಕುಮಾರ್. ಏನೋ ಮಾಡೋಕೆ ಹೋಗಿ ಏನೋ ಮಾಡಿದ್ರು ಹಾಗಾಗಿದೆ ಡಿಕೆ ಶಿವಕುಮಾರ್ ಸ್ಥಿತಿʼʼ ಎಂದ ಅಶೋಕ್, ʻʻಪರಮೇಶ್ವರ್ ಹೇಳಿರೋದು ಸತ್ಯ. ಹಿಂದೆ ಪರಮೇಶ್ವರ್ ಸೋಲಿಸಿದವರು ಯಾರು ಅಂತ ಎಲ್ಲರಿಗೂ ಗೊತ್ತು. ಈಗ ಕಾಂಗ್ರೆಸ್ ಸೋಲಿಸೋಕೆ ಬಿಜೆಪಿ ಬೇಡ. ಅವರೇ ಸಾಕುʼʼ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ನಿಲ್ಲೋಕೆ ಜಾಗವೇ ಇಲ್ಲ!
ʻʻಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ನಿಲ್ಲುವುದಕ್ಕೆ ಇಡೀ ಕರ್ನಾಟಕದಲ್ಲಿ ಒಂದೇ ಒಂದು ಕ್ಷೇತ್ರ ಸಿಕ್ಕಿಲ್ಲ. ಕೋಲಾರಕ್ಕೆ ಹೋದ್ರು, ಮೈಸೂರಿಗೆ ಬಂದ್ರು. ಉತ್ತರ ಕರ್ನಾಟಕಕ್ಕೆ ಹೋದ್ರು. ಇವತ್ತು ಎಲ್ಲೂ ಇಲ್ದೆ ಅಲಿತಿದ್ದಾರೆ. ಅವರಿಗೆ ಬಿಜೆಪಿ ಭಯವಲ್ಲ, ಕಾಂಗ್ರೆಸ್‌ನವರೇ ನನ್ನ ಸೋಲಿಸ್ತಾರೆ ಅಂತ ಭಯ. ಯಾಕಂದ್ರೆ ನಾನು ಪರಮೇಶ್ವರ್‌ನ ಸೋಲಿಸಿದ್ದೆ. ಈಗ ಪರಮೇಶ್ವರ್ ಟೀಂ ನನ್ನನ್ನು ಸೋಲಿಸ್ತಾರೆ ಅಂತ ಅವರಿಗೆ ಭಯʼʼ ಎಂದರು.
ʻʻಸಿದ್ದರಾಮಯ್ಯ ಸೋತರೆ ನಾನು ಸಿಎಂ ಆಗಬಹುದು ಅಂತ ಡಿ.ಕೆ ಶಿವಕುಮಾರ್ ಕನಸು ಕಾಣುತ್ತಿದ್ದಾರೆʼʼ ಎಂದು ಹೇಳಿದರು ಅಶೋಕ್.
ಇದನ್ನೂ ಓದಿ | Karnataka Elections | ಬಿಜೆಪಿಯಿಂದ ಮತ್ತೊಂದು ಮೆಗಾ ಸಮಾವೇಶ: ಡಿ. 18ರಂದು ನಾನಾ ಪ್ರಕೋಷ್ಠಗಳ ಶಕ್ತಿ ಸಂಗಮ