Site icon Vistara News

ವಿಸ್ತಾರ ಸಂಪಾದಕೀಯ: ಸುಶಿಕ್ಷಿತರ ದೇಶಗಳಲ್ಲೂ ವರ್ಣಭೇದ ಜೀವಂತ, ಮನಕಲಕುವ ವಿಡಿಯೋವೇ ದೃಷ್ಟಾಂತ

Stop Racism

ಐರ್ಲೆಂಡ್‌ನಲ್ಲಿ ಕಳೆದ ವರ್ಷ ನಡೆದ ಮನಕಲಕುವಂಥ ವರ್ಣಭೇದದ ಘಟನೆಯೊಂದು ಇದೀಗ ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆಯುತ್ತಿದೆ. ಜಿಮ್ನಾಸ್ಟಿಕ್ಸ್ ಐರ್ಲೆಂಡ್‌ನಲ್ಲಿ ಪದಕ ಪ್ರದಾನ ಸಮಾರಂಭದ ವೇಳೆ ಘಟನೆ ನಡೆದಿದೆ. ಇದು ನಡೆದದ್ದು ಕಳೆದ ವರ್ಷವಾದರೂ, ವಿಡಿಯೋ ಇದೀಗ ವೈರಲ್‌ ಆಗಿದೆ. ಜಿಮ್ನಾಸ್ಟಿಕ್ಸ್‌ನಲ್ಲಿ ಪದಕ ಗೆದ್ದ ಹುಡುಗಿಯರನ್ನು ಸಾಲಾಗಿ ನಿಲ್ಲಿಸಲಾಗಿದ್ದು, ಅಷ್ಟು ಮಂದಿಯಲ್ಲಿ ಒಬ್ಬಾಕೆ ಕರಿಯ ವರ್ಣದ ಹುಡುಗಿಯೂ ಇದ್ದಳು. ಪದಕ ನೀಡುತ್ತಿದ್ದ ಗಣ್ಯವ್ಯಕ್ತಿ ಶ್ವೇತವರ್ಣೀಯ ಹುಡುಗಿಯರೆಲ್ಲರ ಕೊರಳಿಗೂ ಪದಕ ಹಾಕಿ, ಕಪ್ಪುಬಣ್ಣದವಳನ್ನು ತಿರುಗಿಯೂ ನೋಡದೆ ಹೊರಟುಹೋಗುತ್ತಾಳೆ. ಪದಕವಂಚಿತ ಹುಡುಗಿ ತಾನೇನು ತಪ್ಪು ಮಾಡಿದೆ ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿ ನೋಡುತ್ತಿರುವ ವಿಡಿಯೋ ಮನ ಕಲಕುವಂತಿದೆ. ಬಾಲೆಯನ್ನು ಕಡೆಗಣಿಸಿದ ವಿಡಿಯೋ ವೈರಲ್ ಆದ ನಂತರ ವರ್ಣಭೇದ ನೀತಿ ವಿವಾದಕ್ಕೆ ಸಿಲುಕಿದೆ. ಒಂದು ವರ್ಷದ ಹಿಂದೆ ನಡೆದ ಘಟನೆ ಇದೀಗ ವಿವಾದಕ್ಕೆ ಒಳಗಾಗಿದ್ದು ಐರ್ಲೆಂಡ್​ನ ಜಿಮ್ನಾಸ್ಟಿಕ್ಸ್​ ಸಂಸ್ಥೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದೆ. ಕಳೆದ ವರ್ಷವೇ ಈ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ಕ್ರೀಡಾ ಸಂಸ್ಥೆ ಹೇಳಿಕೊಂಡಿದೆ. ಆದರೆ, ಬಾಲಕಿಯ ಕುಟುಂಬವು ಇನ್ನೂ ಕ್ಷಮೆಯಾಚನೆಯನ್ನು ಸ್ವೀಕರಿಸಿಲ್ಲ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.

ಇದು ಎಂಥ ಮನಸ್ಥಿತಿ? ಸಾಲಿನಲ್ಲಿ ನಿಂತ ಪುಟಾಣಿ ಮಕ್ಕಳನ್ನು ಮೈಬಣ್ಣದಿಂದ ಅಳೆದು ಭೇದವನ್ನು ಮಾಡುವುದಕ್ಕೆ ಮುಂದಾಗುವ ಮನಸಾದರೂ ಎಂಥದು? ಇದರ ಮೂಲ ಎಲ್ಲಿದೆ? ವರ್ಣಭೇದ ನಡವಳಿಕೆಯ ವಿರುದ್ಧ ಹಲವು ಮಹನೀಯರು ಹೋರಾಟ ಮಾಡಿದ ಹೊರತಾಗಿಯೂ ಆ ಮನಸ್ಥಿತಿಯನ್ನು ಬುಡಸಮೇತ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಐರ್ಲೆಂಡೇನೂ ಅಶಿಕ್ಷಿತರ ನಾಡಲ್ಲ. ಹಿಂದೆ ಹಲವು ದೇಶಗಳನ್ನು ಆಳಿದ, ಕಾಲನಿ ದೇಶಗಳಿಗೆಲ್ಲಾ ಇಂಗ್ಲಿಷ್‌ ಶಿಕ್ಷಣವನ್ನು ನೀಡಿದ, ಆ ಮೂಲಕ ಜಗತ್ತನ್ನು ಉದ್ಧಾರ ಮಾಡಿದ್ದೇವೆ ಎಂದುಕೊಂಡ ವಸಾಹತುಶಾಹಿ ಬುದ್ಧಿವಂತರ ಪೀಳಿಗೆಯವರೇ ಅಲ್ಲಿರುವುದು. ಜಗತ್ತಿಗೆ ಅತ್ಯುತ್ತಮ ಕಾವ್ಯವನ್ನು ನೀಡಿದ ಡಬ್ಲ್ಯು.ಬಿ. ಯೇಟ್ಸ್‌ನಂಥ ಕವಿಗಳನ್ನೂ ನೀಡಿದ ದೇಶವಿದು. ಆದರೆ ವರ್ಣಭೇದದ ಮನಸ್ಥಿತಿಯೊಂದು ಆಳದಲ್ಲಿ ಇಲ್ಲಿ ಜೀವಂತವಾಗಿದೆ. ಶ್ವೇತವರ್ಣೀಯರ ಮೇಲರಿಮೆ ಹಾಗೂ ಅಹಂಕಾರಗಳು ಈ ವರ್ಣಭೇದವನ್ನು ಸೃಷ್ಟಿಸಿ ಮುಂದುವರಿಸಿ ಪೋಷಿಸುತ್ತಿದೆ.

ಶ್ವೇತವರ್ಣೀಯರು ತಾವು ಈ ಜಗತ್ತಿಗೆ ಸಮಾನತೆ, ಮಾನವ ಹಕ್ಕುಗಳು, ಜಾತ್ಯತೀತತೆ ಇತ್ಯಾದಿಗಳ ಪಾಠ ಹೇಳುವವರು ಎಂದೇ ಹೇಳಿಕೊಳ್ಳುತ್ತಾರೆ. ಆದರೆ ಕರಿಯ ಬಣ್ಣದ ಆಫ್ರಿಕನ್‌ ಅಮೆರಿಕನ್ನರ ಮೇಲೆ, ಏಷ್ಯನ್ನರು ಹಾಗೂ ಅರಬ್‌ ಮೂಲದವರ ಮೇಲೆ ದೌರ್ಜನ್ಯ ಮುಂದುವರಿದೇ ಇದೆ. ಬಿಳಿಯೇ ಶ್ರೇಷ್ಠ ಎಂಬ ಮನಸ್ಥಿತಿ ಹೊಂದಿರುವ ಮಂದಿ ಕಪ್ಪು ಬಣ್ಣದವರಿಗೆ ಅಗೌರವ ತೋರುವುದನ್ನು (Racial Abuse) ಮುಂದುವರಿಸಿದ್ದಾರೆ. ಕೆಲವು ಅಂಕಿ ಅಂಶಗಳನ್ನು ನಾವಿಲ್ಲಿ ಗಮನಿಸಬಹುದು. ಬ್ರಿಟನ್‌ನಲ್ಲಿ 2021-22ರ ಅವಧಿಯಲ್ಲಿ ನಡೆದ ವರ್ಣಭೇದದ ಹಿನ್ನೆಲೆಯ ದ್ವೇಷದ ಅಪರಾಧಗಳ ಘಟನೆಗಳು 1,09,843. ಇದು ಗಾಬರಿಗೊಳಿಸುವಂಥ ಪ್ರಮಾಣ ಎಂದು ಹೇಳಲೇಬೇಕಿಲ್ಲ. ʼಸ್ಟಾಪ್‌ ಹೇಟ್‌ ಕ್ರೈಂʼ ಎಂಬ ಅಭಿಯಾನವು 1995ರಿಂದಲೂ ಇಂಥ ದ್ವೇಷದ ಅಪರಾಧಗಳನ್ನು ತಡೆಯಲು ಪ್ರಯತ್ನ ಮಾಡುತ್ತಲೇ ಇದೆ. ಆದರೆ ವಿಫಲವಾಗಿದೆ.

ಇನ್ನು ಶ್ವೇತವರ್ಣೀಯರ ಸಾರ್ವಭೌಮನಂತಿರುವ ಅಮೆರಿಕದ ಕತೆ ಹೇಳುವುದೇ ಬೇಡ. ಅಲ್ಲಿನ ಮೂಲನಿವಾಸಿಗಳನ್ನು ಸರ್ವನಾಶ ಮಾಡಿದ ಮೇಲೆಯೇ ಯುರೋಪಿನ ಶ್ವೇತವರ್ಣೀಯರು ಸಾಮ್ರಾಜ್ಯ ಸ್ಥಾಪಿಸಿದ್ದು. ಅದೇ ಮನೋಭಾವವೇ 19ನೇ ಶತಮಾನದ ಮಧ್ಯಭಾಗದವರೆಗೂ ಮುಂದುವರಿಯಿತು; ಕಪ್ಪುವರ್ಣೀಯರನ್ನು ಗುಲಾಮರಾಗಿ ನಡೆಸಿಕೊಳ್ಳುವ ಪದ್ಧತಿ 1863ರವರೆಗೂ ಕಾನೂನುಬದ್ಧವಾಗಿಯೇ ಜೀವಂತವಾಗಿತ್ತು. ಅಬ್ರಹಾಂ ಲಿಂಕನ್‌ನ ಪ್ರಯತ್ನದಿಂದ ಗುಲಾಮರು ಮುಕ್ತರಾದರೂ, ವರ್ಣಭೇದ ಮಾತ್ರ ಇನ್ನಷ್ಟು ದ್ವೇಷದಿಂದ ಮುಂದುವರಿಯಿತು. ಅದನ್ನು ಇಂದಿಗೂ ಅಲ್ಲಿನ ಪೊಲೀಸರ ನಡತೆಯಲ್ಲಿ ಕಾಣಬಹುದು. 2020ರಲ್ಲಿ ಮಿನ್ನಿಯಾಪೋಲಿಸ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯನ್ನು ಪೊಲೀಸನೊಬ್ಬ ಹತ್ಯೆ ಮಾಡಿದ ಪ್ರಕರಣ ಅಮೆರಿಕದಲ್ಲಿ ವರ್ಣಭೇದ ನೀತಿಯ ಮೇಲೆ ಮತ್ತಷ್ಟು ಬೆಳಕು ಚೆಲ್ಲಿತು. ʼಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌ʼ ಎಂಬ ಅಭಿಯಾನ ಸಜೀವಗೊಳ್ಳುವಂತೆ ಮಾಡಿತು. ಈ ಚಳವಳಿ ಯುರೋಪ್‌ ಮತ್ತಿತರ ದೇಶಗಳಿಗೂ ದೊಡ್ಡ ಪ್ರಮಾಣದಲ್ಲಿ ಹಬ್ಬಿತು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜನತಾ ದರ್ಶನ ಪ್ರಶಂಸಾರ್ಹ, ಪರಿಹಾರವೂ ದೊರೆಯಲಿ

ವರ್ಣಭೇದ ಆಚರಣೆಯ ವಿರುದ್ಧ ಇಂದು ಸಾಕಷ್ಟು ಕಾನೂನುಗಳಿವೆ. ಆದರೆ ಯಾವುದೇ ಕಾನೂನಿಗಂತಲೂ ಶಿಕ್ಷಣ, ಸಹಬಾಳ್ವೆ ಹಾಗೂ ಹೃದಯ ಪರಿವರ್ತನೆಯೇ ಈ ನಿಟ್ಟಿನಲ್ಲಿ ಪರಿಣಾಮಕಾರಿ ಎನಿಸುತ್ತದೆ. ತನ್ನ ಜತೆಗಿರುವ ಮನುಷ್ಯ ತನ್ನಂತೆಯೇ ಇರುವವನು ಎಂದು ಅರಿತುಕೊಂಡಾಗ ಈ ಕೀಳರಿಮೆ ಮೇಲರಿಮೆಗಳು ಇಲ್ಲವಾಗುತ್ತವೆ. ನಮ್ಮಲ್ಲಿನ ಜಾತಿಪದ್ಧತಿಯಲ್ಲಿ ಕಾಣಿಸಿಕೊಳ್ಳುವ ಮೇಲುಕೀಳು ಮನೋಭಾವವೂ ವರ್ಣಭೇದಕ್ಕೆ ಸಮಾನವಾಗಿದೆ. ನಮ್ಮಲ್ಲಿನ ಅಸ್ಪೃಶ್ಯತೆ, ಬಹಿಷ್ಕಾರಗಳ ಪದ್ಧತಿಗಳೂ ಅಷ್ಟೇ ನೀಚವಾದವುಗಳು. ಲೋಕಕ್ಕೆ ಪಾಠ ಹೇಳುವವರು ತಾವು ಮೊದಲು ಮಾನವೀಯತೆಯ ಪಾಠ ಕಲಿಯಬೇಕು. ಅವರನ್ನು ನೋಡಿ ನಾವೂ ಅಂಥ ತಪ್ಪುಗಳನ್ನು ಮಾಡದಂತೆ ಪಾಠ ಕಲಿಯಬಹುದು. ಸುಧಾರಣೆಯ ಹಾದಿಯಲ್ಲಿ ಮುನ್ನಡೆಯಬೇಕು; ಹಿಂದಡಿಯಿಡಬಾರ

Exit mobile version