Site icon Vistara News

ವಿಸ್ತಾರ ಸಂಪಾದಕೀಯ: ಫ್ರಾನ್ಸ್‌ ಜತೆ ರಫೇಲ್‌ ಡೀಲ್‌ ಮುಂದುವರಿಕೆ, ಭಾರತದ ರಕ್ಷಣಾ ವ್ಯೂಹಕ್ಕೆ ಮತ್ತಷ್ಟು ಬಲ

Rafael jet

ಇದೇ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಫ್ರಾನ್ಸ್‌ನ ರಾಷ್ಟ್ರೀಯ ದಿನದಂದು ಅವರು ಅಲ್ಲಿನ ಅಧ್ಯಕ್ಷರ ಆಹ್ವಾನದ ನಿಮಿತ್ತ ಆ ದೇಶಕ್ಕೆ ಭೇಟಿ ನೀಡಲಿದ್ದಾರೆ. ಇದರ ಜತೆಗೇ, ಭಾರತ ಸರ್ಕಾರವು ಮತ್ತೆ ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. ಈ ಹಿಂದೆ ಭಾರತವು ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು. ಈಗ ಮತ್ತೆ 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್‌ ಜತೆಗೆ ಭಾರತ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ರಫೇಲ್ ಯುದ್ಧ ವಿಮಾನಗಳ ಜತೆಗೇ ಮೂರು ಸ್ಕಾರ್ಪೀನ್ ವರ್ಗದ ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ಕೂಡ ಭಾರತ ಖರೀದಿಸಲಿದೆ.

ಯುರೋಪ್‌ನಲ್ಲಿ ಹಲವು ದೇಶಗಳ ಜತೆಗೆ ಭಾರತವು ಮಧುರ ಬಾಂಧವ್ಯವನ್ನು ಹೊಂದಿದೆ. ಜರ್ಮನಿಯ ಅನೇಕ ವಿದ್ವಾಂಸರು ಭಾರತದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಸಂಸ್ಕೃತದ ಜ್ಞಾನಭಂಡಾರವೇ ಅಲ್ಲಿದೆ. ಬ್ರಿಟನ್ ಅಂತೂ ಭಾರತದ ಜತೆಗೆ ವಸಾಹತು ಹಿನ್ನೆಲೆಯೊಂದಿಗೆ ಎಲ್ಲ ಬಗೆಯ ಸಾಂಸ್ಕೃತಿಕ ಕೊಡು ಕೊಳ್ಳುವಿಕೆ ಹೊಂದಿದೆ. ಇಟಲಿ, ಪೋರ್ಚುಗಲ್‌, ಸ್ಪೇನ್‌ ಮುಂತಾದವುಗಳು ಕೂಡ ವಸಾಹತು ಸಂಬಂಧ ಹೊಂದಿವೆ. ಹಾಗೆಯೇ ಫ್ರಾನ್ಸ್‌ ಕಲೆ- ಸಾಹಿತ್ಯ- ಸಾಂಸ್ಕೃತಿಕತೆಯ ಬೀಡು. ಇಲ್ಲಿನ ಕಲೆ- ಸಂಸ್ಕೃತಿಗಳು ಆಧುನಿಕ ಸಮಾಜದ ಮೇಲೆ ತುಂಬಾ ಪ್ರಭಾವ ಬೀರಿವೆ. ಹಾಗೆಯೇ ಫ್ರಾನ್ಸ್‌ ಇಂದು ಯುರೋಪ್‌ನ ಬಲಿಷ್ಠ ದೇಶಗಳಲ್ಲಿ ಒಂದು. ಈ ದೇಶದೊಂದಿಗೆ ನಾವು ಹೊಂದುವ ಮೈತ್ರಿಯು ನಮಗೆ ಎಲ್ಲ ಬಗೆಯಲ್ಲಿಯೂ ಪ್ರಯೋಜನಕಾರಿಯಾಗಬಲ್ಲದು. ಈ ನಿಟ್ಟಿನಲ್ಲಿ ಮೋದಿಯವರ ಪ್ರವಾಸ ಧನಾತ್ಮಕ ಪ್ರಭಾವ ಬೀರಲಿದೆ.

ಪ್ರಧಾನಿ ಮೋದಿಯವರ ಈ ಸಲದ ಫ್ರಾನ್ಸ್ ಭೇಟಿಯು ಉಭಯ ದೇಶಗಳ ವ್ಯೂಹಾತ್ಮಕ ಸಹಯೋಗ, ವೈಜ್ಞಾನಿಕ ಪ್ರಗತಿ, ಸಾಂಸ್ಕೃತಿಕ ವಿನಿಮಯ ಮತ್ತು ಆರ್ಥಿಕ ಸಹಕಾರವನ್ನು ಬಲಪಡಿಸುವ ನಿರೀಕ್ಷೆಯನ್ನು ಹೊಂದಿದೆ. ಎರಡೂ ದೇಶಗಳಿಗೂ ಈ ಭೇಟಿಯ ಬಗ್ಗೆ ಮಹತ್ವಾಕಾಂಕ್ಷೆಗಳಿವೆ. ರಕ್ಷಣಾ ಸಹಕಾರ ಇವುಗಳಲ್ಲಿ ಒಂದು. ದೊಡ್ಡ ರಕ್ಷಣಾ ಒಪ್ಪಂದಗಳು ಆಗಬಹುದು. ಭೇಟಿಗೆ ಮುಂಚಿತವಾಗಿಯೇ ಆಗಿರುವ ರಫೇಲ್‌ ಡೀಲ್‌ ಹಾಗೂ ಸಬ್‌ಮರೀನ್‌ ಡೀಲ್‌ನಿಂದ ನಮ್ಮ ವಾಯುಪಡೆ ಹಾಗೂ ನೌಕಾಪಡೆಗಳೆರಡೂ ಹೆಚ್ಚಿನ ಬಲ ಪಡೆಯಲಿವೆ. ದೇಶದ ಸುತ್ತಮುತ್ತಲಿನ ಭದ್ರತಾ ಸವಾಲುಗಳ ದೃಷ್ಟಿಯಿಂದ ಭಾರತೀಯ ನೌಕಾಪಡೆಯು ಈ ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಹೊಂದುವುದು ಸರಿಯಾಗಿದೆ. ವಿಮಾನಗಳನ್ನು ಹೊತ್ತೊಯ್ಯುವ ಐಎನ್ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್ ಯುದ್ಧನೌಕೆಗಳಿಗೆ ರಫೇಲ್ ಯುದ್ಧವಿಮಾನಗಳ ಅಗತ್ಯವಿದೆ. ಸಬ್‌ಮರೀನ್‌ಗಳು ಆಧುನಿಕ ಯುದ್ಧತಂತ್ರದ ಅನಿವಾರ್ಯ ಅಂಗಗಳು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜೈನ ಮುನಿ ಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಯಲಿ

ವ್ಯಾಪಾರದಲ್ಲಿ ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಆಯಾಮಗಳು ಪ್ರಧಾನಿ ಮೋದಿಯವರ ಭೇಟಿಯಿಂದ ಆಗಬಹುದು. ಭಾರತ ಮತ್ತು ಫ್ರಾನ್ಸ್ ಭಯೋತ್ಪಾದನೆಯ ವಿರುದ್ಧದ ಹೋರಾಟದ ವಿಚಾರದಲ್ಲಿ ಮತ್ತು ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಮಿತ್ರರಾಷ್ಟ್ರಗಳಾಗಿವೆ. ಭಾರತದ ವಿರೋಧಿಗಳಿಗೆ ಶಸ್ತ್ರಾಸ್ತ್ರ ಅಥವಾ ವೇದಿಕೆಗಳನ್ನು ಫ್ರಾನ್ಸ್ ಒದಗಿಸುವುದಿಲ್ಲ. ವಿಶ್ವಸಂಸ್ಥೆಯಲ್ಲಿ ಸದಾ ಭಾರತದ ಪರವಾಗಿ ನಿಂತಿದೆ. ಅದು ಕಾಶ್ಮೀರದ ವಿಚಾರ ಇರಬಹುದು, ಚೀನಾದಿಂದ ಭಾರತಕ್ಕೆ ಉಂಟಾಗುತ್ತಿರುವ ಕಿರಿಕಿರಿ ಇರಬಹುದು, ಭಯೋತ್ಪಾದಕ ದಾಳಿಗಳೇ ಇರಬಹುದು. ಇಂಥ ಆಳವಾದ ರಾಜಕೀಯ ಸಂಬಂಧಗಳನ್ನು ಹೊಂದಿರುವ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟಿನ ಪ್ರಮಾಣ ಕೂಡ ದೊಡ್ಡದೇ ಆಗಿದೆ. ಭಾರತದಿಂದ ಫ್ರಾನ್ಸ್‌ಗೆ 60,800 ಕೋಟಿ ರೂ. ಮೌಲ್ಯದ ಸಾಮಗ್ರಿಗಳ ರಫ್ತು ನಡೆಯುತ್ತಿದ್ದರೆ, 53,350 ಕೋಟಿ ರೂ.ಗಳ ಮೌಲ್ಯದ ಆಮದು ಕೂಡ ನಡೆಯುತ್ತಿದೆ. ಹೀಗಾಗಿ ಉಭಯ ದೇಶಗಳ ವಾಣಿಜ್ಯ ಹಿತಾಸಕ್ತಿಯೂ ದೊಡ್ಡದೇ ಆಗಿದೆ. ಪ್ರಧಾನಿ ಮೋದಿಯವರ ಫ್ರಾನ್ಸ್‌ ಭೇಟಿಯು ಈ ಎಲ್ಲ ಆಶಯಗಳಿಂದಲೂ ಇನ್ನಷ್ಟು ಒಳಿತನ್ನು ಸಾಧಿಸಲಿ ಎಂದು ಹಾರೈಸೋಣ.

Exit mobile version