Site icon Vistara News

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Rahul Gandhi

ಶಿವಮೊಗ್ಗ: ಶಿವಮೊಗ್ಗ (Shivamogga) ನಗರಕ್ಕೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ನೀಡಿ ಲೋಕಸಭೆ ಚುನಾವಣೆ (Lok sabha Election 2024) ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಶಿವಮೊಗ್ಗದ ಕೈ ಅಭ್ಯರ್ಥಿ ಪರ ಮತಯಾಚನೆ ನಡೆಸಲಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರ (Prajwal revanna case) ಹಗರಣದ ವಿಚಾರವನ್ನು ನಿನ್ನೆ ಸೋಶಿಯಲ್‌ ಮೀಡಿಯಾದಲ್ಲಿ ಎತ್ತಿರುವ ರಾಹುಲ್‌ ಗಾಂಧಿ, ಇಂದು ಸಾರ್ವಜನಿಕ ಭಾಷಣದಲ್ಲಿಯೂ ಪ್ರಸ್ತಾಪಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ (congress candidate) ಗೀತಾ ಶಿವರಾಜ್ ಕುಮಾರ್ (Geetha Shiv rajkumar) ಪರ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದು, ಅವರ ಜೊತೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಭಾಗವಹಿಸಲಿದ್ದಾರೆ.

ಶಿವಮೊಗ್ಗ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಕ್ಷೇತ್ರ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಕುಟುಂಬದ ಮಗಳನ್ನು ಕಣಕ್ಕಿಳಿಸಿದ್ದು, ಪ್ರಚಾರಕ್ಕೆ ಜನಪ್ರಿಯ ಸ್ಟಾರ್‌ ಶಿವರಾಜ್‌ಕುಮಾರ್‌ ಕೂಡ ಆಗಮಿಸಿ ಪತ್ನಿಯ ಪರ ಬಿರುಗಾಳಿಯಂತೆ ಪ್ರಚಾರ ನಡೆಸುತ್ತಿದ್ದಾರೆ. ಸ್ವತಃ ಸಚಿವ ಮಧು ಬಂಗಾರಪ್ಪ, ತಮ್ಮ ಸೋದರಿಯ ಗೆಲುವಿಗಾಗಿ ಟೊಂಕ ಕಟ್ಟಿ ನಿಂತುಬಿಟ್ಟಿದ್ದಾರೆ. ಇನ್ನೊಂದು ಕಡೆ ಬಿಜೆಪಿಯ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಈಶ್ವರಪ್ಪನವರ ಬಂಡಾಯದಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಮತ್ತೊಂದು ಕಡೆ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣದಿಂದಾಗಿ ಬಿಜೆಪಿ ಹಾಗೂ ಜೆಡಿಎಸ್‌ ಮುಜುಗರ ಅನುಭವಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಹೋದಲ್ಲಿ ಬಂದಲ್ಲಿ ಈ ವಿಚಾರ ಎತ್ತಿ ಅಣಕಿಸುತ್ತಿದ್ದಾರೆ. ರಾಹುಲ್ ರಾಜ್ಯಕ್ಕೆ ಬಂದಾಗ ಪ್ರಚಾರದ ಕಣದಲ್ಲಿ ಈ ವಿಚಾರವನ್ನು ಎತ್ತಿ ಟೀಕಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಕಾಂಗ್ರೆಸ್‌ನ ಚುನಾವಣೆ ಪ್ರಚಾರ ಸಭೆಗಳಲ್ಲಿ ಈಗ ಪ್ರಜ್ವಲ್ ಲೈಂಗಿಕ ಹಗರಣ ಹಾಟ್ ಟಾಪಿಕ್ ಆಗಿದೆ. ಪ್ರಜ್ವಲ್ ವಿಚಾರವನ್ನೆ ಬಹುದೊಡ್ಡ ಅಸ್ತ್ರವಾಗಿ ಎಐಸಿಸಿ ಪ್ರಯೋಗಿಸುತ್ತಿದೆ. ರಾಹುಲ್ ಗಾಂಧಿ ಇಂದಿನ ಭಾಷಣದಲ್ಲಿಯೂ ಪ್ರಜ್ವಲ್ ದೌರ್ಜನ್ಯ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಕಳೆದ ಸೋಮವಾರವಷ್ಟೇ ಪ್ರಜ್ವಲ್ ರೇವಣ್ಣ ವಿಚಾರವನ್ನು ಪ್ರಿಯಾಂಕಾ ಗಾಂಧಿ ಪ್ರಸ್ತಾಪ ಮಾಡಿದ್ದರು. ಪ್ರಜ್ವಲ್ ಪ್ರಕರಣ ಪ್ರಸ್ತಾಪ ‌ಮಾಡುವ ಮೂಲಕ ಪಿಎಂ ಮೋದಿಗೆ ಕುಟುಕಿದ್ದರು.

ಅಲ್ಲದೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮೋದಿಯವರನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. “ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧ ನಡೆದ ಘೋರ ಅಪರಾಧಗಳ ಬಗ್ಗೆ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಪ್ರಧಾನಿ ಉತ್ತರಿಸಬೇಕು. ಎಲ್ಲ ಗೊತ್ತಿದ್ದರೂ ಕೇವಲ ಮತಕ್ಕಾಗಿ ನೂರಾರು ಹೆಣ್ಣು ಮಕ್ಕಳನ್ನು ಶೋಷಿಸುವ ರಾಕ್ಷಸನ ಪರ ಪ್ರಚಾರ ಮಾಡಿದ್ದು ಯಾಕೆ? ಅಷ್ಟಕ್ಕೂ, ಇಷ್ಟು ದೊಡ್ಡ ಕ್ರಿಮಿನಲ್ ದೇಶದಿಂದ ಹೇಗೆ ಸುಲಭವಾಗಿ ಹೇಗೆ ತಪ್ಪಿಸಿಕೊಂಡ? ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ, ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣು ಮಕ್ಕಳ ಪೀಡಕರಿಗೆ ಬೆಂಬಲ ನೀಡಲಾಗುತ್ತಿದೆ. ಪ್ರಧಾನಿ ಮೌನ ಬೆಂಬಲ ನೀಡುತ್ತಿರುವುದು ದೇಶಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬಿದಂತಾಗುತ್ತಿದೆ. ಮೋದಿಯವರ ʼರಾಜಕೀಯ ಕುಟುಂಬದ’ ಭಾಗವಾಗುವುದು ಅಪರಾಧಿಗಳಿಗೆ ʼಭದ್ರತೆಯ ಖಾತರಿ’ ಆಗಿದೆಯೇ?” ಎಂದು ರಾಗಾ ಪ್ರಶ್ನಿಸಿದ್ದರು.

ಇಂದು ನಗರದ ಪ್ರೀಡಂ ಪಾರ್ಕ್‌ನ ಅಲ್ಲಮಪ್ರಭು ಮೈದಾನದಲ್ಲಿ ಕಾಂಗ್ರೆಸ್‌ನ ಬೃಹತ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಸಚಿವ ಮಧು ಬಂಗಾರಪ್ಪ ಉಸ್ತುವಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಶಿವಮೊಗ್ಗ ನಗರದಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಯಲಿದೆ. ಗೀತಾರನ್ನು ಗೆಲ್ಲಿಸಲು ಪಣ ತೊಟ್ಟಿರುವ ನಟ ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಕ್ಷೇತ್ರದ ತುಂಬಾ ಓಡಾಡಿ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಇಂದು ರಾಹುಲ್‌ ಗಾಂಧಿ ಭಾಗವಹಿಸಲಿರುವ ಪ್ರಜಾ ಧ್ವನಿ ಯಾತ್ರೆ ನಗರದ ಅಲ್ಲಮ ಪ್ರಭು ಮೈದಾನದಲ್ಲಿ ಬೆಳಿಗ್ಗೆ 11:30ರಿಂದ ಶುರುವಾಗಲಿದೆ. ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೃಹತ್ ವೇದಿಕೆ ನಿರ್ಮಾಣ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: Congress Candidate List: ಅಮೇಥಿ, ರಾಯ್‌ ಬರೇಲಿಯಿಂದ ರಾಹುಲ್‌, ಪ್ರಿಯಾಂಕಾ ಸ್ಪರ್ಧಿಸುತ್ತಾರಾ? ಕುತೂಹಲಕ್ಕೆ ಇಂದು ತೆರೆ

Exit mobile version